ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಚಿತ್ರದುರ್ಗ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆಯುವ ಚುನಾವಣೆಯಲ್ಲಿ ಅವಿರೋಧ ಆಯ್ಕೆ ಸಾಧ್ಯತೆಗಳು ಗೋಚರಿಸಿವೆ.ಸಚಿವ ಡಿ.ಸುಧಾಕರ್ ನಿಧನದಿಂದಾಗಿ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು ಸದ್ಯಕ್ಕೆ ಶಾಸಕ ಟಿ.ರಘುಮೂರ್ತಿ ಹೊರತು ಪಡಿಸಿ ಬೇರೆ ಆಕಾಂಕ್ಷಿಗಳು ಗೋಚರಿಸುತ್ತಿಲ್ಲ. ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಗಿರೀಶ್ ಅಧ್ಯಕ್ಷ ಸ್ಥಾನದ ಸಹಜ ಆಕಾಂಕ್ಷಿಯಾಗಿದ್ದರು. ಬಹುತೇಕ ನಿರ್ದೇಶಕರು ರಘುಮೂರ್ತಿ ಪರವಾಗಿ ತಮ್ಮ ಆಸಕ್ತಿ ತೋರಿದ್ದರಿಂದ ಗಿರೀಶ್ ಹಿಂದೆ ಸರಿಯಲಿದ್ದಾರೆ. ಮೂಲಗಳ ಪ್ರಕಾರ ರಘುಮೂರ್ತಿ ಒಬ್ಬರೇ ನಾಮ ಪತ್ರ ಸಲ್ಲಿಸಲಿದ್ದಾರೆ ಎನ್ನಲಾಗಿದೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನಿರ್ದೇಶಕರು ಸೇರಿದಂತೆ ಒಟ್ಟು 14ಸ್ಥಾನಗಳಿವೆ. ಇದರಲ್ಲಿ ಶಾಸಕ ರಘುಮೂರ್ತಿ ಅವರ ಕಡೆಗೆ ಒಲವು ಹೆಚ್ಚಿದೆ ಎನ್ನಲಾಗಿದೆ. ಎಲ್ಲರೊಂದಿಗೂ ವಿಶ್ವಾಸದಿಂದಿರುವ ರಘುಮೂರ್ತಿ ಗುರುವಾರವೇ ಒಂದು ಸುತ್ತಿನ ಮಾತುಕತೆ ನಡೆಸಿ ನಡೆಯುವ ಅಧ್ಯಕ್ಷರ ಚುನಾವಣೆ ಸಂಬಂಧ ಸಹಕಾರ ಕೋರಿ ಎಲ್ಲರ ವಿಶ್ವಾಸ ಗಳಿಸುವ ಕೆಲಸ ಮಾಡಿದ್ದಾರೆ ಎನ್ನಲಾಗಿದೆ.ಬಹುತೇಕ ನಿರ್ದೇಶಕರು ಸಚಿವ ಡಿ.ಸುಧಾಕರ್ ಬಳಗದಲ್ಲೆ ಇದ್ದವರಾದ್ದರಿಂದ ಶಾಸಕ ರಘುಮೂರ್ತಿ ಅವರ ಬಗ್ಗೆಯೂ ಉತ್ತಮ ಅಭಿಪ್ರಾಯ ಹೊಂದಿದ್ದಾರೆ. ಹಾಗಾಗಿ ಅವಿರೋಧ ಆಯ್ಕೆ ಸಲೀಸು ಎನ್ನಲಾಗುತ್ತಿದೆ. ಚಳ್ಳಕೆರೆ ತಾಲೂಕಿನಿಂದ ಡಿಸಿಸಿ ಬ್ಯಾಂಕ್‌ಗೆ ನಿರ್ದೇಶಕರಾಗಿ ಆಯ್ಕೆ ಆಗಿ ಬರುತ್ತಿದ್ದ ಡಿ.ಸುಧಾಕರ್ ಅಧ್ಯಕ್ಷ ಸ್ಥಾನವನ್ನು ನಿರಂತರವಾಗಿ ಕಾಯ್ದಕೊಂಡು ಬಂದಿದ್ದರು.
ರಾಜ್ಯ ಸಚಿವ ಸಂಪುಟ ಪುನರ್ ರಚನೆ ಹಂತದಲ್ಲಿದ್ದು ಟಿ.ರಘುಮೂರ್ತಿ ಅವರು ಸಚಿವರಾಗುವ ಸಾಧ್ಯತೆಗಳು ಹೆಚ್ಚಳವಾಗಿವೆ. ರಘುಮೂರ್ತಿ ಸಚಿವರಾದ್ದಲ್ಲಿ ಬ್ಯಾಂಕ್ ಅಭಿವೃದ್ಧಿಗೆ ರಾಜ್ಯ ಸರ್ಕಾರದ ನೆರವು ದೊರಕಲಿದೆ. ಹಾಗಾಗಿ ಈ ಅವಕಾಶವ ಕೈ ತಪ್ಪಿಸಿಕೊಳ್ಳುವುದು ಬೇಡವೆಂಬ ಅಭಿಪ್ರಾಯ ನಿರ್ದೇಶಕರುಗಳದ್ದಾಗಿದೆ.
ಸಚಿವ ಸುಧಾಕರ್ ಅವರು ಹಿರಿಯೂರು ವಿಧಾನಸಭೆ ಕ್ಷೇತ್ರ ಪ್ರತಿನಿಧಿಸುತ್ತಿದ್ದರೂ ಡಿಸಿಸಿ ಬ್ಯಾಂಕ್‌ಗೆ ಮಾತ್ರ ಚಳ್ಳಕೆರೆ ತಾಲೂಕಿನಿಂದ ಪ್ರವೇಶ ಪಡೆಯುತ್ತಿದ್ದರು. ಚಳ್ಳಕೆರೆ ವಿಧಾನಸಭೆ ಕ್ಷೇತ್ರ ಪ್ರತಿನಿಧಿಸುವ ಶಾಸಕ ರಘುಮೂರ್ತಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗುವುದು ಖಚಿತವಾಗಿರವುದರಿಂದ ಚಳ್ಳಕೆರೆ ತಾಲೂಕು ಮತ್ತೆ ಮುನ್ನಲೆಗೆ ಬಂದಿದೆ.