ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಕೊಡಗು ಜಿಲ್ಲಾ ಸಮಿತಿ ಮಡಿಕೇರಿಯಲ್ಲಿ ಗುರುವಾರ ಪ್ರತಿಭಟನೆ ನಡೆಸಿತು.ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಸಂಘದ ಪ್ರಮುಖರು ಹಾಗೂ ಹೊರಗುತ್ತಿಗೆ ನೌಕರರು ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಹನುಮೇ ಗೌಡ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಪರಿಶಿಷ್ಟ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಕಳೆದ 15-20 ವಷಗಳಿಂದ ನೌಕರರು ಕಡಿಮೆ ಸಂಬಳಕ್ಕೆ ಯಾವುದೇ ಭದ್ರತೆ ಇಲ್ಲದೆ ದುಡಿಯುತ್ತಿದ್ದಾರೆ. ತಮ್ಮ ಕುಟುಂಬ, ಮಕ್ಕಳನ್ನು ಮರೆತು ಹಾಸ್ಟೆಲ್ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ನೋಡಿಕೊಂಡು ನಿರಂತರವಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ. ಆದರೆ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸದೆ ಇರುವುದು ಖಂಡನೀಯ ಎಂದರು.ಕನಿಷ್ಠ ವೇತನ ರು.31 ಸಾವಿರ ಪಾವತಿ ಮಾಡಬೇಕು, ನೇರವಾಗಿ ಇಲಾಖೆಯಿಂದ ವೇತನ ನೀಡಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಸಿಬ್ಬಂದಿ ಸಂಖ್ಯೆ ಕಡಿತ ಆದೇಶ ರದ್ದು ಮಾಡಬೇಕು, ಜೀತ ಪದ್ಧತಿಯಿಂದ ಮುಕ್ತಿಗೊಳಿಸಬೇಕು, ಬೀದರ್ ಮಾದರಿಯ ಸಹಕಾರ ಸಂಘವನ್ನು ಎಲ್ಲಾ ಜಿಲ್ಲೆಗಳಿಗೆ ವಿಸ್ತರಣೆ ಮಾಡಬೇಕು, ವಾರದ ರಜೆ, ಬಾಕಿ ಸಂಬಳ, ಹೆರಿಗೆ ರಜೆಯ ವೇತನ ನೀಡಬೇಕು, ಕೆಲಸದ ಸಮಯ ನಿಗದಿಪಡಿಸಬೇಕು, ಇಎಸ್‌ಐ ಮತ್ತು ಪಿಎಫ್ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ತಕ್ಷಣ ಈಡೇರಿಸುವಂತೆ ಒತ್ತಾಯಿಸಿದರು.
ಸರ್ಕಾರ ನಿರ್ಲಕ್ಷ್ಯ ವಹಿಸಿದರೆ ಮುಂದಿನ ಬಜೆಟ್ ಅಧಿವೇಶನದ ಸಂದರ್ಭ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.ಸಮಿತಿ ಜಿಲ್ಲಾಧ್ಯಕ್ಷ ಜಿ.ಕೆ.ದಿನೇಶ್, ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಯೋಗೇಶ್, ಮುಖಂಡರಾದ ಎಸ್.ಟಿ.ಸೌಭಾಗ್ಯ, ಪ್ರೇಮ, ನೇತ್ರ, ಪ್ರೇಮ, ತಾಲೂಕು ಮುಖಂಡರಾದ ವಸಂತಿ, ರೂಪ, ಮಹೇಶ್, ಭಾಗ್ಯಮ್ಮ, ಭಾನುಮತಿ, ಪುಷ್ಪ, ರತ್ನಮ್ಮ, ಜ್ಯೋತಿ ಸೇರಿದಂತೆ ಪದಾಧಿಕಾರಿಗಳು ಹಾಗೂ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನಾಕಾರು ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.