ಸವಣೂರು: ಗೋ ಹತ್ಯೆ ತಡೆಯುವಂತೆ ನಿರಂತರ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನ ಕಂಡುಬರುತ್ತಿಲ್ಲ, ಎಂದಿನಂತೆ ಗೋ ಹತ್ಯೆ ಮುಂದುವರಿದಿದೆ ಎಂದು ಆರೋಪಿಸಿ ಹಿಂದೂಪರ ಸಂಘಟನೆಗಳ ಪ್ರಮುಖರು ಮಂಗಳವಾರ ಪಟ್ಟಣದ ಪೊಲೀಸ್‌ ಠಾಣೆ ಎದುರು ಮೌನ ಪ್ರತಿಭಟನೆ ಕೈಗೊಂಡರು.

ಸ್ಥಳಕ್ಕೆ ಡಿವೈಎಸ್‌ಪಿ ಗುರುಶಾಂತಪ್ಪ ಕೆ.ವಿ. ಆಗಮಿಸಿ ಪ್ರತಿಭಟನಾಕಾರರೊಂದಿಗೆ ಮಾತನಾಡಲು ಮುಂದಾದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಗಂಗಾಧರ ಬಾಣದ ಮಾತನಾಡಿ, ಕಾನೂನುಬಾಹಿರವಾಗಿ ಸವಣೂರಿನ ವಿವಿಧ ಸ್ಥಳಗಳಲ್ಲಿ ಹಸು, ಎತ್ತು ಸೇರಿದಂತೆ ರೈತರಿಗೆ ನಿತ್ಯ ಕೃಷಿಯಲ್ಲಿ ಸಹಕರಿಸುವ ದನ-ಕರುಗಳನ್ನು ಕಟುಕರು ಹತ್ಯೆಗೈಯುತ್ತಿದ್ದಾರೆ. ಪೊಲೀಸ್‌ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಂಡೂಕಾಣದಂತೆ ವರ್ತಿಸುತ್ತಿರುವುದು ಹಿಂದೂಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಮನವಿ ಸಲ್ಲಿಸಿದರೂ ಪ್ರಯೋಜನ ಕಂಡುಬಾರದ ಹಿನ್ನಲೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಎಸ್‌ಪಿ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಬೇಕು ಎಂದು ಹಲವು ದಿನಗಳ ಮೊದಲೇ ಲಿಖಿತ ಮನವಿ ಸಹ ಸಲ್ಲಿಸಲಾಗಿದೆ. ಆದರೂ ಎಸ್‌ಪಿ ಬರಲು ಹಿಂದೇಟು ಹಾಕುತ್ತಿರುವುದು ಹಲವು ರೀತಿಯ ಅನುಮಾನ ಮೂಡಿಸಿದೆ. ಎಸ್‌ಪಿ ಸ್ಥಳಕ್ಕೆ ಆಗಮಿಸುವ ವರೆಗೆ ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂದೆ ಪಡೆಯುವ ಮಾತು ಇಲ್ಲ ಎಂದರು.

ಪೊಲೀಸ್‌ ಅಧಿಕಾರಿಗಳು ಅನಿವಾರ್ಯವಾಗಿ ಮೇಲಧಿಕಾರಿಗಳಿಗೆ ವಿಷಯ ತಿಳಿಸಿದರು. ಕೆಲಸಮಯದ ಬಳಿಕ ಎಎಸ್‌ಪಿ ಲಕ್ಷ್ಮಣ ಶಿರಕೋಳ ಆಗಮಿಸಿದರು. ಅವರ ಜತೆ ಪ್ರತಿಭಟನಾಕಾರರು ವಾಗ್ವಾದ ನಡೆಸಿದರು. ಲಕ್ಷ್ಮಣ ಶಿರಕೋಳ ಮಾತನಾಡಿ, ತಮ್ಮ ಬೇಡಿಕೆಯಂತೆ ಗೋ ಹತ್ಯೆ ತಡೆಯಲು ವಿಶೇಷ ತಂಡ ರಚಿಸಲಾಗುವುದು. ಈಗಾಗಲೇ ಚೆಕ್‌ಪೋಸ್ಟ್‌ ಆರಂಭಿಸಲಾಗಿದೆ. ಹಿಂದೂಪರ ಸಂಘಟನೆಗಳ ಪದಾಧಿಕಾರಿಗಳ ಮಾಹಿತಿ ಪಡೆದು ಗೋ ಸಾಗಾಟ ತಡೆದು ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪುರಸಭೆ ಅಧಿಕಾರಿಗಳಿಗೆ ಸೂಚಿಸಿ, ಪಟ್ಟಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಸಾಯಿಖಾನೆಗಳನ್ನು ಪರಿಶೀಲನೆಗೆ ಒಳಪಡಿಸಲಾಗುವುದು. ಯಾರು ಕಾನೂನು ಕೈಗೆ ತೆಗೆದುಕೊಳ್ಳಬಾರದು ಎಂದರು.

ಮುಂದಿನ ಎರಡು ದಿನಗಳಲ್ಲಿ ಮತ್ತೆ ಗೋ ಸಾಗಾಟ ಹಾಗೂ ಗೋ ಹತ್ಯೆ ಪ್ರಕರಣ ಕಂಡುಬಂದಲ್ಲಿ ಉಗ್ರ ಪ್ರತಿಭಟನೆ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿ, ಪ್ರತಿಭಟನೆ ಹಿಂದಕ್ಕೆ ಪಡೆದರು.

ಸವಣೂರು ಪಿಐ ತಿಮ್ಮಣ್ಣ ಚಾಮನೂರ, ವಿವಿಧ ಠಾಣೆಗಳ ಪೊಲೀಸ್‌ ಅಧಿಕಾರಿಗಳು ಹಾಗೂ ಪ್ರಮುಖರಾದ ಜಯತೀರ್ಥ ದೇಶಪಾಂಡೆ, ಶಿವಪುತ್ರಪ್ಪ ಕಲಕೋಟಿ, ಮಹೇಶ ಸಾಲಿಮಠ, ಮಹೇಶ ಮುದಗಲ್, ಹನುಮಂತಗೌಡ ಮುದಿಗೌಡ್ರ, ಧರಿಯಪ್ಪಗೌಡ ಪಾಟೀಲ, ಪ್ರವೀಣ ಚರಂತಿಮಠ, ಶ್ರೀನಿವಾಸ ಗಿತ್ತೆ, ಸಂತೋಷ ಗುಡಿಸಾಗರ, ಪ್ರವೀಣ ಬಾಲೇಹೊಸೂರು, ಬಸನಗೌಡ ಕೊಪ್ಪದ, ಸಮೀತ ಕೆಮ್ಮಣಕೇರಿ, ಮಹೇಶ ಜಡಿ, ಪರಶುರಾಮ ಈಳಗೇರ, ಶಂಕರ ಪಾಟೀಲ ಇದ್ದರು.