ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸಫಾಯಿ ಕರ್ಮಚಾರಿಗಳಿಗೆ ನ್ಯಾಯಯುತವಾಗಿ ಸಿಗಬೇಕಾಗ ಸರ್ಕಾರದ ಎಲ್ಲ ಯೋಜನೆಗಳನ್ನು ತಲುಪಿಸುವ ಕೆಲಸವಾಗಬೇಕೆಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ವೆಂಕಟೇಶನ್ ಹೇಳಿದರು.ಜಿಪಂ ನೂತನ ಸಭಾಭವನದಲ್ಲಿ ಸಫಾಯಿ ಕರ್ಮಚಾರಿ ಮತ್ತು ಸಂಘಟನೆಗಳೊಂದಿಗೆ ನಡೆದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೌರಕಾರ್ಮಿಕರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಒದಗಿಸುವುದು ಆಯಾ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರ ಕರ್ತವ್ಯವಾಗಿದೆ. ನಗರ ಸ್ಥಳೀಯ ಸಂಸ್ಥೆ ಸೇರಿದಂತೆ ಸರ್ಕಾರದ ಸ್ವಾಯತ್ತ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರಿಗೆ ಕನಿಷ್ಠ ವೇತನ ನೀಡಬೇಕು ಎಂದರು.
ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಸಾಮೂಹಿಕ ಶೌಚಾಲಯದ ಸ್ಥಿತಿಗತಿಗಳ ಬಗ್ಗೆ ಪ್ರಶ್ನಿಸಿದ ಅವರು, ಜಮಖಂಡಿ ಭಾಗದಲ್ಲಿ ಡಿ ಗ್ರೂಪ್ ನೌಕರರನ್ನು ಉಪಯೋಗಿಸಿ ಸಾಮೂಹಿಕ ಶೌಚಾಲಯಗಳನ್ನು ಶುಚಿಗೊಳಿಸಲಾಗುತ್ತಿದೆ. ಕೆಲವೊಂದು ಕಡೆ ಜಟ್ಟಿಂಗ್ ಮಷಿನ್ ಉಪಯೋಗಿಸಲಾಗುತ್ತಿದೆಯೆಂದು ಪೌರಾಯುಕ್ತೆ ಲಕ್ಷ್ಮೀ ಅಸ್ಟಗಿ ಸಭೆಗೆ ತಿಳಿಸಿದರು.ನಗರಸಭೆಯಲ್ಲಿ ಕಾಯಂಗೊಂಡ ಕೆಲ ಸಿಬ್ಬಂದಿಗೆ ಮನೆ ಇಲ್ಲದ್ದನ್ನು ಗಮನಿಸಿದ ಅಧ್ಯಕ್ಷರು, ಮುಂಬರುವ ದಿನಗಳಲ್ಲಿ ನಿವೇಶನ ರಹಿತ, ನಿವೇಶನ ಸಹಿತ ಪೌರಕಾರ್ಮಿಕರಿಗೆ ಮನೆ ನಿರ್ಮಿಸಿಕೊಡಲು ಆಯುಕ್ತರಿಗೆ ನಿವೇಶನ ಗುರುತಿಸಲು ಸೂಚಿಸಿದರು. ಪ್ರತಿ ಗ್ರಾಮ ಪಂಚಾಯತಿಯಲ್ಲಿ 5 ಜನ ಸಿಬ್ಬಂದಿಯಿರುವುದು ಸಾಮಾನ್ಯ. ಜನಸಂಖ್ಯೆ ಹೆಚ್ಚಾಗಿರುವ ಗ್ರಾಪಂಗಳಿಗೆ ಹೆಚ್ಚುವರಿಯಾಗಿ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಿಸಿಕೊಳ್ಳಲು ಹೇಳಿದ ಅವರು, ಪ್ರತಿ ಕಾರ್ಮಿಕರ ಆರೋಗ್ಯಕ್ಕೆ ನಿಗಾ ಇಡುವುದಲ್ಲದೆ ವಿಮಾಯೋಜನೆ, ಸುರಕ್ಷತಾ ಪರಿಕರಣಗಳನ್ನು ಒದಗಿಸಬೇಕು ಎಂದು ಸೂಚಿಸಿದರು.
ಸೀಮಿಕೇರಿ, ಮುರನಾಳ ಹಾಗೂ ಯಡಹಳ್ಳಿ ಸಿಬ್ಬಂದಿ, ಕಸ ವಿಲೇವಾರಿ ವಾಹನ ಮಹಿಳಾ ಚಾಲಕರಿಗೆ ವಿಮೆ ಪಾಲಸಿ ಕಾಯಂಗೊಳಿಸುವಂತೆ ಮನವಿ ಮಾಡಿದರು. ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಿಬ್ಬಂದಿಗೆ ಶೌಚಾಲಯವುಳ್ಳ ವಿಶ್ರಾಂತಿ ಕೊಠಡಿ ಒದಗಿಸಬೇಕು. ನಿಯಮಿತವಾಗಿ ಮಾಸಿಕ ವೇತನ ಆಗದಿರುವ ಬಗ್ಗೆ ತಿಳಿದು ಅಲ್ಲಿನ ಅಧಿಕಾರಿಗಳಿಗೆ ಅನುದಾನ ಪಡೆದುಕೊಂಡು ವೇತನ ಪಾವತಿಗೆ ಕ್ರಮ ವಹಿಸಲು ತಿಳಿಸಿದರು. ಸಫಾಯಿ ಕರ್ಮಚಾರಿಗಳಿಗೆ ತೊಂದರೆ, ಕಿರುಕುಳ ಆದರೆ ಆಯೋಗಕ್ಕೆ ದೂರು ಸಲ್ಲಿಸಲು ಬಯಸಿದಲ್ಲಿ ದೂ.ಸಂ. 01124648924ಗೆ ಕರೆ ಮಾಡಿ ತಿಳಿಸಬಹುದು. ಇಲ್ಲವೆ ಆಯೋಗದ ವೆಬ್ ಸೈಟ್ ಮೂಲಕ ದೂರು ದಾಖಲಿಸಬಹುದಾಗಿದೆ ಎಂದರು.ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ನಗರ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರ ಮಾಹಿತಿಯನ್ನು ಸಭೆಗೆ ತಿಳಿಸಿದರೆ, ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಮಾಹಿತಿ ಜಿಪಂ ಯೋಜನಾ ನಿರ್ದೇಶಕ ಎನ್. ವೈ. ಬಸರಿಗಿಡದ ಸಭೆಗೆ ತಿಳಿಸಿದರು. ಸಭೆಯಲ್ಲಿ ಜಿಪಂ ಸಿಇಒ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಸಫಾಯಿ ಕರ್ಮಚಾರಿ ಆಯೋಗದ ಮಾಜಿ ನಿರ್ದೇಶಕ ಜಗದೀಶ ಹಿರೇಮನಿ, ಆಯೋಗದ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಸಿಂಗ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸದಾಶಿವ ಬಡಿಗೇರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರತಿ ಪೌರಕಾರ್ಮಿಕರ ಸಮಗ್ರ ಮಾಹಿತಿ ನೀಡಿ1997ರಲ್ಲಿ ಗುರುತಿಸಲಾದ ಸಿಬ್ಬಂದಿಯನ್ನು ಮಾತ್ರ ಕಾಯಂಗೆ ಪರಿಗಣಿಸಲಾಗುತ್ತಿದೆ. ಈಚೆಗೆ ಕೆಲಸಕ್ಕೆ ಸೇರಿದ ಪೌರಕಾರ್ಮಿಕರ ಕಾಯಂಗೆ ಸರ್ಕಾರದ ನಿಯಮ ಬಂದಿಲ್ಲ. ಪ್ರತಿ ಪೌರಕಾರ್ಮಿಕರಿಗೆ ನಿವೇಶನ ಕೊಳ್ಳಲು ₹ 7,50,000 ಕೊಡಲಾಗುತ್ತಿದೆ. ಪ್ರತಿ ನಗರ ಹಾಗೂ ಗ್ರಾಮೀಣ ಸಂಸ್ಥೆಗಳು ಪ್ರತಿ ಪೌರಕಾರ್ಮಿಕರ ವೇತನ, ವಿಮೆ, ಇಎಸ್ಐ, ಇಪಿಎಫ್ ಗಳ ಬಗ್ಗೆ ಸಮಗ್ರ ವಿವರಣೆ ನೀಡಲು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ವೆಂಕಟೇಶ ಸೂಚಿಸಿದರು.