ಮಾಲೂರು: ಇಲ್ಲಿನ ತಹಸೀಲ್ದಾರ್‌ ಕಚೇರಿಗೆ ಮುತ್ತಿಗೆ ಹಾಕಿದ ಪ್ರವೀಣ್‌ ಶೆಟ್ಟಿ ಬಣದ ಕರವೇ ಕಾರ್ಯಕರ್ತರು ತಾಲೂಕಿನಲ್ಲಿ ವೃದ್ಧಾಪ್ಯ, ಅಂಗವಿಕಲ, ವಿಧವಾ ವೇತನ ಸೇರಿದಂತೆ ಆದಾಯ ಜಾತಿ ಪತ್ರಗಳನ್ನು ವಿಳಂಬವಾಗಿ ವಿತರಣೆ ಮಾಡುತ್ತಿರುವುದನ್ನು ಖಂಡಿಸಿ ಸಮಸ್ಯೆಗೆ ಸೂಕ್ತ ಪರಿಹಾರ ಕೈಗೊಳ್ಳುವಂತೆ ತಹಸೀಲ್ದಾರ್‌ ಅವರಿಗೆ ಮನವಿ ಮಾಡಿದರು.

ವೇದಿಕೆಯ ಅಧ್ಯಕ್ಷ ದೊಡ್ಡಶಿವಾರ ನಾಣಿ ಅವರು ಮಾತನಾಡಿ, ತಾಲೂಕಿನಾದ್ಯಂತ ಕಳೆದ ನಾಲ್ಕು ತಿಂಗಳಿಂದ ವೃದ್ಧಾಪ್ಯ ವೇತನ ಸೇರಿದಂತೆ ಇತರೆ ವೇತನಗಳು ನಿಂತು ಹೋಗಿದ್ದು, ಈ ಬಗ್ಗೆ ಅಧಿಕಾರಿಗಳು ಸೂಕ್ತ ಉತ್ತರ ನೀಡುತ್ತಿಲ್ಲ. ಸರ್ಕಾರದ ಈ ಮಾಸಿಕ ವೇತನಕ್ಕಾಗಿ ಪ್ರತಿನಿತ್ಯ ವೃದ್ಧರು, ವಿಧವೆಯರು,ಅಂಗವಿಕಲರು ಕಚೇರಿಗೆ ಅಲೆಯುತ್ತಿದ್ದಾರೆ. ಇದನ್ನೇ ನಂಬಿರುವ ಶೋಷಿತರು ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಆರೋಗ್ಯ ಸಮಸ್ಯೆ ಇರುವ ವೃದ್ಧರು ತಮ್ಮ ಔಷಧಿಗಾಗಿ ಇದೇ ವೇತನಕ್ಕೆ ಕಾಯುತ್ತಿರುತ್ತಾರೆ. ಈ ಬಗ್ಗೆ ತಹಸೀಲ್ದಾರ್‌ ಕೊಡಲೇ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಸರ್ಕಾರಿ ಕಚೇರಿಯಲ್ಲಿ ಆದಾಯ ಜಾತಿ ಪತ್ರಕ್ಕಾಗಿ ಸಾಲು ಗಟ್ಟಿ ಜನ ನಿಂತಿರುತ್ತಾರೆ. ಗ್ರಾಮ ಮಟ್ಟದಲ್ಲಿ ಗ್ರಾಮ ಒನ್‌ ನಲ್ಲಿ ಏಕೆ ಜಾತಿ ಅಥವಾ ಆದಾಯ ಪ್ರಮಾಣ ಪತ್ರ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು. ಕೂಡಲೇ ಗ್ರಾಮ ಒನ್‌ ನಲ್ಲಿ ಆದಾಯ ಜಾತಿ ಪ್ರಮಾಣ ಪತ್ರ ವಿತರಿಸುವ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧ್ಯಕ್ಷ ಚಂಬೆ ರಾಜೇಶ್‌, ಕೊಪ್ಪಚಂದ್ರ, ಎ.ಎಸ್.ದಯಾನಂದ್‌, ಮಣಿಗಂಡನ್‌, ಗಜೇಂದ್ರ, ವನೇಶ್‌, ಭೈರತ್ನಹಳ್ಳಿ ನಾರಾಯಣಸ್ವಾಮಿ, ಎನ್.ರಾಮಕೃಷ್ಣಪ್ಪ, ಆನಂದ್‌, ಸಬ್ಬೇನಹಳ್ಳಿ ರಮೇಶ್‌, ಮಧು, ರಾಧಾಕೃಷ್ಣ, ಚಿರಂಜೀವಿ, ಪವನ್‌ ,ಮಂಜುನಾಥ್‌, ಗೌರೇಶ್‌, ಮಿಥುನ್‌, ಆನೇಪುರ ದೇವರಾಜು, ಸುಧಾಕರ್‌, ಮಂಜುನಾಥ್‌, ದಾಕ್ಷಾಯಿಣಿ, ಸುಜಾತಮ್ಮ ಇನ್ನಿತರರು ಇದ್ದರು.