ಸಾರಾಂಶ
ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಕೀಳಾಗಿ ಮಾತನಾಡಿರುವುದನ್ನು ಖಂಡಿಸಿ ಜನ ಸಂಗ್ರಾಮ ಪರಿಷತ್ತು ಸಂಘಟನೆ ಕಾರ್ಯಕರ್ತರು ಗುಂಡ್ಲುಪೇಟೆಯಲ್ಲಿ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಕೀಳಾಗಿ ಮಾತನಾಡಿರುವುದನ್ನು ಖಂಡಿಸಿ ಜನ ಸಂಗ್ರಾಮ ಪರಿಷತ್ತು ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಗ್ರಾಮದ ತೆರಕಣಾಂಬಿ ಹುಂಡಿ ರಸ್ತೆಯ ತಿರುವಿನಿಂದ ಪ್ರತಿಭಟನಾ ಮೆರವಣಿಗೆ ಹೊರಟ ಪ್ರತಿಭಟನಕಾರರು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸಂಗ್ರಾಮ ಪರಿಷತ್ತು ಸಂಘಟನೆಯ ಮುಖಂಡ ವಿಜಯಕುಮಾರ್ ಮಾತನಾಡಿ, ಸಂಘಟನೆಯ ಪ್ರಮುಖರು ಅಂಬೇಡ್ಕರ್ ಕುರಿತು ಅಮಿತ್ ಶಾ ಅವರ ಮಾತುಗಳು ದೇಶದ ಜನರ ಭಾವನೆಗೆ ಧಕ್ಕೆ ತಂದಿರುವ ಕಾರಣ ಕೂಡಲೇ ಪ್ರಧಾನಿಗಳು ಸಚಿವ ಸಂಪುಟದಿಂದ ಅಮಿತ್ ಶಾ ಅವರನ್ನು ತೆಗೆದುಹಾಕಬೇಕು ಎಂದು ಆಗ್ರಹಿಸಿದರು.ಅಂಬೇಡ್ಕರರಿಗೆ ವಿಶ್ವದೆಲ್ಲಡೆ ಗೌರವವಿದೆ. ಆದರೆ ಅಮಿತ್ ಶಾ ಅಧಿಕಾರದ ಅಮಲಿನಲ್ಲಿ ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆ. ಇದನ್ನು ಖಂಡಿಸುತ್ತೇವೆ. ಕೂಡಲೇ ಅವರ ಮೇಲೆ ಕ್ರಮವಾಗಬೇಕು ಜೊತೆಗೆ ಸಚಿವ ಸ್ಥಾನದಿಂದ ವಜಾ ಹಾಕಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಸುಭಾಷ್ ಮಾಡ್ರಹಳ್ಳಿ, ಕೊತ್ತಲವಾಡಿ ರಾಜಣ್ಣ ಸೇರಿದಂತೆ ಹಲವರಿದ್ದರು.