ಗದಗ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕುರಿತಂತೆ ಪಾರದರ್ಶಕ ಮತದಾರರ ಪಟ್ಟಿ ತಯಾರಿಕೆಗೆ ಬಿಎಲ್ಒಗಳ ಪಾತ್ರ ಪ್ರಮುಖವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್. ತಿಳಿಸಿದರು.ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ ನಲ್ಲಿ ಬುಧವಾರ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ- 2026ರ ಮ್ಯಾಪಿಂಗ್ ಕುರಿತು ಜರುಗಿದ ಸಭೆಯಲ್ಲಿ ಮಾತನಾಡಿದರು.

ಭಾರತ ಚುನಾವಣಾ ಆಯೋಗವು ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ- 2026 ಕುರಿತು ಮೇ 14ರಂದು ವೇಳಾಪಟ್ಟಿ ಪ್ರಕಟಿಸಿದೆ. ECI Net ತಂತ್ರಾಂಶದಲ್ಲಿ ಮತದಾರ ಪಟ್ಟಿ ದತ್ತಾಂಶವು ಜೂ. 16ರಂದು ಫ್ರೀಜ್ ಆಗುವುದರಿಂದ ಜಿಲ್ಲೆಗೆ ಸಂಬಂಧಿಸಿದ 2002ರ ಮತದಾರರ ಪಟ್ಟಿಗೆ 2025ರ ಮತದಾರರ ಪಟ್ಟಿಯ ಮ್ಯಾಪಿಂಗ್ ಕಾರ್ಯವನ್ನು ಪೂರ್ಣಗೊಳಿಸಬೇಕು. ಈ ನಿಟ್ಟಿನಲ್ಲಿ ಬಿಎಲ್ಒಗಳು ವಿಶೇಷ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು.

ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧಿಸಿದಂತೆ ಮನೆ ಮನೆಗೆ ಭೇಟಿ ನೀಡಿ ಸಮಗ್ರ ವಿಷಯಗಳ ಪರಿಶೀಲನೆ ನಡೆಸಬೇಕು. ಸ್ಥಳಾಂತರಗೊಂಡ, ಮರಣ ಹೊಂದಿದ ಮತದಾರರ ಹೆಸರುಗಳ ಕಡೆ ವಿಶೇಷ ಗಮನ ಹರಿಸಬೇಕು. ಸಾಹಿತಿ, ಕ್ರೀಡಾಪಟು, ಪ್ರಶಸ್ತಿ ವಿಜೇತರು, ಎಂಪಿ, ಎಂಎಲ್ಎ, ತಾಪಂ ಮಾಜಿ ಅಧ್ಯಕ್ಷ, ಗ್ರಾಪಂ ಸದಸ್ಯರು ಹೀಗೆ ವಿಐಪಿ ಹಾಗೂ ವಿವಿಐಪಿ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಬಿಟ್ಟು ಹೋಗಬಾರದು.

ಈ ಕಾರ್ಯದಲ್ಲಿ ಯಾವುದೇ ಲೋಪದೋಷಗಳಾಗದಂತೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಮತ್ತು ಬಿಎಲ್ಒಗಳೊಂದಿಗೆ ಸಹಕರಿಸಿಕೊಂಡು ಕಾರ್ಯನಿರ್ವಹಿಸಬೇಕು. ಆಯಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವ ಮ್ಯಾಪಿಂಗ್ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಬೇಕು. ಜಿಲ್ಲೆಯ ಮತದಾರರ ಪಟ್ಟಿ ಸಮಗ್ರ ಪರಿಷ್ಕಣೆ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.ಚುನಾವಣಾ ತಹಸೀಲ್ದಾರ್ ಸಂತೋಷ ಹಿರೇಮಠ ಹಾಗೂ ಜಿಲ್ಲಾ ಮಟ್ಟದ ಮಾಸ್ಟರ್ ತರಬೇತುದಾರ ಬಿ.ಜಿ. ಗಿರಿತಮ್ಮಣ್ಣವರ ಮಾತನಾಡಿ, ಬಿಎಲ್ಒಗಳು ಜಿಲ್ಲೆಯ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ನಿರ್ವಹಿಸಬೇಕಾದ ಕರ್ತವ್ಯಗಳ ವಿವರಿಸಿದರು.ಈ ವೇಳೆ ಮತದಾರರ ನೋಂದಣಾಧಿಕಾರಿ ಗಂಗಪ್ಪ ಎಂ., ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೊಟೂರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಎಸ್.ಡಿ. ಪಾಟೀಲ ಸೇರಿದಂತೆ ಅಧಿಕಾರಿಗಳು ಇದ್ದರು.