ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಬೌದ್ಧ ಧರ್ಮದಲ್ಲಿರುವ ಪ್ರತಿಮೆಗಳನ್ನು ಗಮನಿಸಿದರೆ ಅದರ ಬೆಳವಣಿಗೆಯ ಚಿತ್ರಣ ದೊರೆಯುತ್ತದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಶಲ್ವಪಿಳ್ಳೆ ಅಯ್ಯಂಗಾರ್ ತಿಳಿಸಿದರು.ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಮಂಗಳವಾರ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯು ಮಾಸಿಕ ಸರಣಿ ವಿಶೇಷ ಉಪನ್ಯಾಸದಲ್ಲಿ ಬುದ್ದಿಸ್ಟ್ ಪ್ರತಿಮಾಶಾಸ್ತ್ರ ಕುರಿತು ಮಾತನಾಡಿದ ಅವರು, ಬೌದ್ಧ ಧರ್ಮದ ಕುರಿತ ಪ್ರತಿಮೆಗಳು ಆತನ ಜೀವನದ ಕಥೆಯನ್ನು ಆಧರಿಸಿ ನಿರ್ಮಾಣಗೊಂಡಿವೆ ಎಂದರು.
ಬೌದ್ಧ ಧರ್ಮದ ಪ್ರತಿಮೆಗಳ ಬಗ್ಗೆ ಮಾಹಿತಿಯ ಕೊರತೆ ಇದೆ. ಉತ್ತರ, ಮಧುರಾ, ಗಾಂಧಾರದಲ್ಲಿ ಕಂಡು ಬರುವಂತೆ ಬೌದ್ಧ ಆರಾಧನೆ ಹಾಗೂ ಆಚರಣೆ ದಕ್ಷಿಣದ ಭಾಗದಲ್ಲಿಲ್ಲ. ಇಲ್ಲಿ ಬೌದ್ಧನ ಪ್ರತಿಮೆಯ ಪರಿಚಯವಷ್ಟೇ ಇದೆ. ಅವಲೋಕಿತೇಶ್ವರ, ದೃಕುಟಿ, ಅಮಿತಾಭಾ, ಅಕ್ಷೋಭ್ಯ ಮುಂತಾದ ಬುದ್ಧನ ಶಿಷ್ಯಂದಿರ ಪ್ರತಿಮೆಗಳ ಪರಿಚಯವಿಲ್ಲ ಎಂದರು.ಬುದ್ಧನ ಸಾವಿನ ನಂತರ ಹೀನಾಯಾನ, ಮಹಾಯಾನ ಪಂಥ ಆರಂಭವಾಯಿತು. ಮಹಾಯಾನ ಪಂಥವು ಬುದ್ಧನ ಅವಶೇಷಗಳಿಗೆ ಪೂಜೆ ಸಲ್ಲಿಸಲು ಸ್ತೂಪಗಳನ್ನು ನಿರ್ಮಿಸಿದರು. ಶಾರೀರಿಕ ಧಾತು, ಪರಿನಿರ್ದೇಶಿತ ಧಾತು, ಪಾರಿಭಾಷಿಕ ಧಾತುಗಳನ್ನು ಸ್ತೂಪದಲ್ಲಿಟ್ಟು ಆರಾಧಿಸಲಾಯಿತು. ನಂತರದ ದಿನಗಳಲ್ಲಿ ಬುದ್ಧನ ಶಿಷ್ಯಂದಿರಿಗೂ ಪೂಜೆ ಸಲ್ಲಿಸಲಾಯಿತು. ಅವರ ಪ್ರತಿಮೆಗಳೂ ನಿರ್ಮಾಣವಾದವು. ಬಾರ್ ಹೂತ್ ಮುಂತಾದ ಸ್ತೂಪದಲ್ಲಿ ಮನುಕುಲಕ್ಕೆ ಸಂದೇಶ ನೀಡುವ ಬುದ್ಧನ ಜಾತಕ ಕಥೆಗಳನ್ನು ಚಿತ್ರಿಸಿದರು. ಕ್ರಮೇಣ ಬುದ್ಧನ ಮುದ್ರೆ, ಚಿಹ್ನೆ, ಪಾದುಕೆ ಹಾಗೂ ಸಂಕೇತವುಳ್ಳ ಪ್ರತಿಮೆಗಳು ಅಸ್ತಿತ್ವಕ್ಕೆ ಬಂದವು ಎಂದು ಅವರು ವಿವರಿಸಿದರು.
ಪುರಾತತ್ವ, ವಸ್ತುಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಆಯುಕ್ತ ಎ. ದೇವರಾಜು ಮಾತನಾಡಿ, ಇಲಾಖೆಯು 118 ತಾಲೂಕಿನ ಪ್ರಾಚ್ಯ ವಸ್ತು ಸಂಗ್ರಹಣೆ ಕಾರ್ಯ ಮುಗಿಸಿದೆ. ಗ್ರಾಮದಲ್ಲಿರುವ ಸ್ಮಾರಕವನ್ನು ರಾಜ್ಯ ರಕ್ಷಿತ ಸ್ಮಾರಕ ಎಂದು ಗುರುತಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.ಪರಂಪರೆ ಇಲಾಖೆಯ ಉಪ ನಿರ್ದೇಶಕಿ ಡಾ.ಸಿ.ಎನ್. ಮಂಜುಳಾ, ಪುರಾತತ್ವ ಸಂರಕ್ಷಣಾ ಎಂಜಿನಿಯರ್ ಟಿ. ತಾರಕೇಶ್, ಅಂಬರೀಶ ಮೊದಲಾದವರು ಇದ್ದರು.ಸ್ಮಾರಕಗಳ ಬಗ್ಗೆ ಅಧಿಸೂಚನೆ ಹೊರಡಿಸಿದರೆ ಅದನ್ನು ನಾಶಪಡಿಸಲು ಸಾಧ್ಯವಿಲ್ಲ. ನಾಶ ಪಡಿಸಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಅವಕಾಶ ಇರುತ್ತದೆ. ಸ್ಮಾರಕ ಪರಂಪರೆಯ ಧ್ಯೂತಕ ಅವು ಆಯಾಯ ಕಾಲಘಟ್ಟದ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯ ಉದಾಹರಣೆಯಾಗಿ ಉಳಿದಿದೆ. ಅವುಗಳ ರಕ್ಷಣೆ ನಮ್ಮ ಹೊಣೆ.
- ಎ. ದೇವರಾಜು, ಆಯುಕ್ತ, ಪುರಾತತ್ವ, ಪರಂಪರೆ ಇಲಾಖೆ