ಸಾರಾಂಶ
ತಾಲೂಕಿನ ಸಂತಿಬಸ್ತವಾಡ ಗ್ರಾಮದ ಮಸೀದಿಯಲ್ಲಿದ್ದ ಕುರಾನ್ ಧರ್ಮಗ್ರಂಥವನ್ನು ಹೊತ್ತೊಯ್ದು ಸುಟ್ಟಿರುವ ಪ್ರಕರಣವನ್ನು ತೀವ್ರವಾಗಿ ಖಂಡಿಸಿ ಮುಸ್ಲಿಮ ಸಮಾಜದವರು ಧರಣಿ ಸತ್ಯಾಗ್ರಹ ನಡೆಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ತಾಲೂಕಿನ ಸಂತಿಬಸ್ತವಾಡ ಗ್ರಾಮದ ಮಸೀದಿಯಲ್ಲಿದ್ದ ಕುರಾನ್ ಧರ್ಮಗ್ರಂಥವನ್ನು ಹೊತ್ತೊಯ್ದು ಸುಟ್ಟಿರುವ ಪ್ರಕರಣವನ್ನು ತೀವ್ರವಾಗಿ ಖಂಡಿಸಿ ಮುಸ್ಲಿಮ ಸಮಾಜದವರು ಧರಣಿ ಸತ್ಯಾಗ್ರಹ ನಡೆಸಿದರು.ರಾಜ್ಯದಲ್ಲಿ ಎಲ್ಲಿಯೂ ಈ ತರದ ಘಟನೆ ನಡೆದಿಲ್ಲ. ಆದರೆ, ಬೆಳಗಾವಿಯಲ್ಲಿ ಮಾತ್ರ ಇಂತಹ ಘಟನೆ ನಡೆದಿದೆ. ಈ ಘಟನೆ ಹಿಂದೆ ಕಾಣದ ಕೈಗಳ ಕೈವಾಡ ಅಡಗಿದೆ. ಈ ಘಟನೆ ಯಾರು ಮಾಡಿದ್ದಾರೆ? ಅವರಿಗೆ ಕುಮ್ಮಕ್ಕು ಕೊಟ್ಟವರು ಯಾರು? ಎಂಬುವುದನ್ನು ಪೊಲೀಸ್ ಇಲಾಖೆ ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿದರು.
ಭಾನುವಾರ ಮಧ್ಯಾಹ್ನ 2 ಗಂಟೆವರೆಗೆ ಮಸೀದಿಯಲ್ಲಿ ಸಿಸಿಟಿವಿ ಕ್ಯಾಮೆರಾ ಇತ್ತು. ಆ ವೇಳೆ ಕುರಾನ್ ಗ್ರಂಥ ಮಸೀದಿಯಲ್ಲೇ ಇತ್ತು. ಸಿಸಿಟಿವಿ ಕ್ಯಾಮೆರಾ ದುರಸ್ತಿಗೆ ತೆಗೆದುಕೊಂಡ ಹೋದ ಬಳಿಕ ಈ ಘಟನೆ ನಡೆದಿದೆ. ಸೋಮವಾರ ಬೆಳಗಿನ ಜಾವ ಈ ಘಟನೆ ಬೆಳಕಿಗೆ ಬಂದಿದೆ. ನಮ್ಮ ಪವಿತ್ರ ಧರ್ಮಗ್ರಂಥವನ್ನು ಈ ರೀತಿ ಕದ್ದೊಯ್ದು ಸುಟ್ಟು ಹಾಕಿರುವುದು ಖಂಡನೀಯ. ಈ ಘಟನೆ ಇಡೀ ಸಮಾಜವನ್ನು ಕೆರಳಿಸುವಂತೆ ಮಾಡಿದೆ. ನಮ್ಮ ಭಾವನೆಗಳೊಂದಿಗೆ ಚೆಲ್ಲಾಟವಾಡಲಾಗಿದೆ. ಇದನ್ನು ನಾವು ಯಾರೂ ಸಹಿಸಿಕೊಳ್ಳುವುದಿಲ್ಲ. ನಮ್ಮೆಲ್ಲರ ರಕ್ತ ಕುದಿಯುತ್ತಿದೆ. ನಮಗೆ ನ್ಯಾಯ ದೊರಕಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಈ ಘಟನೆ ನಡೆದರೂ ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿ, ಸಮಾಜಕ್ಕೆ ಸಾಂತ್ವನ ಹೇಳುವ ಕೆಲಸವನ್ನು ಮಾಡಿಲ್ಲ. ಈವರೆಗೂ ಜನಪ್ರತಿನಿಧಿಗಳ್ಯಾರು ಇತ್ತ ಕಡೆ ತಲೆ ಹಾಕಿಲ್ಲ. ಕಾಂಗ್ರೆಸ್‌ಗೆ ಮುಸ್ಲಿಮರ ಓಟ್‌ಗಳು ಮಾತ್ರ ಬೇಕೇ? ನಾವು ಓಟ್ ಬ್ಯಾಂಕ್‌ಗೆ ಮಾತ್ರ ಸೀಮಿತವೇ? ನಮಗೆ ನ್ಯಾಯ ಸಿಗುವವರೆಗೂ ನಾವು ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಪೊಲೀಸರು ತಪ್ಪಿತಸ್ಥ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ, ಅವರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಅವರ ವಿರುದ್ಧ ಕೋಮು ಪ್ರಚೋದನೆ ಮೊಕದ್ದಮೆ ದಾಖಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.