ಆರ್. ಧ್ರುವನಾರಾಯಣ ಹುಟ್ಟುಹಬ್ಬದ ಪ್ರಯುಕ್ತ ಉದ್ಯೋಗ ಮೇಳ ನಾಳೆ

| Published : Jul 30 2025, 12:45 AM IST

ಸಾರಾಂಶ

ಮೈಸೂರು-ಚಾಮರಾಜನಗರ ಜಿಲ್ಲೆಗಳ ನಿರುದ್ಯೋಗಿ ಯುವಕರಿಕೆ ಉದ್ಯೋಗಾವಕಾಶ ಕಲ್ಪಿಸುವ ಸಲುವಾಗಿ ಉದ್ಯೋಗ ಮೇಳವನ್ನು ಆಯೋಜಿಸಿದ್ದು, 97 ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಂಡು ತಮ್ಮ ಕಂಪನಿಗಳಿಗೆ ಯುವಕರನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ.

ಕನ್ನಡಪ್ರಭ ವಾರ್ತೆ ನಂಜನಗೂಡು

ಮಾಜಿ ಸಂಸದ ದಿ ಆರ್. ಧ್ರುವನಾರಾಯಣ ಅವರ 64 ನೇ ಹುಟ್ಟುಹಬ್ಬದ ಸ್ಮರಣಾರ್ಥವಾಗಿ ಜು. 31ರ ಗುರುವಾರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಸಿ.ಎಂ. ಶಂಕರ್ ಹೇಳಿದರು.

ಶಾಸಕ ದರ್ಶನ್ ಧ್ರುವನಾರಾಯಣ ಅವರ ನೇತೃತ್ವದಲ್ಲಿ ಮೈಸೂರು-ಚಾಮರಾಜನಗರ ಜಿಲ್ಲೆಗಳ ನಿರುದ್ಯೋಗಿ ಯುವಕರಿಕೆ ಉದ್ಯೋಗಾವಕಾಶ ಕಲ್ಪಿಸುವ ಸಲುವಾಗಿ ಉದ್ಯೋಗ ಮೇಳವನ್ನು ಆಯೋಜಿಸಿದ್ದು, 97 ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಂಡು ತಮ್ಮ ಕಂಪನಿಗಳಿಗೆ ಯುವಕರನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಮಾಜಿ ಸಂಸದ ಡಿ.ಕೆ. ಸುರೇಶ್, ಸಂಸದ ಸುನಿಲ್ ಬೋಸ್, ಶಾಸಕರಾದ ಡಾ. ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು, ಗಣೇಶ್ ಪ್ರಸಾದ್ ಭಾಗವಹಿಸಲಿದ್ದಾರೆ ಎಂದರು.

ರೇಲ್ವೆ ಮೇಲ್ಸೇತುವೆಗೆ ವಿ. ಶ್ರೀನಿವಾಸ ಪ್ರಸಾದ್ ಹೆಸರು ನಾಮಕರಣ: ನಗರಸಭೆ ಅಧ್ಯಕ್ಷ ಶ್ರೀಕಂಠಸ್ವಾಮಿ ಮಾತನಾಡಿ, ನಗರದಲ್ಲಿ 80 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ರೇಲ್ವೆ ಮೇಲ್ಸೇತುವೆಗೆ ಶಾಸಕ ದರ್ಶನ್ ಧ್ರುವನಾರಾಯಣ ಅವರ ಆಶಯದಂತೆ ಧ್ರುವನಾರಾಯಣ ಅವರ ಹುಟ್ಟುಹಬ್ಬದಂದು ಮಾಜಿ ಸಂಸದ ವಿ. ಶ್ರೀನಿವಾಸ ಪ್ರಸಾದ್ ಅವರ ಹೆಸರನ್ನು ನಾಮಕರಣ ಮಾಡಲು ನಗರಸಭಾ ಆಡಳಿತ ತೀರ್ಮಾನಿಸಿದೆ. ರೇಲ್ವೆ ಮೇಲ್ಸೇತುವೆಗೆ ಹೆಸರನ್ನು ಇಡುವ ವಿಚಾರದಲ್ಲಿ ಧ್ರುವನಾರಾಯಣ ಹಾಗೂ ಶ್ರೀನಿವಾಸ ಪ್ರಸಾದ್ ಅವರ ಅಭಿಮಾನಿಗಳ ನಡುವೆ ಗೊಂದಲ ಉಂಟಾಗಿತ್ತು, ನಮ್ಮ ಭಾಗದ ಮುತ್ಸದ್ದಿ ರಾಜಕಾರಣಿಗಳಾಗಿದ್ದ ಇಬ್ಬರು ನಾಯಕರ ಕುಟುಂಬಗಳು ಸೇರಿ ಸೌಹಾರ್ದಯುತವಾಗಿ ಚರ್ಚಿಸಿ, ಮಾಜಿ ಸಂಸದ ವಿ. ಶ್ರೀನಿವಾಸ ಪ್ರಸಾದ್ ಅವರ ಹೆಸರನ್ನು ನಾಮಕರಣ ಮಾಡಲು ತೀರ್ಮಾನಿಸಿದೆ ಎಂದರು.

ನಗರಸಭೆ ಸದಸ್ಯರಾದ ಪ್ರದೀಪ್, ಗಾಯಿತ್ರಿ, ರಮೇಶ್, ರವಿ ಇದ್ದರು.ಆರ್. ಧ್ರುವನಾರಾಯಣ ಹುಟ್ಟುಹಬ್ಬದ ಪ್ರಯುಕ್ತ ಆರೋಗ್ಯ ಮೇಳ ನಾಳೆ

ಕನ್ನಡಪ್ರಭ ವಾರ್ತೆ ನಂಜನಗೂಡು

ಮಾಜಿ ಸಂಸದ ದಿ. ಆರ್. ಧ್ರುವನಾರಾಯಣ ಅವರ 64ನೇ ಹುಟ್ಟುಹಬ್ಬದ ಸ್ಮರಣಾರ್ಥವಾಗಿ ಜು. 31ರಂದು ಲಯನ್ಸ್ ಕ್ಲಬ್ ಮತ್ತು ಆರ್‌. ಧ್ರುವನಾರಾಯಣ್ ಅಭಿಮಾನಿಗಳ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಆಶ್ರಯದಲ್ಲಿ ಆರೋಗ್ಯ ಮೇಳವನ್ನು ಆಯೋಜಿಸಲಾಗಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಕೆ. ಮಹೇಶ್ ತಿಳಿಸಿದರು.

ಆರೋಗ್ಯ ಮೇಳದಲ್ಲಿ ಕಣ್ಣಿನ ತಪಾಸಣಾ ಶಿಬಿರ, ಹೃದಯ ತಪಾಸಣಾ ಶಿಬಿರ, ರಕ್ತದಾನ ಶಿಬಿರಗಳನ್ನು ಆಯೋಜಿಸಿದೆ. ರಕ್ತದಾನ ಶಿಬಿರಕ್ಕೆ ಹೆಚ್ಚಾಗಿ ಯುವಕರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಸುದ್ದಿಗೋಷ್ಠಿಯಲ್ಲಿ ಅವರು ಮನವಿ ಮಾಡಿದರು.

ಎನ್.ಎಂ. ಮಂಜುನಾಥ್, ವಿಜಯ್ ಕುಮಾರ್, ಶ್ರೀನಿವಾಸ ಮೂರ್ತಿ, ಮುದ್ದುಮಾದಶೆಟ್ಟಿ, ಬಸವರಾಜು ಇದ್ದರು.