ಕಾಡಸಿದ್ದೇಶ್ವರ ಶ್ರೀಗಳಿಗೆ ನಿರ್ಬಂಧ ಖಂಡಿಸಿ ಬೃಹತ್ ಪ್ರತಿಭಟನೆ

| Published : Nov 16 2025, 02:30 AM IST

ಕಾಡಸಿದ್ದೇಶ್ವರ ಶ್ರೀಗಳಿಗೆ ನಿರ್ಬಂಧ ಖಂಡಿಸಿ ಬೃಹತ್ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳಿಗೆ ವಿಜಯಪುರ, ಬಾಗಲಕೋಟೆ ಹಾಗೂ ಧಾರವಾಡ ಜಿಲ್ಲೆಗೆ ನಿರ್ಬಂಧ ಹೇರಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಶನಿವಾರ ಗದಗ ನಗರದಲ್ಲಿ ಪಾದಯಾತ್ರೆ ಮೂಲಕ ಬೃಹತ್ ಪ್ರತಿಭಟನೆ ನಡೆಸಿ, ಚೆನ್ನಮ್ಮ ಸರ್ಕಲ್‌ನಿಂದ ಮುಳಗುಂದ ನಾಕಾ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಡಿಸಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಗದಗ: ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳಿಗೆ ವಿಜಯಪುರ, ಬಾಗಲಕೋಟೆ ಹಾಗೂ ಧಾರವಾಡ ಜಿಲ್ಲೆಗೆ ನಿರ್ಬಂಧ ಹೇರಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಶನಿವಾರ ಗದಗ ನಗರದಲ್ಲಿ ಪಾದಯಾತ್ರೆ ಮೂಲಕ ಬೃಹತ್ ಪ್ರತಿಭಟನೆ ನಡೆಸಿ, ಚೆನ್ನಮ್ಮ ಸರ್ಕಲ್‌ನಿಂದ ಮುಳಗುಂದ ನಾಕಾ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಡಿಸಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ನರಗುಂದ ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಕಾಡಸಿದ್ದೇಶ್ವರ ಶ್ರೀಗಳು ರೈತರಿಗೆ ಸಾವಯವ ಕೃಷಿಯಲ್ಲಿ ಯಾವ ರೀತಿ ಸುಧಾರಣೆ ತರಬೇಕು ಎನ್ನುವುದನ್ನು ತಿಳಿಸುತ್ತಿದ್ದಾರೆ. ಗರ್ಭಿಣಿಯರಿಗೆ ಸಂಸ್ಕಾರದ ಪಾಠ, ಯುವಕರಿಗೆ ಸಂಸ್ಕೃತಿಯ ನೀತಿ ಪಾಠಗಳನ್ನು ಶ್ರೀಗಳು ಹೇಳುತ್ತಾರೆ. ಸರ್ಕಾರ ಮಾಡದ ಕೆಲಸವನ್ನು ಶ್ರೀಗಳು ಮಾಡುತ್ತಿದ್ದಾರೆ. ಅವರು ಹಿಂದೂತ್ವವಾದಿ ಎನ್ನುವ ಒಂದೇ ಒಂದು ಕಾರಣಕ್ಕೆ ಅವರಿಗೆ ನಿರ್ಬಂಧ ಹೇರಿದ್ದು ಸರಿಯಲ್ಲ ಎಂದು ಹೇಳಿದರು.ಸರ್ಕಾರ ಅವರಿಗೆ ನಿರ್ಬಂಧ ಹೇರಿರಬಹುದು. ಆದರೆ, ಭಕ್ತರ ಮನಸ್ಸಿನಲ್ಲಿ ಅಚ್ಚರಿಯದೇ ಉಳಿದಿದ್ದಾರೆ. ಅವರ ಮೇಲೆ ನಿರ್ಬಂಧ ತೆರವುಗೊಳಿಸಿ ಮುಕ್ತ ವ್ಯವಸ್ಥೆ ಕಲ್ಪಿಸಬೇಕು. ದಬ್ಬಾಳಿಕೆಯಿಂದ ರಾಜ್ಯ ಆಳುವುದು ಸರಿಯಲ್ಲ. ಅಧಿಕಾರ ಶಾಶ್ವತವಲ್ಲ. ಮುಖ್ಯಮಂತ್ರಿಗಳೇ ನೀವು ಅವರ ಮಠಕ್ಕೆ ಒಮ್ಮೆ ಹೋಗಿ ನೋಡಿ, ಆಗ ನೀವು ಮಾಡಿರುವುದು ತಪ್ಪು ಎಂದು ನಿಮಗೆ ಅನ್ನಿಸುತ್ತದೆ ಎಂದರು.

ಪ್ರಶಾಂತ ಮಹಾರಾಜರು ಮಾತನಾಡಿ, ಸನಾತನ ಧರ್ಮದ ರಕ್ಷಣೆಯನ್ನು ಕಾಡಸಿದ್ದೇಶ್ವರ ಶ್ರೀಗಳು ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಅವರಿಗೆ ನಿರ್ಬಂಧ ಹೇರಲಾಗುತ್ತಿದೆ. ಸ್ವಾಮೀಜಿಗಳಿಗೆ ನಿರ್ಬಂಧ ಹೇರುವ ದುಷ್ಟ ಕಾರ್ಯವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಹಿಂದೆ ನಮ್ಮನ್ನು ಹಲವು ದಶಕಗಳ ಕಾಲ ಆಳಿದ ಮೊಘಲರು, ಡಚ್ಚರು, ಬ್ರಿಟೀಷರು ನಮ್ಮ ಧರ್ಮಕ್ಕೆ ಏನೂ ಮಾಡಲಾಗಲಿಲ್ಲ. ಕೇವಲ ಒಂದು ಕಾಂಗ್ರೆಸ್ ಸರ್ಕಾರ ಏನು ಮಾಡಲು ಸಾಧ್ಯ? ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ವಿಜಯಪುರದ ಕೈವಲ್ಯಕುಟೀರದ ಪ್ರಣವಪ್ರಕಾಶ ಮಹಾರಾಜರು, ಕನಕನಾಳದ ಗಿರೀಶಾನಂದ ಮಹಾರಾಜರು, ಹಂಸನೂರಿನ ಅಭಿನವ ಬಸವರಾಜೇಂದ್ರ ಸ್ವಾಮೀಜಿಗಳು, ಕನ್ನೂರಿನ ಗಿರಿಮಲ್ಲೇಶ್ವರ ಮಹಾರಾಜರು, ಕನ್ನೂರಿನ ಸದಾಶಿವ ಮಹಾರಾಜರು, ಸಿದ್ದಾಪುರದ ಅರವಿಂದ ಮಹಾರಾಜರು, ಬಸವನಬಾಗೇವಾಡಿಯ ಅಭಿಯಾನಂದ ಮಹಾರಾಜರು, ಲಿಂಗದಾಳದ ಶ್ರೀ ಚೆನ್ನಮಲ್ಲಿಕಾರ್ಜುನ ಮಹಾರಾಜರು, ವಸಂತಗೌಡ ಪೊಲೀಸ್‌ಪಾಟೀಲ, ಪ್ರದೀಪ ನವಲಗುಂದ, ರಾಜು ಕುರಡಗಿ, ವಿಪ ಸದಸ್ಯ ಎಸ್.ವಿ. ಸಂಕನೂರ, ವಿಜಯಕುಮಾರ ಗಡ್ಡಿ, ರವಿ ವಗ್ಗನವರ ಭಾಗವಹಿಸಿದ್ದರು.

ಪಾಕಿಸ್ತಾನ್ ಜಿಂದಾಬಾದ್‌ ಎಂದವರಿಗೆ ಬೆಲೆ: ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡಿದವರಿಗೆ, ಪಾಕಿಸ್ತಾನ ಜಿಂದಾಬಾದ್ ಅಂದವರಿಗೆ ಈ ರಾಜ್ಯದಲ್ಲಿ ಬೆಲೆ ಇದೆ, ಸನಾತನ ಧರ್ಮದ ಬಗ್ಗೆ ಮಾತನಾಡಿದರೆ, ದೇಶ ರಕ್ಷಕರಾದರೆ ಅವರಿಗೆ ನಿರ್ಬಂಧ ಹೇರಲಾಗುತ್ತದೆ. ಹಿಂದುತ್ವ ವಿರೋಧಿ ಧೋರಣೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿಯೇ ಕಾಂಗ್ರೆಸ್, ಬಿಹಾರದಲ್ಲಿ ಅತ್ಯಂತ ಹೀನಾಯವಾಗಿ ಸೋತಿದೆ. ಅದೇ ಮುಂದೆ ನಮ್ಮ ರಾಜ್ಯದಲ್ಲಿಯೂ ಆಗಲಿದೆ ಎಂದು ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ ಹೇಳಿದರು.