ಭೂಮಿ ತಾಯಿ ಸೀಮಂತಕ್ಕೆ ಮಳೆ ಅಡ್ಡಿ

| Published : Oct 18 2024, 12:08 AM IST

ಭೂಮಿ ತಾಯಿ ಸೀಮಂತಕ್ಕೆ ಮಳೆ ಅಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿವರ್ಷ ಹಸಿರು ಸೀರೆಯುಟ್ಟಂತೆ ಕಾಣುತ್ತಿದ್ದ ಹೊಲಗಳೆಲ್ಲ ಈ ಸಲ ಕೆರೆಗಳಂತಾಗಿವೆ. ಹಿಂಗಾರಿನಲ್ಲಿ ಇಷ್ಟೊಂದು ಮಳೆ ಬರುವುದಿಲ್ಲ. ಆದರೆ ಬಿಟ್ಟು ಬಿಡದೇ ಸುರಿಯುತ್ತಲೇ ಇದೆ.

ಹುಬ್ಬಳ್ಳಿ:

"ಭೂಮಿ ತಾಯಿಗೆ ಉಡಿ ತುಂಬುವ ಹಬ್ಬ " ಎಂದೇ ಕರೆಯುವ ಸೀಗಿಹುಣ್ಣಿಮೆ ಈ ಸಲ ಮಳೆಯಿಂದಾಗಿ ತನ್ನ ಸಂಭ್ರಮ ಕಳೆದುಕೊಂಡಿದೆ. ಮಳೆಯಿಂದಾಗಿ ಹೊಲದ ಒಳಗೆ ಹೋಗಲು ಸಾಧ್ಯವಾಗದೇ ರಸ್ತೆಯಲ್ಲಿಯೇ ಪೂಜೆ ಸಲ್ಲಿಸುವ ದೃಶ್ಯಗಳು ಕಂಡುಬಂದವು.ರೈತರಿಗೆ ಸೀಗೆ ಹುಣ್ಣಿಮೆ ದೊಡ್ಡ ಹಬ್ಬಗಳಲ್ಲಿ ಒಂದು. ಒಂದು ಕಾಳನ್ನು ಸಾವಿರ ಕಾಳು ಮಾಡಿಕೊಡುವ ಭೂಮಿ ತಾಯಿಗೆ ಧನ್ಯವಾದ ಹೇಳುವ ಹಬ್ಬ ಎಂದು ಕೂಡ ಸೀಗೆ ಹುಣ್ಣಿಮೆಯನ್ನು ಕರೆಯಲಾಗುತ್ತದೆ. ಅಂದು ಭೂಮಿ ತಾಯಿಗೆ ಉಡಿ ತುಂಬುವ, ಭೂಮಿತಾಯಿಯ ಸೀಮಂತ ಮಾಡುವ ಹಬ್ಬ ಎಂದು ಕೂಡ ಹೇಳಲಾಗುತ್ತದೆ. ಮರಳಿ ಒಂದಿಷ್ಟು ಕೊಡುವ ಮೂಲಕ ಧನ್ಯವಾದವನ್ನು ರೈತರು ಹೇಳುತ್ತಾರೆ.

ಅಂದು ಹೊಲದಲ್ಲೇ ಪಾಂಡವರನ್ನು ಸ್ಥಾಪಿಸಿ, ಪೂಜೆ ಮಾಡಿ, ಬಗೆ ಬಗೆಯ ಖಾದ್ಯ ಮಾಡಿಕೊಂಡು ನೈವೇದ್ಯ ಮಾಡಿ ಚರಗ ಚೆಲ್ಲುತ್ತಾರೆ. ಅಂದು ಬರೀ ಆ ಹೊಲದ ಮಾಲೀಕರಷ್ಟೇ ಅಲ್ಲದೇ, ನೆಂಟರು, ಸ್ನೇಹಿತರನ್ನು ಹೊಲಕ್ಕೆ ಕರೆದುಕೊಂಡು ಹೋಗಿ ಖುಷಿ ಖುಷಿಯಿಂದ ಭೂಮಿ ತಾಯಿ ಪೂಜೆ ಸಲ್ಲಿಸಿ ಎಲ್ಲರೂ ಒಟ್ಟಾಗಿ ಕುಳಿತು ಸಹಪಂಕ್ತಿ ಭೋಜನ ಮಾಡುತ್ತಾರೆ. ಬಳಿಕ ಅಲ್ಲೇ ಆಟ ಆಡುತ್ತಾರೆ. ಹೀಗೆ ಸೀಗೆಹುಣ್ಣಿಮೆಯನ್ನು ಅತ್ಯಂತ ಸಡಗರ ಸಂಭ್ರಮ ಮಾಡುತ್ತಾರೆ. ಪ್ರತಿವರ್ಷವೂ ರೈತರಿಗೆ ಇದೊಂದು ಮಹತ್ವದ ಹಬ್ಬ.

ಆ ಸಂಭ್ರಮವಿಲ್ಲ:

ಪ್ರತಿವರ್ಷ ಹಸಿರು ಸೀರೆಯುಟ್ಟಂತೆ ಕಾಣುತ್ತಿದ್ದ ಹೊಲಗಳೆಲ್ಲ ಈ ಸಲ ಕೆರೆಗಳಂತಾಗಿವೆ. ಹಿಂಗಾರಿನಲ್ಲಿ ಇಷ್ಟೊಂದು ಮಳೆ ಬರುವುದಿಲ್ಲ. ಆದರೆ ಬಿಟ್ಟು ಬಿಡದೇ ಸುರಿಯುತ್ತಲೇ ಇದೆ. ಮುಂಗಾರಿನಲ್ಲಿ ಹೆಸರು, ಹತ್ತಿ, ಜೋಳ ಹೀಗೆ ವಿವಿಧ ಬೆಳೆಗಳನ್ನು ಕಟಾವು ಮಾಡಿಕೊಂಡಿರುವ ರೈತರು, ಹಿಂಗಾರಿಗೆ ಕಡಲೆ, ಶೇಂಗಾ ಸೇರಿದಂತೆ ವಿವಿಧ ಬೆಳೆ ಬಿತ್ತಿರಬೇಕಿತ್ತು. ಅವು ಮೊಳಕೆವೊಡೆದು, ಅರ್ಧದಷ್ಟು ಬೆಳೆಗಳು ಕೂಡ ಬೆಳೆದಿರುತ್ತಿದ್ದವು. ಹೀಗಾಗಿ ಎಲ್ಲ ಹೊಲಗಳು ಹಸಿರಿನಿಂದ ಕಂಗೊಳಿಸುತ್ತಿದ್ದವು. ಆದರೆ ಈ ವರ್ಷ ಮಳೆಯಿಂದಾಗಿ ಶೇ.90ಕ್ಕೂ ಅಧಿಕ ಹೊಲಗಳಲ್ಲಿ ಬಿತ್ತನೆಯನ್ನೇ ಮಾಡಿಲ್ಲ. ಹೊಲಗಳಲ್ಲಿ ಮಳೆ ನೀರು ನುಗ್ಗಿದೆ. ಎಷ್ಟೋ ಹೊಲಗಳು ಜಲಾವೃತವಾಗಿ ಕೆರೆಗಳಂತಾಗಿವೆ. ಹೊಲದೊಳಗೆ ಕಾಲಿಡಲು ಸಾಧ್ಯವಾಗುತ್ತಿಲ್ಲ.

ಕೆಲ ರೈತರು ಹಾಗೋ ಹೀಗೋ ಹೊಲದೊಳಗೆ ಹೋಗಿ ನೆಪ ಮಾತ್ರಕ್ಕೆ ಪೂಜೆ ಸಲ್ಲಿಸುತ್ತಿದ್ದರೆ, ಹಲವರು ಹೊಲದೊಳಗೆ ಹೋಗಲು ಸಾಧ್ಯವಾಗದೇ ಹೊಲಕ್ಕೆ ಹೋಗುವ ದಾರಿಯಲ್ಲೇ ಪೂಜೆ ಸಲ್ಲಿಸಿದ ದೃಶ್ಯ ಅಲ್ಲಲ್ಲಿ ಕಂಡು ಬಂತು.

ಏನೇ ಆದರೂ ಈ ಭೂಮಿತಾಯಿಗೆ ಉಡಿ ತುಂಬಿ ಸಂಭ್ರಮಿಸಬೇಕಿದ್ದ ರೈತಾಪಿ ವರ್ಗದಲ್ಲಿ ಮಳೆಯಿಂದಾಗಿ ಸಡಗರ ಸಂಭ್ರಮ ಮರೆ ಮಾಚಿದಂತಾಗಿರುವುದಂತೂ ಸತ್ಯ.ಏನ್ಮಾಡೋದು ಸಾರ್‌, ಈ ವರ್ಸಾ ಮಳಿ ಬಿಡ್ತಾನೇ ಇಲ್ಲ. ಹಿಂಗಾರಿ ಬಿತ್ತನೆ ಮಾಡೋಕೆ ಆಗ್ತಾ ಇಲ್ಲ. ಬಿತ್ತಿರುವ ಬೀಜಗಳೆಲ್ಲ ಕೊಚ್ಚಿಕೊಂಡು ಹೋಗಿವೆ. ಹೀಂಗಾಗಿ ಸಂಪ್ರದಾಯ ಎಂಬಂತೆ ಬರೀ ಪೂಜೆ ಸಲ್ಲಸ್ತಾ ಅದೀವಿ ನೋಡ್ರಿ.. ಭೂಮಿ ತಾಯಿ ಇನ್ಮೇಲಾದರೂ ನಮ್‌ ಮ್ಯಾಲೆ ಕರುಣೆ ತೋರಲಿ ಎಂದು ಸುಳ್ಳ ಗ್ರಾಮದ ರೈತ ಕಲ್ಮೇಶ ಹುಲ್ಲತ್ತಿ ಹೇಳಿದರು.