ಹುಬ್ಬಳ್ಳಿ:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಪಡೆಯಲು ಮುಂದಾಗಿರುವ ಕಾಂಗ್ರೆಸ್ ಹೈಕಮಾಂಡ್ ನಡೆಯನ್ನು ವಿರೋಧಿಸಿ ಮೇ 28ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಅಹಿಂದ ಸಂಘಟನೆ ನಿರ್ಧರಿಸಿದೆ.ಜಿಲ್ಲೆಯ ಅಹಿಂದ ಸಂಘಟನೆ ಹಾಗೂ ಕುರುಬ ಸಮಾಜದ ಮುಖಂಡರು ಬುಧವಾರ ನಗರದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ ತೀರ್ಮಾನ ಪ್ರಕಟಿಸಿದರು. 28ರಂದು ಸಂಜೆ 4ಗಂಟೆಗೆ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಜಿಲ್ಲೆಯ ಅಹಿಂದ ಸಂಘಟನೆ, ಕುರುಬ ಸಮಾಜ ಹಾಗೂ ಸಿದ್ದರಾಮಯ್ಯ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿಕೊಳ್ಳಲಾಗಿದೆ.ಅಹಿಂದ ಮುಖಂಡ ಸಿದ್ದು ತೇಜಿ ಮಾತನಾಡಿ, ಸಿದ್ದರಾಮಯ್ಯ ಅವರು ಕಳೆದ ಮೂರು ವರ್ಷಗಳಿಂದ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಆಡಳಿತ ನಡೆಸುತ್ತಾ ಬಂದಿದ್ದಾರೆ. ಆದರೆ, ಅವರ ಪಕ್ಷದ ಹೈಕಮಾಂಡ್ ಯಾವುದೇ ಕಾರಣವಿಲ್ಲದೇ ರಾಜೀನಾಮೆ ಪಡೆಯಲು ಮುಂದಾಗಿರುವುದು ಖಂಡನೀಯ ಎಂದು ಹೇಳಿದ್ದಾರೆ.ಅಹಿಂದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗುತ್ತಾರೆ ಎನ್ನುವ ಕಾರಣಕ್ಕೆ ಚುನಾವಣೆಯಲ್ಲಿ ನಾವೆಲ್ಲ ಪಕ್ಷಾತೀತವಾಗಿ ಬೆಂಬಲಿಸಿದ್ದೇವೆ. ಅವರಿಂದ ಹಿಂದುಳಿದವರ ಅಭಿವೃದ್ಧಿಗೆ ಹತ್ತಾರು ಕಾರ್ಯಕ್ರಮ ಅನುಷ್ಠಾನಗೊಂಡಿವೆ. ಅವರಿಂದಲೇ ಹಿಂದುಳಿದ ವರ್ಗದ ಜಾತಿಗಣತಿ ಅನುಷ್ಠಾನವಾಗಲಿದೆ ಎಂಬ ಭರವಸೆಯಲ್ಲಿದ್ದೇವೆ. ಹೀಗಿದ್ದಾಗ ಅವರ ರಾಜೀನಾಮೆ ಪಡೆಯುವುದ ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.ಯಾವುದಾದರೂ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆಯೇ? ಅವರ ಇರುವ ಸಿಡಿ ಬಹಿರಂಗವಾಗಿದೆಯೇ? ಗುತ್ತಿಗೆದಾರರಿಂದ ಕಿಕ್ ಬ್ಯಾಕ್ ಪಡೆದಿದ್ದಾರೆಯೇ? ಅಥವಾ ಹಿಂದುಳಿದ ವರ್ಗಗಳ ಗಣತಿ ವರದಿ ಜಾರಿ ಮಾಡುವುದಾಗಿ ಹೇಳಿದ್ದಕ್ಕೆ ಅವರನ್ನು ಕೆಳಗೆ ಇಳಿಸಲಾಗುತ್ತದೆಯೇ? ಯಾವ ಕಾರಣಕ್ಕಾಗಿ ಸಿದ್ದರಾಮಯ್ಯ ಅವರನ್ನು ಕೆಳಗೆ ಇಳಿಸಲಾಗುತ್ತದೆ ಎಂಬುದನ್ನು ಹೈಕಮಾಂಡ್ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.ಸಭೆಯಲ್ಲಿ ಕುರುಬರ ಸಂಘದ ಅಧ್ಯಕ್ಷ ಮಹಾದೇವಪ್ಪ ಜಕ್ಕಲಿ, ನಿಂಗಪ್ಪ ಕುರುಬರ, ಮುಖಂಡರಾದ ಸಂಜೀವ ದುಮಕನಾಳ, ಹನುಮಂತ ಕಂಬಳಿ, ರಮೇಶ ಅರಳಿಕೇರಿ, ಸುಜಾತಾ ಪೂಜಾರ, ಕಾಜಾಸಾಬ್ ಸೇರಿದಂತೆ ಅನೇಕರು ಇದ್ದರು.
ಸಿದ್ದು ರಾಜೀನಾಮೆ ವಿರೋಧಿಸಿ ಇಂದು ಪ್ರತಿಭಟನೆ
ಸಿದ್ದರಾಮಯ್ಯ ಅವರು ಕಳೆದ ಮೂರು ವರ್ಷಗಳಿಂದ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಆಡಳಿತ ನಡೆಸುತ್ತಾ ಬಂದಿದ್ದಾರೆ. ಆದರೆ, ಅವರ ಪಕ್ಷದ ಹೈಕಮಾಂಡ್ ಯಾವುದೇ ಕಾರಣವಿಲ್ಲದೇ ರಾಜೀನಾಮೆ ಪಡೆಯಲು ಮುಂದಾಗಿರುವುದು ಖಂಡನೀಯ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.