ಮಹಿಳಾ ಪೌರ ಕಾರ್ಮಿಕರ ಆಂತರಿಕ ಸಮಿತಿ ರಚಿಸಿ: ವೆಂಕಟೇಶನ್

| Published : Jun 16 2024, 01:45 AM IST

ಸಾರಾಂಶ

ಮಹಿಳಾ ಪೌರ ಕಾರ್ಮಿಕರ ಸುರಕ್ಷತೆಗೆ ಆದ್ಯತೆ ನೀಡಬೇಕಾಗಿದೆ. ಈ ಹಿನ್ನೆಲೆ ಮಹಿಳಾ ಪೌರ ಕಾರ್ಮಿಕರ ಆಂತರಿಕ ಸಮಿತಿ ರಚಿಸಬೇಕು.

ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ

ಸಫಾಯಿ ಕರ್ಮಚಾರಿಗಳ ಸೌಲಭ್ಯ ಮತ್ತು ಸಮಸ್ಯೆಗಳ ಕುರಿತು ಸಭೆಕನ್ನಡಪ್ರಭ ವಾರ್ತೆ ಕೊಪ್ಪಳ

ಮಹಿಳಾ ಪೌರ ಕಾರ್ಮಿಕರ ಸುರಕ್ಷತೆಗೆ ಆದ್ಯತೆ ನೀಡಬೇಕಾಗಿದೆ. ಈ ಹಿನ್ನೆಲೆ ಮಹಿಳಾ ಪೌರ ಕಾರ್ಮಿಕರ ಆಂತರಿಕ ಸಮಿತಿ ರಚಿಸುವಂತೆ ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ. ವೆಂಕಟೇಶನ್ ಸೂಚಿಸಿದರು.

ಸಫಾಯಿ ಕರ್ಮಚಾರಿಗಳ ಸೌಲಭ್ಯ ಮತ್ತು ಸಮಸ್ಯೆಗಳ ಕುರಿತಂತೆ ಜಿಲ್ಲಾ ಪಂಚಾಯಿತಿಯ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಫಾಯಿ ಕರ್ಮಚಾರಿಗಳಾಗಿ ಕಾರ್ಯನಿರ್ವಹಿಸುವ ಎಲ್ಲ ಪೌರ ಕಾರ್ಮಿಕರಿಗೆ ರಾಷ್ಟ್ರೀಯ ಮತ್ತು ರಾಜ್ಯ ಸರ್ಕಾರಗಳಿಂದ ಕಾನೂನಾತ್ಮಕವಾಗಿ ಸೀಗಬೇಕಾದ ಎಲ್ಲ ಸೌಕರ್ಯ, ಸೌಲಭ್ಯ ಪೂರೈಸುವುದು ಆಯಾ ಸ್ಥಳೀಯ ಸಂಸ್ಥೆ, ಇಲಾಖೆಗಳ ಮುಖ್ಯಸ್ಥರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಪೌರಕಾರ್ಮಿಕರಿಗೆ ಸೀಗಬೇಕಾದ ಸವಲತ್ತು ನೀಡುವಲ್ಲಿ ಅನಗತ್ಯ ವಿಳಂಬ ಅಥವಾ ಅವುಗಳನ್ನು ತಿರಸ್ಕರಿಸಿದರೆ ಅಂತಹ ಅಧಿಕಾರಿಗಳ ಮೇಲೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಎಚ್ಚರಿಸಿದರು.

ನೇರ ಪಾವತಿ ಮತ್ತು ಗುತ್ತಿಗೆ ಪೌರ ಕಾರ್ಮಿಕರಿಗೆ ಹೊಸದಾಗಿ ಗುರುತಿನ ಚೀಟಿ ಸಿದ್ದಪಡಿಸಿ, ಅದರಲ್ಲಿ ಅವರ ಹೆಸರು, ಮೊಬೈಲ್ ಸಂಖ್ಯೆ ವಿವರದೊಂದಿಗೆ ವಿಶೇಷವಾಗಿ ಬ್ಲಡ್ ಗ್ರೂಪ್, ಪಿ.ಎಫ್ & ಇ.ಎಸ್.ಐ ಖಾತೆಯ ಸಂಖ್ಯೆಗಳನ್ನು ಕಡ್ಡಾಯವಾಗಿ ನಮೂದಿಸಬೇಕು. ಎಲ್ಲ ಪೌರಕಾರ್ಮಿಕರು/ ಸಫಾಯಿ ಕರ್ಮಚಾರಿಗಳು ಮಾಡುವ ಸ್ವಚ್ಛತಾ ಕಾರ್ಯದಿಂದ ಎಲ್ಲರಿಗೂ ಆರೋಗ್ಯಯುತ ವಾತಾವರಣ ಸಿಗುತ್ತದೆ. ನಗರಸಭೆ, ಪುರಸಭೆ, ಪಟ್ಟಣ ಹಾಗೂ ಇತರ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪೌರಕಾರ್ಮಿಕರಿಗೆ ಕಡ್ಡಾಯವಾಗಿ ಆರೋಗ್ಯ ತಪಾಸಣೆ ನಡೆಸಬೇಕು. ಅವರಿಗೆ ಸುರಕ್ಷತಾ ಪರಿಕರಗಳಾದ ಮಾಸ್ಕ್, ಕೈಗವಸ, ಟೋಪಿ, ಶೂ ಹಾಗೂ ಇತ್ಯಾದಿ ಪರಿಕರಗಳನ್ನು ಕಡ್ಡಾಯವಾಗಿ ನೀಡಬೇಕು. ಸುರಕ್ಷತಾ ಪರಿಕರಗಳಿಲ್ಲದೆ ಯಾವುದೇ ಸಫಾಯಿ ಕರ್ಮಚಾರಿಗಳು ಕರ್ತವ್ಯಕ್ಕೆ ತೆರಳದಂತೆ ನೋಡಿಕೊಳ್ಳಬೇಕು. ಕಡ್ಡಾಯವಾಗಿ ಸಮವಸ್ತ್ರ ನೀಡಬೇಕು. ಪ್ರತಿನಿತ್ಯ ಉತ್ತಮ, ಗುಣಮಟ್ಟದ ಉಪಾಹಾರ ಒದಗಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಹಿಳಾ ಪೌರಕಾರ್ಮಿಕರಿಗೆ ಯಾವುದೇ ರೀತಿಯ ಲೈಂಗಿಕ ಕಿರುಕುಳ, ಮಾನಸಿಕ ಹಿಂಸೆ, ಅನಗತ್ಯ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಈ ಹಿನ್ನೆಲೆ ಮಹಿಳೆಯರ ಸುರಕ್ಷತೆಗಾಗಿ ಮಹಿಳಾ ಆಂತರಿಕ ಸಮಿತಿ ರಚಿಸಿ, ಸಮಿತಿಯ ವಿವರವನ್ನು ಆಯಾ ಪಂಚಾಯತ್ ಹಾಗೂ ಆಯಾ ಸ್ಥಳೀಯ ಸಂಸ್ಥೆಗಳ ಸೂಚನಾ ಫಲಕದಲ್ಲಿ ಪ್ರಕಟಿಸಬೇಕೆಂದು ತಿಳಿಸಿದರು.

ವಸತಿ ಯೋಜನೆಯಡಿ ಪೌರಕಾರ್ಮಿಕರಿಗೆ ರಾಜ್ಯ ಸರ್ಕಾರದಿಂದ ₹6 ಲಕ್ಷ ಸಹಾಯಧನ ಹಾಗೂ ಕೇಂದ್ರ ಸರ್ಕಾರದಿಂದ ₹1.5 ಲಕ್ಷ ಸಹಾಯಧನವಿದ್ದು, ಕೇಂದ್ರದ ಸಹಾಯಧನ ಮೊತ್ತವನ್ನು ₹3.5 ಲಕ್ಷಕ್ಕೇರಿಸುವಂತೆ ಸಫಾಯಿ ಕರ್ಮಚಾರಿಗಳ ಸಂಘದ ಮಾಜಿ ಸದಸ್ಯ ದುರಗಪ್ಪ ಕಂದಾರಿ ಅಧ್ಯಕ್ಷರಿಗೆ ಮನವಿ ಮಾಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಈ ಪ್ರಸ್ತಾವನೆಯನ್ನು ಆಯೋಗದ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವುದಾಗಿ ಹೇಳಿದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್ ಮಾತನಾಡಿ, ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಆಸ್ಪತ್ರೆಗಳಲ್ಲಿ ಸಾಮಾನ್ಯ ಹಾಗೂ ವರ್ಷಕ್ಕೊಮ್ಮೆ ಮಾಸ್ಟರ್ ಆರೋಗ್ಯ ತಪಾಸಣೆಯನ್ನು ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಜಿಪಂ ಉಪಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ, ಸೇರಿದಂತೆ ತಹಸೀಲ್ದಾರರು, ತಾಪಂ ಇಒಗಳು, ವಿವಿಧ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ವಿವಿಧ ಇಲಾಖೆಗಳ ಅಧಿಕಾರಿಗಳು, ಪೌರ ಕಾರ್ಮಿಕರು, ಪೌರ ಕಾರ್ಮಿಕರ ಸಂಘಟನೆಗಳ ಪ್ರಮುಖರು, ಸಫಾಯಿ ಕರ್ಮಚಾರಿ ಜಿಲ್ಲಾ ಮಟ್ಟದ ಜಾಗೃತಿ ಸಮಿತಿ ಸದಸ್ಯರು ಸೇರಿದಂತೆ ಇತರರು ಭಾಗವಹಿಸಿದ್ದರು.

ದೂರು ಆಲಿಸಿದ ಅಧ್ಯಕ್ಷರು:

ಸಫಾಯಿ ಕರ್ಮಚಾರಿಗಳಿಂದ ಸಮಸ್ಯೆ, ದೂರುಗಳನ್ನು ಖುದ್ದು ಆಲಿಸಿ, ಸಂಬಂಧಿಸಿದ ಅಧಿಕಾರಿಗಳಿಂದ ಆಯೋಗದ ಅಧ್ಯಕ್ಷ ಎಂ. ವೆಂಕಟೇಶನ್ ಉತ್ತರ ಪಡೆದರು. ಯಲಬುರ್ಗಾ ಪಪಂ ಪೌರ ಕಾರ್ಮಿಕರಿಗೆ ನಿಯಮಿತವಾಗಿ ಮಾಸಿಕ ವೇತನ ಆಗುತ್ತಿಲ್ಲ ಎಂಬುದನ್ನು ತಿಳಿದು, ಅಲ್ಲಿನ ಮುಖ್ಯಾಧಿಕಾರಿಗಳಿಗೆ ಮುಂದಿನ ಎರಡು ಮೂರು ದಿನಗಳಲ್ಲಿ ವೇತನ ಪಾವತಿಸುವಂತೆ ನಿರ್ದೇಶನ ನೀಡಿ, ಈ ಪ್ರಕರಣದಲ್ಲಿ ವಿಳಂಬವಾಗದರೆ ಮುಖ್ಯಾಧಿಕಾರಿ ವಿರುದ್ಧ ಕ್ರಮಕ್ಕೆ ಮುಂದಾಗುವಂತೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಫಾಯಿ ಕರ್ಮಚಾರಿಗಳಿಗೆ ತೊಂದರೆ, ಕಿರುಕುಳ ಆದರೆ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ, ಮಾಹಿತಿ ನೀಡಬೇಕು ಮತ್ತು ಆಯೋಗಕ್ಕೆ ದೂರು ಸಲ್ಲಿಸಲು ಬಯಸಿದಲ್ಲಿ ದೂರವಾಣಿ ಸಂಖ್ಯೆ: 01124648924 ಗೆ ಕರೆ ಮಾಡಿ ತಿಳಿಸಬಹುದು ಅಥವಾ ಎನ್‌.ಸಿ.ಎಸ್.ಕೆ (NCSK) ವೆಬ್‌ಸೈಟ್ ಮೂಲಕ ತಮ್ಮ ದೂರು ದಾಖಲಿಸಬಹುದು. ಸೂಕ್ತ ತನಿಖೆ ನಡೆಸಿ ಪರಿಹರಿಸಲಾಗುವುದು ಮತ್ತು ತಪ್ಪು ಮಾಡಿದ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.