ಬಸ್ ನಿಲ್ದಾಣ ಸ್ಥಳಾಂತರಿಸದಂತೆ ಪ್ರತಿಭಟನೆ

| Published : Aug 02 2024, 12:53 AM IST

ಸಾರಾಂಶ

ಬಸ್ ನಿಲ್ದಾಣವನ್ನು ಬೇರೆಡೆಗೆ ಸ್ಥಳಾಂತರಿಸದೇ ಈಗಿರುವ ಸ್ಥಳದಲ್ಲೇ ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿ ಪ್ರಗತಿಪರ ಸಂಘಟನೆಯ ಒಕ್ಕೂಟದವರು ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮಮತಾ ಎಂ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರು ಬಸ್ ನಿಲ್ದಾಣವನ್ನು ಬೇರೆಡೆಗೆ ಸ್ಥಳಾಂತರಿಸದೇ ಈಗಿರುವ ಸ್ಥಳದಲ್ಲೇ ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿ ಪ್ರಗತಿಪರ ಸಂಘಟನೆಯ ಒಕ್ಕೂಟದವರು ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮಮತಾ ಎಂ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರಗತಿಪರ ಸಂಘಟನೆಯ ಮುಖಂಡರಾದ ಚಂದ್ರು, ಭೋಜೇಗೌಡ, ಭೋಗಮಲ್ಲೇಶ್, ಸ್ವಾಮಿಗೌಡ, ತೀರ್ಥಂಕರ್, ಗಿರಿಯಪ್ಪ ಶೆಟ್ಟಿ, ಪುರಸಭೆ ಸದಸ್ಯರಾದ ಅಶೋಕ್, ಜಮಾಲ್ ಸೇರಿದಂತೆ ಇನ್ನಿತರರು ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸಂಘಟನೆಯ ಪ್ರಮುಖರು ಬೇಲೂರು ತಾಲೂಕನ್ನು ಅಭಿವೃದ್ಧಿಪಡಿಸುತ್ತೇನೆಂದು ಶಾಸಕರು ಸಭೆ ಸಮಾರಂಭಗಳಲ್ಲಿ ಹೇಳುತ್ತಾರೆ. ಆದರೆ ಬಸ್ ನಿಲ್ದಾಣವನ್ನು ನಗರದ ಹೊರಭಾಗದಲ್ಲಿ ನಿರ್ಮಾಣ ಮಾಡಿದರೆ ಅಭಿವೃದ್ಧಿ ಆಗಲ್ಲ. ಈಗಾಗಲೇ ವರ್ತಕರು ಸಹ ರಸ್ತೆ ಅಗಲೀಕರಣ ಮಾಡುವ ಸಂದರ್ಭದಲ್ಲಿ ರಸ್ತೆಗೆ ಎಷ್ಟು ಜಾಗ ಅವಶ್ಯಕತೆ ಇದೆ ಅಷ್ಟನ್ನು ಪಡೆದು ಪರಿಹಾರ ನೀಡಿದರೆ ನಾವು ಸಹ ಅಗಲೀಕರಣಕ್ಕೆ ಸಹಕಾರ ನೀಡುತ್ತೇವೆ ಎಂದು ತಿಳಿಸುತ್ತಾರೆ. ಪಿಡಬ್ಲ್ಯೂಡಿ ಸಚಿವರಿಗೆ ಬಸ್ ನಿಲ್ದಾಣ ಅಗಲೀಕರಣ ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಪತ್ರ ನೀಡುವ ಮೂಲಕ ಕಣ್ಣೊರೆಸುವ ತಂತ್ರವನ್ನು ಶಾಸಕರು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಜನರಿಗೆ ಮಣ್ಣೆರೆಚುವ ಕೆಲಸ ಮಾಡುವ ಅವಶ್ಯಕತೆ ಇಲ್ಲ. ನಿಮಗೆ ತಾಲೂಕಿನ ಸಮಗ್ರ ಅಭಿವೃದ್ಧಿ ಮಾಡಬೇಕೆಂದು ಮನಸಿದ್ದರೆ ನಿಮ್ಮ ಹಿಂಬಾಲಕರಿಂದ ಜೈಕಾರ ಹಾಕಿಸುವುದನ್ನು ಬಿಟ್ಟು ಅಭಿವೃದ್ಧಿ ಕಡೆ ಮುಖ ಮಾಡಿ. ನಾವು ಸಹ ನಿಮಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ. ತಾಲೂಕಿನ ಸಮಗ್ರ ಅಭಿವೃದ್ಧಿಗೆ ಪಕ್ಷಬೇಧ ಮರೆತು ಪ್ರಗತಿಪರ ಸಂಘಟನೆಗಳನ್ನು ಜೊತೆಯಲ್ಲಿಟ್ಟುಕೊಂಡು ಕೆಲಸ ಮಾಡಿದರೆ ನಾವು ಸಂಪೂರ್ಣ ನಿಮಗೆ ಸಹಕಾರ ನೀಡುತ್ತೇವೆ. ಶಾಸಕರಿಗೆ ಯಾವುದೇ ಕಾರಣಕ್ಕೂ ಬಸ್ ನಿಲ್ದಾಣವನ್ನು ಬದಲಿಸಲು ಅವಕಾಶ ನೀಡುವುದಿಲ್ಲ. ಈಗಿರುವಂತಹ ಸ್ಥಳದಲ್ಲೇ ಪಕ್ಕದ ಜಾಗವನ್ನು ಪಡೆಯುವ ಮೂಲಕ ನಾವು ಸಹ ನಿಮ್ಮ ಜೊತೆ ಬಂದು ನಿಮ್ಮ ಯಾವುದೇ ಹೋರಾಟಕ್ಕೂ ಕೈಜೋಡಿಸುತ್ತೇವೆ. ಅದನ್ನು ಬಿಟ್ಟು ತಮ್ಮ ಮಾತೇ ನಡೆಯಬೇಕೆಂದು, ನನ್ನಿಂದಲೇ ಎಲ್ಲವೂ ಸಾಧ್ಯ ಎಂಬ ಮನೋಭಾವ ಬಿಟ್ಟು ಸಮಗ್ರ ಅಭಿವೃದ್ಧಿಗೆ ಮುಂದಾಗಬೇಕು ಎಂದು ಮನವಿ ಮಾಡಿದರು.

ನಾವು ಇಂದು ತಹಸೀಲ್ದಾರ್, ಪುರಸಭೆ, ತಾಪಂ ಅಧಿಕಾರಿಗಳಿಗೆ ಮನವಿ ಮಾಡುವ ಮೂಲಕ ತಹಸೀಲ್ದಾರ್ ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ನಾವೆಲ್ಲಾ ಒಗ್ಗೂಡಿ ಬಸ್ ನಿಲ್ದಾಣ ಅಭಿವೃದ್ದಿಗಾಗಿ ನಾವು ಯಾವುದೇ ಹೋರಾಟಕ್ಕೆ ಶತಸಿದ್ಧ ಎಂದರು.

ಈ ಸಂದರ್ಭದಲ್ಲಿ ಕರವೇ ಖಾದರ್, ಜಯಪ್ರಕಾಶ್, ಪ್ರಸನ್ನ, ತಾರನಾಥ್, ಅರುಣ್, ಸೌಭಾಗ್ಯ ಆಂತೋಣಿ, ಸತ್ಯನಾರಾಯಣ್, ಗಿರೀಶ್, ಸುಬ್ರಹ್ಮಣ್ಯ, ಯೊಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ಶ್ರೀನಿವಾಸ್, ವೆಂಕಟೇಶ್ ಹಾಗೂ ರೈತ ಸಂಘದ ಮುಖಂಡರು ಹಾಗೂ ವರ್ತಕರು ಹಾಜರಿದ್ದರು.