ಹನುಮಸಾಗರ: ಜನರಲ್ಲಿ ಕಾನೂನು ಬಗ್ಗೆ ಸಮಗ್ರ ಜಾಗೃತಿ ಮೂಡಿಸುವುದು ಅತ್ಯಂತ ಅವಶ್ಯಕವಾಗಿದ್ದು, ವಿಶೇಷವಾಗಿ ಯುವಕರು ವ್ಯಸನಗಳಿಂದ ದೂರವಿದ್ದು ಉತ್ತಮ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಬಳ್ಳಾರಿ ವಲಯದ ಕಾನೂನು ಅಧಿಕಾರಿ ಬಿ.ಎಸ್.ಪಾಟೀಲ್ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಆಯೋಜಿಸಲಾಗಿದ್ದ ನೋಂದವರಿಗೆ ನ್ಯಾಯ ಜಾಗೃತಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು.ಸಮಾಜದಲ್ಲಿ ಅನೇಕರು ಕಾನೂನುಗಳ ಬಗ್ಗೆ ಅರಿವಿಲ್ಲದೆ ತಮ್ಮ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಈ ಹಿನ್ನೆಲೆ ಜನರಿಗೆ ನ್ಯಾಯ ಮತ್ತು ಕಾನೂನು ಅರಿವು ತಲುಪಿಸುವ ಉದ್ದೇಶದಿಂದ ಅಭಿಯೋಜನ ಇಲಾಖೆಯ ಮೂಲಕ ಈ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಯುವಕರು ಸರಿಯಾದ ಮಾರ್ಗದಲ್ಲಿ ಸಾಗಬೇಕಾದರೆ ಕುಟುಂಬದ ಹಿರಿಯರು,ಶಿಕ್ಷಕರು ಹಾಗೂ ಸಮಾಜದ ಮಾರ್ಗದರ್ಶನ ಬಹಳ ಮುಖ್ಯವಾಗಿದೆ. ಇಂದಿನ ದಿನಗಳಲ್ಲಿ ವ್ಯಸನಗಳ ಪ್ರಭಾವ ಹೆಚ್ಚುತ್ತಿರುವುದರಿಂದ ಯುವಜನತೆ ಎಚ್ಚೆತ್ತುಕೊಂಡು ಆರೋಗ್ಯಕರ ಬದುಕಿನತ್ತ ಗಮನ ಹರಿಸಬೇಕು. ಯಾವುದೇ ಅಪರಾಧ ಅಥವಾ ಅನ್ಯಾಯಕ್ಕೆ ಒಳಗಾದ ವ್ಯಕ್ತಿಗೆ ನ್ಯಾಯ ದೊರಕಬೇಕು ಎನ್ನುವ ಉದ್ದೇಶದಿಂದ ಹೊಸ ಕಾನೂನುಗಳಲ್ಲಿ ಹಲವು ಸರಳೀಕರಣ ಮಾಡಲಾಗಿದೆ. ಪ್ರಕರಣ ದಾಖಲಾಗಿದ ನಂತರ ಸಂತ್ರಸ್ತರಿಗೆ ಎಫ್.ಐ.ಆರ್ ಪ್ರತಿ ಉಚಿತವಾಗಿ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದರು.ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್‌ಎಸ್) ಅಡಿಯಲ್ಲಿ ಜಾರಿಗೆ ತಂದಿರುವ ಹೊಸ ಕಾನೂನುಗಳ ಬಗ್ಗೆ ವಿವರಿಸಿದ ಅವರು, ನಿರ್ದಿಷ್ಟ ಅಪರಾಧ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಎಲ್ಲ ಆಸ್ಪತ್ರೆಗಳು ತಕ್ಷಣ ಉಚಿತ ಪ್ರಥಮ ಚಿಕಿತ್ಸೆ ನೀಡುವುದು ಕಡ್ಡಾಯವಾಗಿದ್ದು, ಸಂಬಂಧಿಸಿದ ಮಾಹಿತಿ ಪೊಲೀಸರಿಗೆ ನೀಡುವ ಜವಾಬ್ದಾರಿ ಆಸ್ಪತ್ರೆಗಳ ಮೇಲಿದೆ. ಹೊಸ ಕಾಯ್ದೆಗಳು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ರೂಪುಗೊಂಡಿದ್ದು, ನ್ಯಾಯ ಪ್ರಕ್ರಿಯೆ ಇನ್ನಷ್ಟು ಸರಳಗೊಳಿಸಲಾಗಿದೆ. ಅಪರಾಧದಿಂದ ಸಂತ್ರಸ್ತರಿಗೆ ಉಂಟಾದ ನಷ್ಟಕ್ಕೆ ಪರಿಹಾರ ನೀಡುವಂತೆ ನ್ಯಾಯಾಲಯವು ಆರೋಪಿಗೆ ನಿರ್ದೇಶಿಸುವ ಅವಕಾಶ ಕೂಡ ಹೊಸ ಕಾನೂನು ಒದಗಿಸಿದೆ ಎಂದು ಹೇಳಿದರು.
ಹೊಸಪೇಟೆಯ ಸಹಾಯಕ ಅಭಿಯೋಜಕ ರವೀಂದ್ರಸಾ ಮೆಹರವಾಡೆ ಮಾತನಾಡಿ, ಕಾನೂನು ಅರಿವು ಸಮಾಜದಲ್ಲಿ ಶಾಂತಿ ಮತ್ತು ನ್ಯಾಯ ವ್ಯವಸ್ಥೆ ಬಲಪಡಿಸುತ್ತದೆ. ಜನರು ಯಾವುದೇ ಅನ್ಯಾಯ ಕಂಡುಬಂದರೂ ಹೆದರದೇ ಕಾನೂನು ಸಹಾಯ ಪಡೆಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಿಎಸೈಗಳಾದ ಧನುಂಜಯ ಎಂ., ಬಸಪ್ಪ ಲಮಾಣಿ ಸೇರಿದಂತೆ ಪೊಲೀಸ್ ಸಿಬ್ಬಂದಿ, ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.