ಸಾರಾಂಶ
ಸವಣೂರ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಮಹತ್ವಾಕಾಂಕ್ಷೆಯ ಯೋಜನೆಯಾದ ಮನೆ-ಮನೆಗೆ ಪೊಲೀಸ್ ಪರಿಕಲ್ಪನೆಯನ್ನು ಜಾರಿಗೆ ತರಲಾಗಿದೆ ಎಂದು ಬೀಟ್ ಪೊಲೀಸ್ ಬಸವರಾಜ ಮಲ್ಲೂರ ಹೇಳಿದರು.ತಾಲೂಕಿನ ಮಂತ್ರೋಡಿ ಗ್ರಾಮದ ಎಸ್‌ಡಿಎಂಸಿ ಅಧ್ಯಕ್ಷ ಅಶೋಕ ಕಳಲಕೊಂಡ ಕುಟುಂಬಸ್ಥರ ಮನೆಗೆ ತೆರಳಿ ಭಿತ್ತಿ ಪತ್ರವನ್ನು ನೀಡುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವ ದಿಸೆಯಲ್ಲಿ ಸಾರ್ವಜನಿಕರೊಂದಿಗೆ ಇಲಾಖೆಯ ಉತ್ತಮ ಹಾಗೂ ಸ್ನೇಹಪರ ಸಂಬಂಧವನ್ನು ಬೆಸೆದು ಸೌಹಾರ್ದತೆಯ ಸಮಾಜವನ್ನು ನಿರ್ಮಿಸುವುದು, ಆಗಬಹುದಾದ ಅಪರಾಧಗಳನ್ನು ತಡೆದು, ಘಟಿಸಿದ ಅಪರಾಧಗಳನ್ನು ಪರಿಣಾಮಕಾರಿಯಾಗಿ ಪತ್ತೆ ಮಾಡಲು ಹಾಗೂ ಪೊಲೀಸ್ ವ್ಯವಸ್ಥೆಯಲ್ಲಿ ಸಾರ್ವಜನಿಕ ಸಹಭಾಗಿತ್ವವನ್ನು ಹೆಚ್ಚಿಸಿ, ಇಲಾಖೆಯನ್ನು ಸಾರ್ವಜನಿಕ ಸ್ನೇಹಿಯಾಗಿಸಿ, ಸಮಾಜಕ್ಕೆ ''''''''ಉತ್ತಮ ಸಕ್ರಿಯ ಪೊಲೀಸ್ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಮನೆ-ಮನೆಗೆ ಪೊಲೀಸ್ ಪರಿಕಲ್ಪನೆಯನ್ನು ಜಾರಿಗೆ ತರುತ್ತಿದೆ. ಈ ಪರಿಕಲ್ಪನೆಯಲ್ಲಿ ಸಾರ್ವಜನಿಕರು ಮತ್ತು ಪೊಲೀಸರು ಒಂದಾಗಿ ಸಮಸ್ಯೆಗಳನ್ನು ಬಗೆಹರಿಸುವ ದೃಷ್ಟಿಯಿಂದ ಸಾರ್ವಜನಿಕರ ಕುಂದುಕೊರತೆಗಳು ಹಾಗೂ ಸಮಸ್ಯೆಗಳ ಬಗ್ಗೆ ವಿಚಾರಿಸಲು ಸ್ಥಳೀಯ ಪೊಲೀಸರು ಮನೆ-ಮನೆಗಳಿಗೆ ತೆರಳಿ ತಮ್ಮೊಡನೆ ಸಂವಾದಿಸಲು ಈ ಯೋಜನೆಯ ಸದುಪಯೋಗ ಪಡಿಸಿಕೊಂಡು ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಿ, ಸ್ವಸ್ಥ ಸಮಾಜವನ್ನು ನಿರ್ಮಿಸುವಲ್ಲಿ ತಮ್ಮ ಸಹಕಾರವನ್ನು ಕೋರಲಾಗುತ್ತದೆ ಎಂದರು.ಗ್ರಾಮಸ್ಥರಾದ ಅಶೋಕ ಕಳಲಕೊಂಡ, ಗಂಗವ್ವ ಪುರದ, ನೀಲವ್ವ ಪುರದ, ಗೀತಾ ಕಳಲಕೊಂಡ, ಯಲ್ಲಪ್ಪ ದೊಡೂರ ಹಾಗೂ ಇತರರು ಇದ್ದರು.