ರೇಬಿಸ್‌ ಹರಡುವಿಕೆ ತಡೆಯಲು ಜಾಗೃತಿ ಮೂಡಿಸಿ: ಡಾ. ರಾಠೋಡ

| Published : Oct 05 2025, 01:01 AM IST

ಸಾರಾಂಶ

ಮುಂಡರಗಿ ಪಟ್ಟಣದ ಶ್ರೀ ಜ. ತೋಂಟದಾರ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ರೇಬಿಸ್ ದಿನ ಹಾಗೂ ವಿಶ್ವ ಹೃದಯ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಮುಂಡರಗಿ: ರೇಬಿಸ್ ಒಂದು ವೈರಾಣುವಿನಿಂದ ಹರಡುವ ಮಾರಕ ಕಾಯಿಲೆ. ಅದನ್ನು ತಡೆಗಟ್ಟಲು ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ವೆಂಕಟೇಶ ರಾಠೋಡ ಹೇಳಿದರು.

ಪಟ್ಟಣದ ಶ್ರೀ ಜ. ತೋಂಟದಾರ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮೀಕ್ಷಣಾ ಘಟಕ, ಜಿಲ್ಲಾ ಮಾಹಿತಿ ಶಿಕ್ಷಣ ಮತ್ತು ಸಂವಹನ ವಿಭಾಗ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ರೇಬಿಸ್ ದಿನ ಹಾಗೂ ವಿಶ್ವ ಹೃದಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರೇಬಿಸ್ ಲಸಿಕೆಯನ್ನು ಅಭಿವೃದ್ಧಿಪಡಿಸಿದ ಸೂಕ್ಷ್ಮ ಜೀವ ಶಾಸ್ತ್ರಜ್ಞ ಲೂಯಿಸ್ ಪಾಶ್ಚರ್‌ ಅವರ ಮರಣದ ವಾರ್ಷಿಕೋತ್ಸವವನ್ನು ವಿಶ್ವ ರೇಬಿಸ್ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಪ್ರತಿ ವರ್ಷದಂತೆ ಈ ವರ್ಷದಲ್ಲಿ ರೇಬಿಸ್ ತಡೆಗಟ್ಟಲು ಮುಂದಾಗೋಣ. ನೀವು ನಾನು ನಮ್ಮ ಸಮಾಜ ಎಂಬ ಘೋಷವಾಕ್ಯದೊಂದಿಗೆ ವಿಶ್ವ ರೇಬಿಸ್ ದಿನ ಆಚರಿಸುತ್ತಿದ್ದೇವೆ. ಇದೊಂದು ಮಾರಕ ರೋಗವಾಗಿದ್ದು ಶೇ. 100ರಷ್ಟು ತಡೆಗಟ್ಟಬಹುದಾಗಿದೆ. ವರ್ಷಕ್ಕೆ 20 ಸಾವಿರ ಸಾವು ಭಾರತದಲ್ಲಿ ರೇಬಿಸ್‌ನಿಂದ ಆಗುತ್ತಿವೆ. ಕಾರಣ ಭಯ ಬಿಟ್ಟು ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬಹುದು ಎಂದು ಹೇಳಿದರು.

ಪ್ರಭಾರಿ ಪ್ರಾಂಶುಪಾಲ ಮಹೇಶ ಬದನಿಕಾಯಿ ಮಾತನಾಡಿ, ನಮ್ಮ ಹೃದಯದ ಆರೋಗ್ಯವನ್ನು ಸಧೃಡವಾಗಿಟ್ಟುಕೊಳ್ಳಲು ಪ್ರತಿದಿನ ವ್ಯಾಯಾಮ, ಯೋಗಾಸನ, ಪೌಷ್ಟಿಕ ಆಹಾರ ಹಾಗೂ ಉತ್ತಮ ಆರೋಗ್ಯಕ್ಕಾಗಿ ಕನಿಷ್ಠ 7ರಿಂದ 8 ಗಂಟೆ ವರೆಗೆ ಆರೋಗ್ಯಕರ ನಿದ್ರೆ ಅವಶ್ಯಕವಾಗಿರುತ್ತದೆ ಎಂದು ಹೇಳಿದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಲಕ್ಷ್ಮಣ ಪೂಜಾರ ಮಾತನಾಡಿ, ವಿಶ್ವ ಹೃದಯ ದಿನದ ಕುರಿತು ಪರಿಣಾಮಕಾರಿಯಾಗಿ ಜನರಲ್ಲಿ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಮುಖ್ಯ ಕರ್ತವ್ಯ. ಆಧುನಿಕ ಜೀವನ ಶೈಲಿ, ಧೂಮಪಾನ, ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು ಮತ್ತು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಇವೆಲ್ಲ ಕಾರಣಗಳಿಂದಾಗಿ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇತ್ತೀಚಿನ ದಿನಗಳಲ್ಲಿ ಹೃದ್ರೋಗದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಯುವ ಜನರೆ ಹೆಚ್ಚಿನ ಸಂಖ್ಯೆಯಲ್ಲಿ ಹಠಾತ್ತಾಗಿ ಹೃದಯಾಘಾತ, ಹೃದಯ ಸ್ತಂಭನಕ್ಕೀಡಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಈ ವರ್ಷದ ಘೋಷವಾಕ್ಯ ಹೃದಯ ಬಡಿತವನ್ನು ತಪ್ಪಿಸಿಕೊಳ್ಳಬೇಡಿ ಎಂಬುದರ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.

ಉಪನ್ಯಾಸಕರಾದ ಸಂತೋಷ ಕಾಗನೂರ, ಮಂಜುನಾಥ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೂಪಸೇನ್ ಚವ್ಹಾಣ, ಡಾ. ರವಿ ಕಡಗಾವಿ, ಡಾ. ಪ್ರವೀಣ ನಿಡಗುಂದಿ ಇದ್ದರು. ಈಶ್ವರಿ ಬಡಿಗೇರ ಪ್ರಾರ್ಥಿಸಿದರು. ಎಂ.ಎಸ್. ಸಜ್ಜನರ ಕಾರ್ಯಕ್ರಮ ನಿರೂಪಿಸಿದರು. ಎಂ.ಎಸ್. ರಬ್ಬನಗೌಡ್ರ ವಂದಿಸಿದರು.