ಸುಂದರ ಸಮಾಜ ನಿರ್ಮಾಣಕ್ಕೆ ಜನಜಾಗೃತಿ ಅಗತ್ಯ: ಕಾಮತ್
KannadaprabhaNewsNetwork | Published : Oct 09 2023, 12:46 AM IST
ಸುಂದರ ಸಮಾಜ ನಿರ್ಮಾಣಕ್ಕೆ ಜನಜಾಗೃತಿ ಅಗತ್ಯ: ಕಾಮತ್
ಸಾರಾಂಶ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಮಂಗಳೂರು- ಬಜಪೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮತ್ತು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಸಹಯೋಗದಲ್ಲಿ ನಗರದ ಆರ್ಯಸಮಾಜ ಮರಾಠ ಭವನದಲ್ಲಿ ಭಾನುವಾರ ನಡೆದ ಗಾಂಧಿ ಸ್ಮೃತಿ- ಜನಜಾಗೃತಿ ಸಮಾವೇಶ
ಕನ್ನಡಪ್ರಭ ವಾರ್ತೆ ಮಂಗಳೂರು ದುಶ್ಚಟಗಳಿಂದ ಮುಕ್ತರಾಗಿ ಸುಂದರ ಸಮಾಜ ನಿರ್ಮಾಣ ಮಾಡಲು ಜನಜಾಗೃತಿ ಕಾರ್ಯಕ್ರಮಗಳು ಅಗತ್ಯ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಮಂಗಳೂರು- ಬಜಪೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮತ್ತು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಸಹಯೋಗದಲ್ಲಿ ನಗರದ ಆರ್ಯಸಮಾಜ ಮರಾಠ ಭವನದಲ್ಲಿ ಭಾನುವಾರ ನಡೆದ ಗಾಂಧಿ ಸ್ಮೃತಿ- ಜನಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಸಮಾವೇಶದಲ್ಲಿ ನೂತನ ನವಜೀವನ ಸದಸ್ಯರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವಿ.ಹೆಗ್ಗಡೆ ಮಾರ್ಗದರ್ಶನದಲ್ಲಿ ಮಹಾತ್ಮ ಗಾಂಧಿ ಅವರ ರಾಮರಾಜ್ಯದ ಕನಸು ಸಾಕಾರಗೊಳ್ಳುವ ದಿಕ್ಕಿನಲ್ಲಿ ಕೆಲಸಗಳು ನಡೆಯುತ್ತಿವೆ ಎಂದು ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಧರ್ಮಸ್ಥಳದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಎಲ್.ಎಚ್. ಮಂಜುನಾಥ್ ಆಶಯ ಭಾಷಣ ಮಾಡಿದರು. ಮದ್ಯವರ್ಜನ ಬಳಿಕ ನೆಮ್ಮದಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೇತೃತ್ವದಲ್ಲಿ ನಡೆದ ಮದ್ಯವರ್ಜನ ಶಿಬಿರಗಳ ಫಲಾನುಭವಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಕೊಣಾಜೆಯ ಯಮುನ ಮಾತನಾಡಿ, ಈ ಶಿಬಿರದಿಂದ ನಮ್ಮ ಬದುಕಲ್ಲಿ ಮಹತ್ತರ ಬದಲಾವಣೆ ಆಗಿದೆ. ಪತಿ ಈಗ ಮದ್ಯಪಾನ ಮಾಡುವುದನ್ನು ನಿಲ್ಲಿಸಿದ್ದಾರೆ. ಕಳೆದ ಏಳು ವರ್ಷದಿಂದ ನೆಮ್ಮದಿಯ ಜೀವನ ಸಾಗಿಸುತ್ತಿದ್ದೇವೆ. ಮನೆ ಕಟ್ಟಿದೆವು. ಇಬ್ಬರು ಹೆಣ್ಣು ಮಕ್ಕಳಲ್ಲಿ ಒಬ್ಬಳು ಉದ್ಯೋಗಕ್ಕೆ ಸೇರಿದ್ದಾಳೆ. ಇನ್ನೊಬ್ಬಳು ಕಾಲೇಜಿನಲ್ಲಿ ಓದುತ್ತಿದ್ದಾಳೆ ಎಂದು ಸಂತಸ ವ್ಯಕ್ತಪಡಿಸಿದರು. ಅಖಿಲ ಜನಜಾಗೃತಿ ವೇದಿಕೆ ಜಿಲ್ಲಾ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಪಾಲಿಕೆ ಪ್ರತಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಸದಸ್ಯೆ ವೀಣಾ ಮಂಗಳ, ಜಪ್ಪಿನಮೊಗರು ಶ್ರೀ ಗಣೇಶೋತ್ಸವ ಸೇವಾಸಮಿತಿ ಅಧ್ಯಕ್ಷ ನಾಗೇಂದ್ರ ಕುಮಾರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಪ್ರಗತಿಬಂಧು ಕೇಂದ್ರ ಒಕ್ಕೂಟ ಮಂಗಳೂರು ಅಧ್ಯಕ್ಷ ಸತೀಶ್ ಕುಂಪಲ, ಬಜಪೆ ಒಕ್ಕೂಟ ಅಧ್ಯಕ್ಷ ಹರೀಶ್ಚಂದ್ರ ಕೋಟ್ಯಾನ್, ನ್ಯಾಯವಾದಿ ಮಹಮ್ಮದ್ ಇಸ್ಮಾಯಿಲ್ ಮತ್ತಿತರರಿದ್ದರು.