ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಶುಕ್ರವಾರ ಪ್ರಥಮ ಬಾರಿಗೆ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡುತ್ತಿದ್ದಾರೆ. ಅವರು ಪರ್ಯಾಯ ಶ್ರೀಮದುಪೇಂದ್ರ ತೀರ್ಥ ಸಂಸ್ಥಾನ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಆಯೋಜಿಸಿರುವ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಭಾಗವಹಿಸಲಿದ್ದಾರೆ.

ಉಡುಪಿ: ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಶುಕ್ರವಾರ ಪ್ರಥಮ ಬಾರಿಗೆ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡುತ್ತಿದ್ದಾರೆ. ಅವರು ಪರ್ಯಾಯ ಶ್ರೀಮದುಪೇಂದ್ರ ತೀರ್ಥ ಸಂಸ್ಥಾನ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಆಯೋಜಿಸಿರುವ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಭಾಗವಹಿಸಲಿದ್ದಾರೆ.

ಪುತ್ತಿಗೆ ಶ್ರೀಗಳು ಒಂದು ಕೋಟಿಗೂ ಅಧಿಕ ಭಕ್ತರಿಂದ ಭಗವದ್ಗೀತೆ ಲೇಖನ ಅಭಿಯಾನವನ್ನು ನಡೆಸಿದ್ದು, ಅದರ ಕೃಷ್ಣಾರ್ಪಣೆಯಂಗವಾಗಿ, ಶುಕ್ರವಾರ ಒಂದು ಲಕ್ಷಕ್ಕೂ ಅಧಿಕ ಮಂದಿ ಭಗವದ್ಗೀತೆಯನ್ನು ಬೆಳಗ್ಗೆ 9 ಗಂಟೆಯಿಂದ ಏಕಕಾಲದಲ್ಲಿ ಪಠಿಸಲಿದ್ದಾರೆ. ಈ ಕಾರ್ಯಕ್ರಮದ ಕೊನೆಯಲ್ಲಿ, ಮಧ್ಯಾಹ್ನ 12 ಗಂಟೆಗೆ ಪ್ರಧಾನಿ ಮೋದಿ ಅವರು ಭಗವದ್ಗೀತೆಯ 18ನೇ ಅಧ್ಯಾಯದ ಕೊನೆಯ 10 ಶ್ಲೋಕ ಹಾಗೂ ಪುರುಷೋತ್ತಮ ಯೋಗದ ಶ್ಲೋಕಗಳನ್ನು ಪಠಿಸಲಿದ್ದಾರೆ.

ಇದಕ್ಕೆ ಮೊದಲು ಕನಕನ ಕಿಂಡಿಯ ಮೂಲಕ ಶ್ರೀ ಕೃಷ್ಣನ ದರ್ಶನ ಪಡೆಯಲಿರುವ ಮೋದಿ ಅವರು, ಪರ್ಯಾಯ ಶ್ರೀಗಳ ಸಂನ್ಯಾಸ ದೀಕ್ಷೆಯ 50ನೇ ವರ್ಷಾಚರಣೆಯ ಅಂಗವಾಗಿ ಶ್ರೀ ಮಠದಲ್ಲಿ 2 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸುವರ್ಣ ತೀರ್ಥ ಮಂಟಪವನ್ನು ಮತ್ತು ಕನಕನ ಕಿಂಡಿಯ ಚಿನ್ನದ ಕವಚಗಳನ್ನು ಉದ್ಘಾಟಿಸಲಿದ್ದಾರೆ.

ನಂತರ ಶ್ರೀ ಕೃಷ್ಣನ ಪಾರಂಪರಿಕ ಚಿನ್ನಾಭರಣಗಳು, ಚಿನ್ನದ ಪಾಲಕ್ಕಿಗಳನ್ನು ವೀಕ್ಷಿಸಿ, ಸರ್ವಜ್ಞ ಪೀಠದ ದರ್ಶನ ಪಡೆಯಲಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀಕೃಷ್ಣನ ಎದುರು ಪುತ್ತಿಗೆ ಶ್ರೀಗಳಿಂದ ಗೀತಾ ಲೇಖನ ಯಜ್ಞ ದೀಕ್ಷೆ ಸ್ವೀಕರಿಸುತ್ತಾರೆ. ನಂತರ ಚಂದ್ರಶಾಲೆಯಲ್ಲಿ ಪೇಜಾವರ ಶ್ರೀಗಳು ಮತ್ತು ಅಷ್ಟ ಮಠಾಧೀಶರನ್ನು ಭೇಟಿಯಾಗಲಿದ್ದಾರೆ.ಅಲ್ಲಿಂದ ಮೋದಿ ಅವರು ನೇರವಾಗಿ ಲಕ್ಷ ಕಂಠ ಗೀತಾ ಪಾರಾಯಣ ಸಭಾಂಗಣಕ್ಕೆ ಆಗಮಿಸಲಿದ್ದಾರೆ. ಅಲ್ಲಿ 1 ಲಕ್ಷಕ್ಕೂ ಅಧಿಕ ಮಂದಿಯೊಂದಿಗೆ ಗೀತೆಯ ಶ್ಲೋಕಗಳನ್ನು ಪಠಿಸುತ್ತಾರೆ. ನಂತರ ನಡೆಯುವ ಸಮಾರಂಭದಲ್ಲಿ ಗೀತಾ ಸಂದೇಶ ನೀಡಲಿದ್ದಾರೆ. ಅವರನ್ನು ಪುತ್ತಿಗೆ ಶ್ರೀಗಳು ವಿಶಿಷ್ಟ ರೀತಿಯಲ್ಲಿ ಸನ್ಮಾನಿಸಲಿದ್ದಾರೆ.

ಅಲ್ಲಿಂದ ಅಪರಾಹ್ನ 1 ಗಂಟೆಗೆ ಮೋದಿ ಅವರು ಸೇನಾ ಹೆಲಿಕ್ಯಾಪ್ಟರ್‌ನಲ್ಲಿ ಪರ್ತಗಾಳಿ ಮಠದ ಗುರುಪರಂಪರೆಯ 550ನೇ ವರ್ಷಾಚರಣೆಯಲ್ಲಿ ಭಾಗವಹಿಸಲು ಗೋವಾಕ್ಕೆ ತೆರಳುತ್ತಾರೆ.ಉಡುಪಿಗೆ ಗಣ್ಯರ ದಂಡು:

ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್, ರಾಜ್ಯದ ಸಚಿವ ಸುರೇಶ್ ಭೈರತಿ, ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಉಡುಪಿ ಜಿಲ್ಲೆಯ ಶಾಸಕರು ಭಾಗವಹಿಸಲಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಮೋದಿ ಅವರನ್ನು ಸ್ವಾಗತಿಸಲಿದ್ದಾರೆ.7000 ಪೊಲೀಸರ ಸರ್ಪಗಾವಲು...

ಪ್ರಧಾನಿ ಮೋದಿ ಅವರ ಭೇಟಿಯ ಹಿನ್ನೆಲೆಯಲ್ಲಿ ಉಡುಪಿ ನಗರವನ್ನು ಪೊಲೀಸರು ಸಂಪೂರ್ಣ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಮೋದಿ ಅವರು ನಾರಾಯಣಗುರು ವೃತ್ತದಿಂದ ಕಲ್ಸಂಕ ವೃತ್ತದವರೆಗೆ 1 ಕಿ.ಮೀ. ರೋಡ್ ಶೋ ನಡೆಸಲಿದ್ದಾರೆ. ಈ ಮಾರ್ಗದ ಇಕ್ಕೆಲಗಳಲ್ಲಿ 30 ಸಾವಿರ ಮಂದಿ ನಿಂತು ಮೋದಿ ಅವರನ್ನು ಮೋಡುವುದಕ್ಕೆ ಬ್ಯಾರಿಕೇಡ್ ಹಾಕಿ ವ್ಯವಸ್ಥೆ ಮಾಡಲಾಗಿದೆ, ಬಂದೋಬಸ್ತ್‌ಗೆ 7 ಜಿಲ್ಲೆಗಳಿಂದ ಸಶಸ್ತ್ರ ಮೀಸಲು ಪಡೆ, ಬಾಂಬ್ ಸ್ಕ್ವಾಡ್, ರ್ಯಾಪಿಡ್ ಆಕ್ಷನ್ ಫೋರ್ಸ್, ಆ್ಯಂಟಿ ಟೆರರಿಸ್ಟ್ ಸ್ಕ್ವಾಡ್ ಸೇರಿದಂತೆ 7,000 ಮಂದಿ ಪೊಲೀಸರನ್ನು ಉಡುಪಿಗೆ ಕರೆಸಿಕೊಳ್ಳಲಾಗಿದೆ.

ಮೋದಿಗೆ ಶ್ರೀಗಳಿಂದ 4 ಆಗ್ರಹಗಳು...

ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ * ಉಡುಪಿ ಕಾರಿಡಾರ್ ನಿರ್ಮಾಣ ಮಾಡಬೇಕು,

* ಗೀತಾ ಜಯಂತಿಗೆ ರಾಷ್ಟ್ರೀಯ ರಜೆ ನೀಡಬೇಕು

* ಸಮಗ್ರ ಗೋರಕ್ಷಣೆ ಕಾನೂನು ಜಾರಿ ಮಾಡಬೇಕು

* ಸಮಾನ ನಾಗರಿಕ ಸಂಹಿತೆ ಜಾರಿ ಮಾಡಬೇಕು ಎಂಬ ಬೇಡಿಕೆಗಳ ಬಗ್ಗೆ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಆಗ್ರಹಪೂರ್ವಕ ಮನವಿ ಸಲ್ಲಿಸಲಿದ್ದಾರೆ.