ಶಾಂತಿ ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕ ಸಹಕಾರ ಅಗತ್ಯ: ಗಿರಿ

| Published : Feb 24 2025, 12:35 AM IST

ಶಾಂತಿ ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕ ಸಹಕಾರ ಅಗತ್ಯ: ಗಿರಿ
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕರು ನೀಡುವ ಯಾವುದೇ ಮಾಹಿತಿಯನ್ನು ನಾವು ಬಹಿರಂಗ ಗೊಳಿಸುವುದಿಲ್ಲ. ಹಾಗಾಗಿ ಯಾವುದೇ ಭಯವಿಟ್ಟುಕೊಳ್ಳದೆ, ಮುಕ್ತವಾಗಿ ಸಮಾಜದಲ್ಲಿ ನಡೆಯುವ ಆಹಿತಕರ ಘಟನಾವಳಿಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಿ.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ನಿಮ್ಮ ಸುತ್ತಮುತ್ತ ಕಾನೂನು ಬಾಹಿರ ಚಟುವಟಿಕೆಗಳು ಅಥವಾ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಘಟನೆಗಳು ನಡೆಯುವುದು ಕಂಡು ಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ. ಶಾಂತ ಸಮಾಜದ ನಿರ್ಮಾಣಕ್ಕೆ ಪೊಲೀಸರೊಂದಿಗೆ ನಾಗರಿಕರ ಸಹಭಾಗಿತ್ವ ಸಹ ಮುಖ್ಯ ಎಂದು ಡಿವೈಎಸ್‌ಪಿ ಕೆ.ಸಿ. ಗಿರಿ ತಿಳಿಸಿದರು.

ತಾಲೂಕಿನ ಹುಣಸನಹಳ್ಳಿ ಗ್ರಾಮದ ಶ್ರೀ ಬಿಸಿಲಮ್ಮ ದೇವಸ್ಥಾನ ಆವರಣದಲ್ಲಿ ಆಯೋಜಿಸಲಾಗಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಸಹ ಅಗತ್ಯ ಎಂದರು.

ನಿಮ್ಮ ಸುತ್ತಲಿನ ಪರಿಸರದಲ್ಲಿ ಗಾಂಜಾ ಬೆಳೆಯುವವರಾಗಲಿ, ಮಾರಾಟ ಮಾಡುವುದಾಗಲಿ, ವಿಧ್ವಂಸಕ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡು ಬಂದರೆ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಿಕೊಂಡರು.

ನಾಗರಿಕ ಸಮಾಜದಲ್ಲಿ ಬದುಕುತ್ತಿರುವ ನಾವು ನಮ್ಮ ಮನೆಯ ವಿಚಾರಕ್ಕೆ ಮಾತ್ರ ಸೀಮೀತರಾಗಿರದೇ, ಅಕ್ಕಪಕ್ಕ ಏನೇನು ನಡೆಯುತ್ತದೆ, ಇದರಿಂದ ಸಮಾಜಕ್ಕೆ ತೊಂದರೆ ಉಂಟಾಗುತ್ತಿದೆಯೇ ಎಂದು ಒಮ್ಮೆ ಯೋಚಿಸಿದರೆ ಪೊಲೀಸರ ಅರ್ಧ ಕೆಲಸ ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ನಮ್ಮೊಡನೆ ಸಹಕರಿಸುವಂತೆ ಮನವಿ ಮಾಡಿಕೊಂಡರು.

ಗ್ರಾಮಾಂತರ ವೃತ್ತ ನಿರೀಕ್ಷಕ ಕೃಷ್ಣ ಮಾತನಾಡಿ, ಸಾರ್ವಜನಿಕರು ನೀಡುವ ಯಾವುದೇ ಮಾಹಿತಿಯನ್ನು ನಾವು ಬಹಿರಂಗ ಗೊಳಿಸುವುದಿಲ್ಲ. ಹಾಗಾಗಿ ಯಾವುದೇ ಭಯವಿಟ್ಟುಕೊಳ್ಳದೆ, ಮುಕ್ತವಾಗಿ ಸಮಾಜದಲ್ಲಿ ನಡೆಯುವ ಆಹಿತಕರ ಘಟನಾವಳಿಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಿ. ಪೊಲೀಸರು ನಿಮ್ಮ ಸೇವೆಗಾಗಿಯೇ ಇರುವುದು ಎಂಬುದು ನೆನಪಿನಲ್ಲಿಟ್ಟುಕೊಂಡು, ಶಾಂತಿ ಸುವ್ಯವಸ್ಥೆ, ಕಾನೂನು ಪರಿಪಾಲನೆಗೆ ಸಹಕಾರ ನೀಡುವಂತೆ ಮನವಿ ಮಾಡಿದರು.

ಸಭೆಯಲ್ಲಿ ಅಕ್ಕೂರು ಪೊಲೀಸ್ ಠಾಣೆಯ ಪಿಎಸ್‌ಯ ಬಸವರಾಜು, ನಂದೀಶ್, ನಾಗರಾಜು ಸೇರಿದಂತೆ ಹಲವರು ಇದ್ದರು.

ಪೋಟೊ೨೨ಸಿಪಿಟಿ೧: ತಾಲೂಕಿನ ಹುಣಸನಹಳ್ಳಿ ಗ್ರಾಮದ ಬಿಸಿಲಮ್ಮ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷ ಕೃಷ್ಣ ಮಾತನಾಡಿದರು.