ಪುತ್ತೂರು ಪುರಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್ ಪುತ್ತೂರು ಹಾಗೂ ಕಡಬ, ಸಮಾಜ ಕಲ್ಯಾಣ ಇಲಾಖೆ, ಪುತ್ತೂರು ನಗರ ಸಭೆ, ಕಡಬ ಪಟ್ಟಣ ಪಂಚಾಯತ್ ಆಶ್ರಯದಲ್ಲಿ ಸಂವಿಧಾನ ದಿನಾಚರಣೆ - 2025 ನೆರವೇರಿತು.

ಪುತ್ತೂರು: ಸದೃಢ ಹಾಗೂ ಸಮರ್ಪಕ ದೇಶದ ಮುನ್ನಡೆಗೆ ಸಂವಿಧಾನ ತಳಹದಿಯಾಗಿದ್ದು, ಅದರ ಮೌಲ್ಯವನ್ನು ಕಾಪಾಡುವ ಕಾರ್ಯವಾಗಬೇಕು. ಸಂವಿಧಾನಕ್ಕೆ ಗೌರವ ಸಲ್ಲಿಸುವ ಜತೆಗೆ ಅದನ್ನು ಅನುಸರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಪುತ್ತೂರು ಪ್ರಭಾರ ತಹಸೀಲ್ದಾರ್ ನಾಗರಾಜ್ ಹೇಳಿದರು.ಅವರು ನಗರದ ಪುರಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್ ಪುತ್ತೂರು ಹಾಗೂ ಕಡಬ, ಸಮಾಜ ಕಲ್ಯಾಣ ಇಲಾಖೆ, ಪುತ್ತೂರು ನಗರ ಸಭೆ, ಕಡಬ ಪಟ್ಟಣ ಪಂಚಾಯತ್ ಆಶ್ರಯದಲ್ಲಿ ನಡೆದ ಸಂವಿಧಾನ ದಿನಾಚರಣೆ - 2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂಸ್ಮರಣಾ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕ ಲಕ್ಷ್ಮೀಕಾಂತ್, 2 ವರ್ಷ 11 ತಿಂಗಳು ತಜ್ಞರ ಶ್ರಮದಿಂದ ಸಂವಿಧಾನ ರಚನೆಯಾಗಿದೆ. ಎಲ್ಲಾ ವರ್ಗದ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ರಚನೆಯಾದ ಸಂವಿಧಾನ ಭದ್ರವಾಗಿದೆ ಮತ್ತು ದೇಶಕ್ಕೆ ದಿಕ್ಸೂಚಿಯಂತಿದೆ. ನಮ್ಮ ಕರ್ತವ್ಯಗಳನ್ನು ಸರಿಯಾಗಿ ಪಾಲಿಸಿದರೆ ಅದೇ ದೇಶಕ್ಕೆ ನಾವು ಕೊಡುವ ಕೊಡುಗೆ ಎಂದರು.ಅಧ್ಯಕ್ಷತೆ ವಹಿಸಿದ್ದ ಪುತ್ತೂರು ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ ಮಾತನಾಡಿ, ಅಸ್ತಿತ್ವಕ್ಕಾಗಿ ನಡೆಯುವ ಹೋರಾಟದಲ್ಲಿ ಶಕ್ತಿಶಾಲಿ ಬದುಕಿ ಉಳಿಯುತ್ತದೆ. ಇದೇ ರೀತಿಯಲ್ಲಿ ಭಾರತದಲ್ಲೂ ಶಕ್ತಿಶಾಲಿಗಳಿಂದ ದುರ್ಬಲರ ಮೇಲೆ ನಿರಂತರ ಶೋಷಣೆ ನಡೆಯುತ್ತಿತ್ತು. ಮನುಷ್ಯರಿಗೆ ನಾಗರಿಕತೆಯಿದ್ದು, ಸಮಾನತೆಯಿಂದ ಬದುಕು ನಡೆಸಬೇಕಾಗಿದೆ. ಶೋಷಿತರಿಗೆ ನ್ಯಾಯ ನೀಡುವ ನಿಟ್ಟಿನಲ್ಲಿ ಸ್ವಾತಂತ್ರ್ಯದ ಸಂದರ್ಭದಲ್ಲಿ ಸಂವಿಧಾನದ ರಚನೆಯಾಗಿದೆ. ಧಮನಿತರನ್ನು ಗುರಿಯಾಗಿಟ್ಟುಕೊಂಡು ಭಾರತದ ಸಂವಿಧಾನ ರಚನೆಯಾಗಿದೆ. ಈ ಕಾರಣದಿಂದ ಭಾರತದ ಸಂವಿಧಾನ ವಿಶೇಷವಾಗಿದೆ ಎಂದರು.ಈ ಸಂದರ್ಭ ಸಂವಿಧಾನ ದಿನಾಚರಣೆಯ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಸಂವಿಧಾನ ಪೀಠಿಕೆಯನ್ನು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಎಚ್. ವಾಚಿಸಿದರು.ನಗರ ಸಭೆ ಪೌರಾಯುಕ್ತೆ ವಿದ್ಯಾ ಎಸ್. ಕಾಳೆ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣು ಪ್ರಸಾದ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸುನಿತ ಕುಮಾರಿ, ದಲಿತ ಸಂಘದ ಅಧ್ಯಕ್ಷ ಅಣ್ಣಪ್ಪ ಬಿ.ಕೆ., ಜಿಲ್ಲಾ ಮುಖಂಡ ಶೇಷಪ್ಪ ನೆಕ್ಕಿಲು ಮತ್ತಿತರರು ಉಪಸ್ಥಿತರಿದ್ದರು.ಶಿಕ್ಷಕ ಸತೀಶ್ ತುಂಬ್ಯ ಸ್ವಾಗತಿಸಿದರು. ಬಲ್ನಾಡು ಮೊರಾರ್ಜಿ ದೇಸಾಯಿ ವಸತಿಯುತ ಶಾಲೆಯ ಪ್ರಾಂಶುಪಾಲ ಅರುಣ್ ಕುಮಾರ್ ಬಹುಮಾನಿತರ ಪಟ್ಟಿ ವಾಚಿಸಿದರು. ವಾರ್ಡನ್ ಪ್ರೇಮಲತಾ ವಂದಿಸಿದರು. ಶಿಕ್ಷಕಿ ವಿನತ ಕಾರ್ಯಕ್ರಮ ನಿರ್ವಹಿಸಿದರು.

ದರ್ಬೆಯಿಂದ ಕಿಲ್ಲೆ ಮೈದಾನದವರೆಗೆ ಕಾಲ್ನಡಿಗೆ ಜಾಥಾ ನಡೆಯಿತು. ಸಂವಿಧಾನ ಪರ ಘೋಷಣೆ, ಭಿತ್ತಿ ಪತ್ರ ಪ್ರದರ್ಶನ ನಡೆಯಿತು.