ಸಾರಾಂಶ
ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಹಣ ವ್ಯಯ ಮಾಡುತ್ತಿದ್ದು, ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ಗಮನ ಹರಿಸಿದೆ. ಇಂಥ ಸಂದರ್ಭದಲ್ಲಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕೊರತೆಯಾಗದಂತೆ ಶಿಕ್ಷಕರು ಕಾಳಜಿ ವಹಿಸಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಕನ್ನಡಪ್ರಭ ವಾರ್ತೆ ಹಾನಗಲ್ಲ
ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಹಣ ವ್ಯಯ ಮಾಡುತ್ತಿದ್ದು, ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ಗಮನ ಹರಿಸಿದೆ. ಇಂಥ ಸಂದರ್ಭದಲ್ಲಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕೊರತೆಯಾಗದಂತೆ ಶಿಕ್ಷಕರು ಕಾಳಜಿ ವಹಿಸಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.ಹಾನಗಲ್ಲ ತಾಲೂಕಿನ ವಾಸನ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಕೊಠಡಿ ಉದ್ಘಾಟಿಸಿ ಅವರು ಮಾತನಾಡಿದರು. ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾದರೆ ಕ್ಲಸ್ಟರ್ ವ್ಯಾಪ್ತಿಯ ಹತ್ತಿರದ ಇನ್ನೊಂದು ಶಾಲೆಗೆ ಮಕ್ಕಳನ್ನು ಕರೆದೊಯ್ಯುವ ಆಲೋಚನೆ ನಡೆದಿದೆ. ಇದರಿಂದ ಸೌಲಭ್ಯ, ಶಿಕ್ಷಕ ಕೊರತೆ ಉಂಟಾಗದಂತೆ ನೋಡಿಕೊಳ್ಳಬಹುದಾಗಿದೆ. ಮಧ್ಯಾಹ್ನದ ಬಿಸಿಯೂಟ, ಪೌಷ್ಟಿಕಾಂಶವುಳ್ಳ ಆಹಾರ ಪದಾರ್ಥ, ಸಮವಸ್ತ್ರ, ಪುಸ್ತಕ ಸೇರಿದಂತೆ ಎಲ್ಲ ಅಗತ್ಯತೆಗಳನ್ನೂ ಸರ್ಕಾರ ಪೂರೈಸುತ್ತಿದೆ. ತರಬೇತಿ ಪಡೆದ ನುರಿತ ಶಿಕ್ಷಕರನ್ನೂ ನಿಯೋಜಿಸುತ್ತಿದೆ. ಇಂಥ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕಡಿಮೆಯಾಗದಂತೆ ಕಾಳಜಿ ವಹಿಸುವ ಅಗತ್ಯವಿದೆ ಎಂದರು.
ಬಿಇಒ ವಿ.ವಿ. ಸಾಲಿಮಠ, ಕೂಸನೂರು ಗ್ರಾಪಂ ಅಧ್ಯಕ್ಷ ವೀರಭದ್ರಗೌಡ ಪಾಟೀಲ, ಮುಖಂಡರಾದ ಉಮೇಶ ಗೌಳಿ, ಪ್ರಕಾಶ ಬಣಕಾರ, ಅನಿತಾ ಶಿವೂರ, ವಿ.ಟಿ. ಪಾಟೀಲ, ಜಯಮ್ಮ ಮಳೆಣ್ಣನವರ, ವಸಂತ ವೆಂಕಟಾಪೂರ, ಎಸ್‌ಡಿಎಂಸಿ ಅಧ್ಯಕ್ಷ ಉಮೇಶ ತಳವಾರ, ಉಪಾಧ್ಯಕ್ಷ ಶ್ರೀಕಾಂತ ಹಾದಿಮನಿ, ಅನಿಲ ಚಿಕ್ಕಾಂಶಿ, ಅರವಿಂದ ದೇಸಾಯಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.