ಸಾರಾಂಶ
ರಾಣಿಬೆನ್ನೂರು: ತುಂಗಭದ್ರಾ ನದಿಗೆ ಭದ್ರಾ ಡ್ಯಾಂನಿಂದ 1 ಲಕ್ಷಕ್ಕೂ ಅಧಿಕ ಕ್ಯುಸೆಕ್ ನೀರು ಹರಿಬಿಟ್ಟ ಪರಿಣಾಮ ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ಗುರುವಾರ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನ ಕುಮಾರಪಟ್ಟಣ, ಮುಷ್ಟೂರ, ಮುದೇನೂರ, ಹರನಗಿರಿ, ಮೆಡ್ಲೇರಿ, ಊದಗಟ್ಟಿ, ಬೇಲೂರ, ಹೀಲದಹಳ್ಳಿ, ಹಿರೇಬಿದರಿ, ಐರಣಿ, ಚೌಡಯ್ಯದಾನಪುರ, ಚಂದಾಪುರ, ಚಿಕ್ಕಕುರುವತ್ತಿ ಸೇರಿದಂತೆ ಮತ್ತಿತರ ನದಿ ತೀರದ ಗ್ರಾಮಗಳ ಬಳಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗುತ್ತಲೇ ಇರುವುದರಿಂದ ನದಿ ತೀರದ ಗ್ರಾಮಸ್ಥರು ಪ್ರವಾಹದ ಭೀತಿಯಲ್ಲಿ ಸಿಲುಕಿದ್ದಾರೆ. ಪ್ರವಾಹದದಿಂದಾಗಿ ಹತ್ತಿ, ಮೆಕ್ಕೆಜೋಳ ಹಾಗೂ ತರಕಾರಿ. ಅಡಕೆ, ಭತ್ತ ಸೇರಿದಂತೆ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ರೈತರು ವಿವಿಧ ಬೆಳೆಗಳು ಸಂಪೂರ್ಣ ಜಲಾವೃತಗೊಂಡಿವೆ. ಇದರಿಂದ ಅನ್ನದಾತರು ಸಂಪೂರ್ಣ ಸಂಕಷ್ಟವನ್ನು ಎದುರಿಸುವಂತಾಗಿದೆ. ಹತ್ತಿ ಹಾಗೂ ಮೆಕ್ಕೆ ಜೋಳ, ತರಕಾರಿ ಸೇರಿದಂತೆ ಹಲವಾರು ಬೆಳೆಗಳು ಜಲಾವೃತಗೊಂಡಿರುವುದು ರೈತರನ್ನು ಆರ್ಥಿಕವಾಗಿ ಕುಗ್ಗಿಸಿದಂತಾಗಿದೆ. ತಾಲೂಕಿನ ಚೌಡಯ್ಯದಾನಪುರ ಗ್ರಾಮದಿಂದ ರಾಣಿಬೆನ್ನೂರು ಹಾಗೂ ಗುತ್ತಲ ಮಾರ್ಗವಾಗಿ ಸಂಪರ್ಕಿಸುವ ರಸ್ತೆ ಸಂಪೂರ್ಣ ಕಡಿತಗೊಂಡಿದೆ. ನದಿ ತಟದಲ್ಲಿದ್ದ ಶರಣ ಶ್ರೀ ಅಂಬಿಗರಚೌಡಯ್ಯನವರ ಐಕ್ಯ ಮಂಟಪ ಸಂಪೂರ್ಣ ಮುಳಗಡೆಯಾಗಿದೆ. ಇನ್ನೊಂದೆಡೆ ಚಿಕ್ಕಕುರವತ್ತಿ ರಸ್ತೆಯ ಚಿಕ್ಕದಾದ ಸೇತುವೆ ಸಂಪೂರ್ಣ ಮುಳಗಡೆ ಹೊಂದಿದ್ದು ಅಲ್ಲಿಯೂ ಸಹ ರಸ್ತೆ ಸಂಪರ್ಕ ಕಡಿತಗೊಂಡಿದೆ ಅದೇ ಗ್ರಾಮದ ಬಸ್ ನಿಲ್ದಾಣ ಕೂಡ ಜಲಾವೃತಗೊಂಡಿದೆ. ನೀರಿನ ಪ್ರಮಾಣ ಅಧಿಕವಾಗಿ ಮುಂದುವರೆದರೆ ಶುಕ್ರವಾರಕ್ಕೆ ನದಿ ತೀರದ ಜನತೆ ಮತ್ತಷ್ಟು ಸಂಕಷ್ಟವನ್ನು ಅನುಭವಿಸಬೇಕಾಗುತ್ತದೆ.