ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಮತ್ತು ಕೀರ್ತಿಶೇಷ ಕುಂಬ್ಳೆ ಸುಂದರ ರಾವ್ ಸಂಸ್ಮರಣಾ ಸಮಿತಿ ಜಂಟಿಯಾಗಿ ಕೆನರಾ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಕುಂಬ್ಳೆ ಸಂಸ್ಮರಣಾ ಕಾರ್ಯಕ್ರಮ ಏರ್ಪಡಿಸಿತು.
ಮಂಗಳೂರು: ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಮತ್ತು ಕೀರ್ತಿಶೇಷ ಕುಂಬ್ಳೆ ಸುಂದರ ರಾವ್ ಸಂಸ್ಮರಣಾ ಸಮಿತಿ ಜಂಟಿಯಾಗಿ ಕೆನರಾ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಕುಂಬ್ಳೆ ಸಂಸ್ಮರಣಾ ಕಾರ್ಯಕ್ರಮ ಏರ್ಪಡಿಸಿತು.
ಇದೇ ವೇಳೆ ಯಕ್ಷಗಾನ ಹಿರಿಯ ಭಾಗವತ ಪುತ್ತಿಗೆ ರಘುರಾಮ ಹೊಳ್ಳ ಅವರಿಗೆ ಕೀರ್ತಿಶೇಷ ಕುಂಬ್ಳೆ ಸುಂದರ ರಾವ್ ಸಂಸ್ಮರಣಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಸಂಸ್ಮರಣಾ ಭಾಷಣ ಮಾಡಿದ ಹಿರಿಯ ವಿದ್ವಾಂಸ ಡಾ.ಪ್ರಭಾಕರ ಜೋಶಿ, ಕುಂಬ್ಳೆ ಸುಂದರ ರಾವ್ ಅವರು ತಾಳಮದ್ದಳೆ, ಅರ್ಥಗಾರಿಕೆಗೆ ಹೊಸ ರೂಪ ಕೊಟ್ಟವರು. ಶಾಸಕರಾಗಿ, ಅಕಾಡೆಮಿ ಅಧ್ಯಕ್ಷರಾಗಿ, ರಾಷ್ಟ್ರ, ಅಂತಾರಾಷ್ಟ್ರೀಯ ಮನ್ನಣೆ ಪಡೆದಿದ್ದರು. ಅಸಾಧಾರಣವಾಗಿ ದೊಡ್ಡ ಸಿದ್ದಿ ಪಡೆದ ಅವರ ಸಾಧನೆ ಅಪಾರ ಎಂದು ಹೇಳಿದರು. ಮೂಲತಃ ಕುಂಬಳೆ ಮೂಲದವರಾದ ಅವರಿಗೆ ತನ್ನ ಮಿತಿಯ ಬಗ್ಗೆ ಚೆನ್ನಾಗಿ ತಿಳಿದಿತ್ತು. ಆ ಭಾಗದಲ್ಲಿ ಯಕ್ಷಗಾನ ಸಮೃದ್ಧ ಇರುವಾಗಲೇ ಕುಂಬ್ಳೆ ಅವರು ರೂಪುಗೊಂಡರು. ತಾಳಮದ್ದಲೆಯಲ್ಲಿ ಅವರ ಜೊತೆಗಾರನಾಗಿ ಅನೇಕ ಪ್ರಸಂಗದಲ್ಲಿ ಗುರುತಿಸಿಕೊಂಡಿದ್ದೆ. ಕನ್ನಡ ಕಾವ್ಯದ ಜೀವಂತ ಪ್ರಭಾವ ಅವರ ಅರ್ಥಗಾರಿಕೆಯಲ್ಲಿತ್ತು. ಯಕ್ಷಗಾನ ಶ್ರೀಮಂತಗೊಳಿಸಿದ, ರಾಜಕೀಯದಲ್ಲಿಯೂ ಯಕ್ಷಗಾನಕ್ಕೆ ಪ್ರಾತಿನಿಧ್ಯ ದೊರಕಿಸಿದ ಕೀರ್ತಿ ಕುಂಬ್ಳೆ ಅವರದ್ದು ಎಂದು ಅವರು ತಿಳಿಸಿದರು. ಹಿರಿಯ ಸಾಹಿತಿ ಡಾ.ನಾ.ದಾಮೋದರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಶಸ್ತಿಯು ಸನ್ಮಾನ ಪತ್ರ ಮತ್ತು 25,000 ರು. ನಗದು ಒಳಗೊಂಡಿದೆ. ಮಂಗಳೂರು ಬಸ್ ಮಾಲೀಕರ ಸಂಘದ ನಿಕಟಪೂರ್ವ ಅಧ್ಯಕ್ಷ ಜಯಶೀಲ ಅಡ್ಯಂತಾಯ, ನಾಟಕಕಾರ ನವೀನ್ ಶೆಟ್ಟಿ ಅಳಕೆ, ಕೆನರಾ ಪದವಿ ಪೂರ್ವ ಕಾಲೇಜಿನ ಡೀನ್ ಗೋಪಾಲಕೃಷ್ಣ ಶೆಟ್ಟಿ ಸೇರಿದಂತೆ ಕುಂಬ್ಳೆ ಸುಂದರ ರಾವ್ ಅವರ ಮನೆಯವರು, ಕುಟುಂಬದವರು, ಅಭಿಮಾನಿಗಳು ಭಾಗವಹಿಸಿದ್ದರು. ಶಶಿರಾಜ್ ಕಾವೂರು ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ‘ಅಂಗದ ಸಂಧಾನ’ ಯಕ್ಷಗಾನ ತಾಳಮದ್ದಳೆ ನಡೆಯಿತು.