ನಗರದ ರಸ್ತೆ, ಚರಂಡಿ, ಸ್ವಚ್ಛತೆ ಇತರ ಮೂಲಭೂತ ಸೌಕರ್ಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ

| Published : Sep 06 2024, 01:14 AM IST / Updated: Sep 06 2024, 05:04 AM IST

ಸಾರಾಂಶ

ನಗರದ ಒಂದನೇ ವಾರ್ಡ್ ಮೆಹಬೂಬ ನಗರದ ರಸ್ತೆ, ಚರಂಡಿ, ಸ್ವಚ್ಛತೆ ಇತರ ಮೂಲಭೂತ ಸೌಕರ್ಯಕ್ಕಾಗಿ ಆಗ್ರಹಿಸಿಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ ಪಕ್ಷದ ವತಿಯಿಂದ ನಗರಸಭೆ ಮುಂದೆ ಪ್ರತಿಭಟನೆ ನಡೆಸಲಾಯಿತು.

 ಕೊಪ್ಪಳ : ನಗರದ ಒಂದನೇ ವಾರ್ಡ್ ಮೆಹಬೂಬ ನಗರದ ರಸ್ತೆ, ಚರಂಡಿ, ಸ್ವಚ್ಛತೆ ಇತರ ಮೂಲಭೂತ ಸೌಕರ್ಯಕ್ಕಾಗಿ ಆಗ್ರಹಿಸಿ ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ ಪಕ್ಷದ ವತಿಯಿಂದ ನಗರಸಭೆ ಮುಂದೆ ಪ್ರತಿಭಟನೆ ನಡೆಸಲಾಯಿತು.

ಪಕ್ಷದ ಜಿಲ್ಲಾ ಮುಖಂಡ ಶರಣು ಗಡ್ಡಿ ಮಾತನಾಡಿ, ಮೆಹಬೂಬ ನಗರದಲ್ಲಿ ಕಳೆದ 15 ವರ್ಷಗಳಿಂದ ಆಶ್ರಯ ನಿವೇಶನಗಳಲ್ಲಿ ಮನೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಈ ನಗರಕ್ಕೆ ಕನಿಷ್ಠ ಮೂಲಭೂತ ಸೌಕರ್ಯ ಇಲ್ಲದಿರುವುದು ಅತ್ಯಂತ ನೋವಿನ ಸಂಗತಿ. ಮಳೆ ಬಂದರೆ ಸಾಕು ಚರಂಡಿ ನೀರು, ರಸ್ತೆ ಮೇಲೆ ಬಂದು ಓಡಾಡೋದಕ್ಕೂ ಆಗುವುದಿಲ್ಲ. ಮಕ್ಕಳು, ವೃದ್ಧರು, ಈ ರಸ್ತೆಯಲ್ಲಿ ಜಾರಿ ಬಿದ್ದು ಕೈಕಾಲು ಮುರಿದುಕೊಂಡು ಆಸ್ಪತ್ರೆ ಸೇರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ನೀರು ಹರಿಯಲು ಯಾವುದೇ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮನೆ ಒಳಗಡೆ ನೀರು ನುಗ್ಗಿ ಅನಾಹುತ ಉಂಟಾಗುತ್ತದೆ. ಇನ್ನು ಸೊಳ್ಳೆ ಹಾವಳಿಯಿಂದ ಡೆಂಘೀ ಜ್ವರ ಮುಂತಾದ ಸಾಂಕ್ರಾಮಿಕ ರೋಗಗಳು ಬಡ ಜನರ ನೆಮ್ಮದಿ ಹಾಳು ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಹಲವಾರು ಬಾರಿ ನಮ್ಮ ನಗರಸಭೆಗೆ ಮನವಿ ಸಲ್ಲಿಸಿದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಕೂಡಲೇ ರಸ್ತೆಗೆ ಡಾಂಬರೀಕರಣ ಮಾಡಬೇಕು, ಚರಂಡಿ ನಿರ್ಮಾಣ ಮಾಡಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು. ಬೀದಿ ದೀಪ ಇಲ್ಲದೆ ಓಣಿಯಲ್ಲಿ ಕತ್ತಲು ಆವರಿಸಿದೆ. ಇಂಥ ಜಾಗದಲ್ಲಿ ದಿನನಿತ್ಯ ಹಾವು, ಚೇಳು, ಕಡಿಸಿಕೊಂಡ ಘಟನೆಗಳು ನಡೆದಿದ್ದು, ನಿವಾಸಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಒತ್ತಾಯಿಸಿದರು.

ಬಳಿಕ ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಶರಣಬಸವ ಪಾಟೀಲ್, ಮಂಗಳೇಶ ರಾಠೋಡ್ ದ್ಯಾಮಣ್ಣ ಡೊಳ್ಳಿನ, ನಗರದ ನಿವಾಸಿಗಳಾದ ಲಲಿತಮ್ಮ, ಲಕ್ಷ್ಮಿ ಜಾಲಗಾರ್, ಬಾನು ನೀಲಗಾರ, ಉಷಾ ಭಂಡಾರಿ, ಸುಮಾ, ಗೌಷಿಯ, ಸಂಗಮ್ಮ, ತುಳಸಮ್ಮ, ಸ್ವಪ್ನ ಮುಂತಾದವರು ಭಾಗವಹಿಸಿದ್ದರು.