ಸಾರಾಂಶ
ಮಾಜಿ ಸಚಿವ ಡಿ.ಎನ್. ಜೀವರಾಜ್
ಕನ್ನಡಪ್ರಭ ವಾರ್ತೆ, ಕೊಪ್ಪರೈತರ ಜಮೀನಿನಲ್ಲಿ ಬೆಳೆ ಹಾನಿ ಮಾಡುತ್ತಿರುವ ಆನೆಯನ್ನು ಸೆರೆ ಹಿಡಿಯುವಂತೆ ನಾಗರಿಕ ಹಿತ ರಕ್ಷಣೆ ವೇದಿಕೆ, ಮರಿ ತೊಟ್ಲು, ಹುಲುಗಾರು, ಅಂದಗಾರು, ಕುಂಚೂರು ಭಾಗದ ರೈತರು ಮಂಗಳವಾರ ಕೊಪ್ಪ ಅರಣ್ಯ ಇಲಾಖೆ ಮುಂಭಾಗ ಪ್ರತಿಭಟಿಸಿ ಮನವಿ ನೀಡಿದರು.ಮಾಜಿ ಸಚಿವ ಡಿ.ಎನ್. ಜೀವರಾಜ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ ಒಂದು ತಿಂಗಳಿಂದ ಜನವಸತಿ ಪ್ರದೇಶದಲ್ಲಿ ಓಡಾಡುತ್ತಿರುವ ಆನೆ, ರೈತರ ಜಮೀನಲ್ಲಿ ಬೆಳೆ ಹಾನಿ ಮಾಡುತ್ತಿದೆ. ಅಂದಗಾರು ಸರ್ಕಾರಿ ಶಾಲೆ ಬಳಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದ ಆನೆ ಬಳಿಕ ಕುಂಚೂರು ಗ್ರಾಮಕ್ಕೆ ಲಗ್ಗೆ ಇಟ್ಟಿತ್ತು. ಬಂದ ದಾರಿ ಹಿಡಿದು ಮರಳಿ ಹೊರಟ ಆನೆ, ಕಾಡಂಚಿನ ಪ್ರದೇಶದಲ್ಲಿ ಜಮೀನಿನಲ್ಲಿ ದಾಂಧಲೆ ನಡೆಸುತ್ತಿದೆ. ಇದೀಗ ಹುಲುಗಾರು ಪ್ರದೇಶದಲ್ಲಿ ರಾತ್ರಿ ವೇಳೆ ಮನೆ ಬಳಿ ಕಾಣಿಸಿ ಕೊಂಡಿದೆ.ಹಿಂದೆ ಆನೆಗಳು ಕಡಿಮೆ ಇದ್ದ ಮಲೆನಾಡು ಪ್ರದೇಶಗಳಲ್ಲಿ ಇತ್ತೀಚೆಗೆ ಆನೆ, ಕಾಡುಕೋಣಗಳ ಸಂಖ್ಯೆ ಮಿತಿ ಮೀರಿದ್ದು ರೈತರ ಜಮೀನಿಗೆ ನುಗ್ಗಿ ಕಷ್ಟಪಟ್ಟು ಬೆಳೆದ ಬೆಳೆಗಳನ್ನು ನಾಶ ಮಾಡುತ್ತಿವೆ. ಕಳೆದ ಒಂಬತ್ತು ತಿಂಗಳಲ್ಲಿ ಸೀತೂರು ಮಡಬೂರು, ನಂದಿಗಾವೆ, ಬನ್ನೂರು ಐವರನ್ನು ಆನೆ ತುಳಿದು ಸಾಯಿಸಿದೆ, ಇದರಿಂದ ಜನಸಾಮಾನ್ಯರು ಭಯದ ವಾತವರಣದಲ್ಲಿ ಬದುಕು ವಂತಾಗಿದೆ ಎಂದರು.ಅರಣ್ಯ ಇಲಾಖೆ ಆನೆ ಸೆರೆಹಿಡಿಯುವ ಬದಲು ಅದನ್ನು ಓಡಿಸುವ ಕೆಲಸ ಮಾಡುತ್ತಿದೆ. ಓಡಿಸುವುದರಿಂದ ಆಕ್ರೋಶಗೊಂಡ ಆನೆ ಜನರ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ. ಇಂತಹ ಪ್ರಕರಣ ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ಕಂಡು ಕೊಳ್ಳಲು ಅರಣ್ಯ ಇಲಾಖೆ ಮುಂದಾಗಬೇಕು ಎಂದು ಒತ್ತಾಯಿಸಿ ಅರಣ್ಯ ಇಲಾಖೆ ಮೂಲಕ ಅರಣ್ಯ ಸಚಿವರು, ತಹಸೀಲ್ದಾರ್ ಮುಖೇನ ಸರ್ಕಾರಕ್ಕೆ ಮತ್ತು ಶಾಸಕ ರಾಜೇಗೌಡರಿಗೆ ಮನವಿ ಸಲ್ಲಿಸಲಾಯಿತು, ಅ.೨೫ ರೊಳಗೆ ಪುಂಡಾನೆ ಸೆರೆ ಹಿಡಿಯ ದಿದ್ದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಲಾಯಿತು. ನಾಗರಿಕ ಹಿತ ರಕ್ಷಣೆ ವೇದಿಕೆ ಅಬಿಷೇಕ್ ಹೊಸಳ್ಳಿ, ಉಮೇಶ್ ಹೊಂಡದಮನೆ, ರೇವಂತ್ ಗೌಡ, ದಾಮೋದರ್ ಶೆಟ್ಟಿ, ಉಮೇಶ್ ಹೊಸ್ಕೆರೆ, ರಾಮಚಂದ್ರ ಹುಲುಗಾರು, ಲಕ್ಷ್ಮಣ್ ನಾಯ್ಕ್ ಹುಲುಗಾರು, ಕಿರಣ್ ಉಂಟುವಳ್ಳಿ, ದೇವೆಂದ್ರ ಅಂದಗಾರು ಮತ್ತಿತರರು ಪ್ರತಿಭಟನೆಯಲ್ಲಿದ್ದರು.