ಸಾರಾಂಶ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರಿಂದ ಮಂಗಳವಾರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರೆ ನೀಡಿದ್ದ ಮುಷ್ಕರ ಸಾರ್ವಜನಿಕ ಪ್ರಯಾಣಿಕರ ಪ್ರಯಾಣಕ್ಕೆ ಅಡ್ಡಿಯಾಗಿ ಪರದಾಡುವಂತಾಗಿ ಯಾವುದೇ ಅಹಿತಕರ ಘಟನೆ ಇಲ್ಲದೆ ಸಂಜೆ 5ರವರೆಗೆ ನಡೆಯಿತು.
ಕನ್ನಡಪ್ರಭ ವಾರ್ತೆ, ಬೀದರ್
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರಿಂದ ಮಂಗಳವಾರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರೆ ನೀಡಿದ್ದ ಮುಷ್ಕರ ಸಾರ್ವಜನಿಕ ಪ್ರಯಾಣಿಕರ ಪ್ರಯಾಣಕ್ಕೆ ಅಡ್ಡಿಯಾಗಿ ಪರದಾಡುವಂತಾಗಿ ಯಾವುದೇ ಅಹಿತಕರ ಘಟನೆ ಇಲ್ಲದೆ ಸಂಜೆ 5ರವರೆಗೆ ನಡೆಯಿತು.ಬೆಳಿಗ್ಗೆಯಿಂದಲೇ ನಗರದ ಕೇಂದ್ರ ಬಸ್ ನಿಲ್ದಾಣವು ಬಸ್‌ಗಳ ಸಂಚಾರ ಇಲ್ಲದೆ ಬಿಕೋ ಎನ್ನುತ್ತಿತ್ತು. ಜಿಲ್ಲೆಯ ಬಹುತೇಕ ಎಲ್ಲ ತಾಲೂಕು ಕೇಂದ್ರಗಳಲ್ಲಿ ಬಸ್ ಸಂಚಾರ ಸ್ಥಗಿತವಾಗಿತ್ತು. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು.
ಬಸ್ ನಿಲ್ದಾಣದಿಂದ ಕನಿಷ್ಠ 500ಮೀಟರ್ ದೂರ ನಿಂತು ಪ್ರಯಾಣಿಕರನ್ನು ಕರೆದೊಯ್ಯುವ ಖಾಸಗಿ ವಾಹನಗಳು ಬಸ್ ಸಿಬ್ಬಂದಿಗಳ ಮುಷ್ಕರದಿಂದಾಗಿಟ್ರ್ಯಾಕ್ಸ್, ಜೀಪುಗಳು, ಕಾರು ಮಂಗಳವಾರ ಕೇಂದ್ರ ಬಸ್ ನಿಲ್ದಾಣದೊಳಗೇ ಹಾಜರಾಗಿ ಪ್ರಯಾಣಿಕರನ್ನು ಅವರ ಸ್ಥಳಗಳಿಗೆ ತಲುಪಿಸುವತ್ತ ಮುಂದಾಗಿದ್ದವಾದರೂ ಮುಷ್ಕರ ಕರೆಯಿಂದಾಗಿ ಬಸ್ ನಿಲ್ದಾಣದತ್ತ ಪ್ರಯಾಣಿಕರ ಸಂಖ್ಯೆ ಎಂದಿಗಿಂತ ಕಡಿಮೆಯೇ ಇತ್ತು.
ಜಿಲ್ಲೆಯಲ್ಲಿ ಪ್ರತಿ ದಿನ 680 ಸಂಚಾರ ಮಾರ್ಗಗಳಲ್ಲಿ ಬಸ್‌ಗಳು ಪ್ರಯಾಣ ಮಾಡುತ್ತವೆ ಆದರೆ ಮಂಗಳವಾರ ಮುಷ್ಕರದಿಂದಾಗಿ ಕೇವಲ 20ರಿಂದ 25 ಕಡೆ ಮಾತ್ರ ಸಂಚಾರ ನಡೆಸಲಾಗಿದೆ, ಕನಿಷ್ಠ ಎಂದರೂ ಸುಮಾರು 70 ಲಕ್ಷ ರು.ಗಳ ನಷ್ಟ ಅನುಭವಿಸುವ ಸಾಧ್ಯತೆಯಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ. ಯಾವುದೇ ಅಹಿತಕರ ಘಟನೆ ಇಲ್ಲದೆ ಮುಷ್ಕರ ನಡೆದಿದೆ ಎಂದು ಹೇಳಲಾಗಿದೆ.ಖಾಸಗಿ ವ್ಯಕ್ತಿವೊಬ್ಬರು ಸಾರಿಗೆ ನೌಕರರ ಮುಷ್ಕರದ ವಿರುದ್ಧ ಹೈಕೋರ್ಟ್‌ಗೆ ಪಿಐಎಲ್ ಮೂಲಕ ಮೊರೆ ಹೋಗಿದ್ದರಿಂದ ನ್ಯಾಯಾಲಯ ಮುಷ್ಕರ ನಡೆಸದಂತೆ ಸೂಚನೆ ನೀಡಿದ್ದರ ಪರಿಣಾಮವಾಗಿ ಕೂಡಲೇ ಮುಷ್ಕರ ಹಿಂದಕ್ಕೆ ಪಡೆಯಬೇಕೆಂದು ಸಾರಿಗೆ ಸಂಸ್ಥೆಯ ನಿಗಮಗಳು ಸೂಚನೆ ನೀಡಲಾಗಿ ಮಂಗಳವಾರ ಸಂಜೆಯಿಂದಲೇ ಸಾರಿಗೆ ಬಸ್‌ಗಳು ಆರಂಭಗೊಂಡಿವೆ ಎಂದು ಮುಷ್ಕರನಿರತರ ಪ್ರತಿನಿಧಿಗಳು ತಿಳಿಸಿದ್ದಾರೆ.