ಸಾರಾಂಶ
ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಜಿಟಿಜಿಟ ಮಳೆಯಿಂದ ಹಿಂಗಾರು ಬಿತ್ತನೆ ಮಾಡಿದ ರೈತರ ಮೊಗದಲ್ಲಿ ಸಂತಸ ಮೂಡಿದೆ.
ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಜಿಟಿಜಿಟ ಮಳೆಯಿಂದ ಹಿಂಗಾರು ಬಿತ್ತನೆ ಮಾಡಿದ ರೈತರ ಮೊಗದಲ್ಲಿ ಸಂತಸ ಮೂಡಿದೆ. ರಾಗಿ, ತೊಗರಿ, ಅವರೆ, ಜೋಳ, ಹರಳು, ಹುರುಳಿ, ಸಾಸಿವೆ, ಎಳ್ಳು ಹಾಗು ವಾಣಿಜ್ಯ ಬೆಳೆಗಳಾದ ತೆಂಗು, ಅಡಿಕೆ, ಬಾಳೆ, ತರಕಾರಿ, ಹಣ್ಣು ಹಂಪಲಿನ ಗಿಡಗಳಿಗೆ ನಿರಂತರ ಸೋನೆ ಮಳೆಯಿಂದ ಬೆಳೆಗಳು ಹಚ್ಚ ಹಸಿರಾಗಿ ಕಂಗೊಳಿಸುತ್ತಿವೆ. ರಾಗಿ, ಅವರೆ, ತೊಗರಿ ಮತ್ತು ಹರಳು ಬೆಳೆಗಳು ತೆನೆಯೊಡೆದು ರೈತರಿಗೆ ಒಳ್ಳೆಯ ಫಸಲು ಸಿಗುವ ನಿರೀಕ್ಷೆ ಹೆಚ್ಚಿದೆ. ನಿರಂತರ ಮಳೆಯಿಂದ ಕಸಬಾ ಹೋಬಳಿಯ ಮಾದಾಪಟ್ಟಣ ಗ್ರಾಮದ ಮಲ್ಲಿಕಾರ್ಜುನಯ್ಯ ಅವರ ಮನೆಯ ಹೆಂಚುಗಳು ಮತ್ತು ತೀರುಗಳು ಕುಸಿದು ಬಿದ್ದಿವೆ. ದಂಡಿನಶಿವರ ಹೋಬಳಿಯ ಸಂಪಿಗೆ ಹೊಸಹಳ್ಳಿ ಗ್ರಾಮದ ಖಮರುನ್ನಿಸಾ ಅವರ ಮನೆಯ ಗೋಡೆ ಭಾಗಶಃ ಕುಸಿದು ಬಿದ್ದಿದೆ. ಮಾಯಸಂದ್ರ ಹೋಬಳಿಯ ಸೀಗೇಹಳ್ಳಿ ಗ್ರಾಮದ ಲಕ್ಷ್ಮಮ್ಮ ಅವರ ಮನೆಯ ಹಿಂಭಾಗದ ಗೋಡೆ ಕುಸಿದು ನೆಲಕ್ಕುರುಳಿ ಯಾವುದೇ ಪ್ರಾಣ ಹಾನಿಯಾಗದಿದ್ದರೂ ಮನೆಯ ಪರಿಕರಗಳು ಮಳೆ ನೀರಿಗೆ ನೆನೆದು ಹಾಳಾಗಿವೆ.ಕಂದಾಯ ನಿರೀಕ್ಷಕರಾದ ಶಿವಕುಮಾರ್, ರಂಗಸ್ವಾಮಿ, ಮಂಜುನಾಥ್, ಗ್ರಾಮ ಲೆಕ್ಕಾಧಿಕಾರಿಗಳಾದ ಸತೀಶ್, ಪೂರಪ್ಪ, ಹೇಮಂತ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಲಾಗುವುದೆಂದು ತಹಸೀಲ್ದಾರ್ ಎನ್.ಎ.ಕುಂಞಅಹಮದ್ ತಿಳಿಸಿದ್ದಾರೆ.