ತಂತ್ರಜ್ಞಾನದ ಉನ್ನತಿಗೆ ರಾಜೀವ ಗಾಂಧಿ ಕೊಡುಗೆ ಅಪಾರ

| Published : Aug 21 2024, 12:30 AM IST

ಸಾರಾಂಶ

ದೇಶದಲ್ಲಿ ತಂತ್ರಜ್ಞಾನವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದ ಖ್ಯಾತಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಗೆ ಸಲ್ಲುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗದೇಶದಲ್ಲಿ ತಂತ್ರಜ್ಞಾನವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದ ಖ್ಯಾತಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಗೆ ಸಲ್ಲುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ಮಾಜಿ ಪ್ರಧಾನಿ ರಾಜೀವ್‍ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸುರವರ ಜನ್ಮದಿನಾಚರಣೆಯಲ್ಲಿ ಇಬ್ಬರು ಮಹನೀಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು ಹದಿನೆಂಟು ವರ್ಷದ ಯುವಕರಿಗೆ ಮತದಾನದ ಹಕ್ಕು ನೀಡಿದರು. ಎಲ್ಲರ ಕೈಯಲ್ಲೂ ಇಂದು ಮೊಬೈಲ್‍ಗಳು ಹರಿದಾಡುತ್ತಿದೆಯೆಂದರೆ ಅದಕ್ಕೆ ರಾಜೀವ್‍ರವರ ಕೊಡುಗೆ ಅಪಾರ ಎಂದರು. ಇಂದಿರಾಗಾಂಧಿರವರು ಹತ್ಯೆಯಾದ ನಂತರ ಭಾರತದ ಪ್ರಧಾನಿಯಾದ ರಾಜೀವ್‍ಗಾಂಧಿಯವರು ಪೆರಂಬದೂರಿನಲ್ಲಿ ಹತ್ಯೆಗೀಡಾದರು. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿರುವ ಇತಿಹಾಸ ಕಾಂಗ್ರೆಸ್ ಪಕ್ಷಕ್ಕಿದೆ. ಹಾಗಾಗಿ ಇಂದಿನ ಯುವ ಪೀಳಿಗೆ ರಾಜೀವ್‍ಗಾಂಧಿರವರ ತತ್ವ ಸಿದ್ಧಾಂತಗಳನ್ನು ತಿಳಿದುಕೊಳ್ಳಬೇಕು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ. ತಾಜ್‍ಪೀರ್ ಮಾತನಾಡಿ ದಿವಂಗತ ಡಿ. ದೇವರಾಜ ಅರಸು ಹಾಗೂ ರಾಜೀವ್‍ಗಾಂಧಿರವರು ದೇಶಕ್ಕೆ ನೀಡಿರುವ ಕೊಡುಗೆಯನ್ನು ಯುವ ಪೀಳಿಗೆಗೆ ತಿಳಿಸಬೇಕು. ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಯಲ್ಲಿ ಮೀಸಲಾತಿಯನ್ನು ತಂದು ಎಲ್ಲಾ ಜಾತಿ ಜನಾಂಗದವರಿಗೆ ಅಧಿಕಾರ ಸಿಗುವಂತೆ ಮಾಡಿದವರು ರಾಜೀವ್‍ಗಾಂಧಿ. ತಾಯಿ ಇಂದಿರಾಗಾಂಧಿಯನ್ನು ಕಳೆದುಕೊಂಡು ದುಃಖದಲ್ಲಿದ್ದ ಸಂದರ್ಭದಲ್ಲಿ ದೇಶದ ಪ್ರಧಾನಿಯಾಗಿ ಆಡಳಿತ ನಡೆಸಿದರು. ದೂರದೃಷ್ಟಿಯುಳ್ಳವರಾಗಿದ್ದರಿಂದ ವಿಜ್ಞಾನ-ತಂತ್ರಜ್ಞಾನಕ್ಕೆ ಒತ್ತು ಕೊಟ್ಟರು. ಅದೇ ರೀತಿ ಡಿ. ದೇವರಾಜ ಅರಸುರವರು ಉಳುವವನೆ ಭೂಮಿ ಒಡೆಯ ಎನ್ನುವ ಕಾಯ್ದೆ ಜಾರಿಗೆ ತಂದು ಶೋಷಿತರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರಿಗೆ ರಾಜಕೀಯವಾಗಿ ಶಕ್ತಿ ತುಂಬಿದ ದಿಟ್ಟ ನಾಯಕ ಎಂದು ಸ್ಮರಿಸಿದರು.

ಪಂಚಾಯತ್‍ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ಹಾಗೂ ಗೋವಾ ಉಸ್ತುವಾರಿ ಡಾ.ಕೆ. ಅನಂತ್ ಮಾತನಾಡಿ ರಾಜೀವ್‍ಗಾಂಧಿ, ಡಿ. ದೇವರಾಜ್ ಅರಸು ಅವರನ್ನು ಎಲ್ಲರೂ ನೆನಪು ಮಾಡಿಕೊಳ್ಳಬೇಕಿದೆ. ಮುಂದುವರೆದ ದೇಶಗಳ ಜತೆ ಪೈಪೋಟಿ ಮಾಡುವಷ್ಟರ ಮಟ್ಟಿಗೆ ಭಾರತವನ್ನು ಸದೃಢವಾನ್ನಾಗಿಸಿದ ಕೀರ್ತಿ ರಾಜೀವ್‍ಗಾಂಧಿ ಅವರಿಗೆ ಸಲ್ಲುತ್ತದೆ ಎಂದರು.

ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ. ಕೃಷ್ಣಮೂರ್ತಿ ಮಾತನಾಡಿ, ರಾಜೀವ್‍ಗಾಂಧಿರವರು ದೇಶ ಸೇವೆಗಾಗಿ ಪ್ರಾಣವನ್ನೇ ತ್ಯಾಗ ಮಾಡಿದರು. ಅವರ ತಾಯಿ ಇಂದಿರಾಗಾಂಧಿ ಕೂಡ ಅಂಗರಕ್ಷಕರಿಂದಲೇ ಹತ್ಯೆಗೊಳಗಾದರು. ನೆಹರು ಕುಟುಂಬಕ್ಕೆ ತ್ಯಾಗ ಬಲಿದಾನಗಳ ಇತಿಹಾಸವಿದೆ. ಪ್ರತಿಯೊಬ್ಬರು ರಾಜೀವ್‍ಗಾಂಧಿ ಹಾಗೂ ಡಿ.ದೇವರಾಜ ಅರಸುರವರು ಕೊಡುಗೆಯನ್ನು ಸ್ಮರಿಸಬೇಕೆಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕೆ.ಎಂ. ಹಾಲಸ್ವಾಮಿ ಮಾತನಾಡಿ, ರಾಜೀವ್‍ಗಾಂಧಿ ಮತ್ತು ಡಿ. ದೇವರಾಜ ಅರಸುರವರು ದೇಶ ಕಂಡಂತ ಮಹಾನ್ ನಾಯಕರು. ಮೀಸಲಾತಿ ಮೂಲಕ ರಾಜೀವ್‍ಗಾಂಧಿ ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸಿದರು. ಗ್ರಾಮ ಪಂಚಾಯಿತಿಯಿಂದ ಹಿಡಿದು ಜಿಲ್ಲಾ ಪಂಚಾಯಿತಿವರೆಗೆ ಇಂದು ಮಹಿಳೆಯರು ಅಧಿಕಾರ ಅನುಭವಿಸುತ್ತಿದ್ದಾರೆಂದರೆ ಅದಕ್ಕೆ ರಾಜೀವ್‍ಗಾಂಧಿಯವರಲ್ಲಿದ್ದ ದೂರದೃಷ್ಟಿ ಕಾರಣ. ಹದಿನೆಂಟು ವರ್ಷದ ಯುವ ಜನಾಂಗಕ್ಕೆ ಮತದಾನದ ಹಕ್ಕು ನೀಡಿದರು. ವಿಜ್ಞಾನ ತಂತ್ರಜ್ಞಾನದ ಮೂಲಕ ದೇಶದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದರು ಎಂದು ನೆನಪಿಸಿಕೊಂಡರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಡಿ.ಎನ್. ಮೈಲಾರಪ್ಪ, ಬಿ.ಟಿ. ಜಗದೀಶ್, ಟಿ. ಸ್ವಾಮಿ, ಉಪಾಧ್ಯಕ್ಷರಾದ ನಜ್ಮತಾಜ್, ಎಸ್.ಎನ್. ರವಿಕುಮಾರ್, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ. ಕುಮಾರ್, ಎಸ್ಟಿ ವಿಭಾಗದ ಜಿಲ್ಲಾಧ್ಯಕ್ಷ ಮಂಜುನಾಥ್, ಪ್ರಕಾಶ್‍ರಾಮನಾಯ್ಕ, ಸೈಯದ್ ಖುದ್ದೂಸ್, ಶಬ್ಬೀರ್ ಅಹಮದ್, ಜಿ.ವಿ. ಮಧುಗೌಡ, ನಗರಸಭೆ ಮಾಜಿ ಅಧ್ಯಕ್ಷ ಎಚ್. ಮಂಜಪ್ಪ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತ ನಂದಿನಿಗೌಡ, ಉಪಾಧ್ಯಕ್ಷೆ ಪಿ.ಕೆ. ಪವಿತ್ರ, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೋಕ್ಷರುದ್ರಸ್ವಾಮಿ, ಮುನಿರಾ ಎ. ಮಕಾಂದಾರ್, ನಗರಸಭೆ ಸದಸ್ಯೆ ಪಿ.ಕೆ. ಮೀನಾಕ್ಷಿ, ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯ ಎಚ್.ಅಂಜಿನಪ್ಪ, ಸೈಯದ್ ಸೈಫುಲ್ಲಾ, ಫೈಲ್ವಾನ್ ತಿಪ್ಪೇಸ್ವಾಮಿ, ಭಾಗ್ಯಮ್ಮ, ಸುಧಾ, ಮೃತ್ಯುಂಜಯ ಇನ್ನು ಮುಂತಾದವರು ಜಯಂತಿಯಲ್ಲಿ ಭಾಗವಹಿಸಿದ್ದರು.