ಸಾರಾಂಶ
ಮೈಸೂರು ಸಂಸ್ಥಾನ ಸ್ವತಂತ್ರ ಪ್ರಾಂತ್ಯವಾಗಿ ಉಳಿಯಲಿದೆ ಎಂದು ಮಹಾರಾಜರ ಆಪ್ತರು ಘೋಷಿಸಿದ್ದರು
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ರಾಜರ ಸಂಸ್ಥಾನ ವಿರುದ್ಧ ಸ್ವತಂತ್ರಕ್ಕೋಸ್ಕರ ಹೋರಾಡಿದ ರಾಮಸ್ವಾಮಿಯ 77ನೇ ಹುತಾತ್ಮ ದಿನದ ಅಂಗವಾಗಿ ಎಐಡಿಎಸ್ಒ ಜಿಲ್ಲಾ ಸಮಿತಿಯಿಂದ ನಗರದ ರಾಮಸ್ವಾಮಿ ವೃತ್ತದಲ್ಲಿರುವ ರಾಮಸ್ವಾಮಿ ಸ್ಮಾರಕಕ್ಕೆ ಶುಕ್ರವಾರ ಗೌರವ ಸಲ್ಲಿಸಲಾಯಿತು.ಈ ವೇಳೆ ಎಐಡಿಎಸ್ಒ ಜಿಲ್ಲಾಧ್ಯಕ್ಷ ಚಂದ್ರಕಲಾ ಮಾತನಾಡಿ, ಇಡೀ ದೇಶಕ್ಕೆ ಸ್ವಾತಂತ್ರ್ಯ ಬಂದರು, ಅಂದಿನ ಮೈಸೂರು ಸಂಸ್ಥಾನಕ್ಕೆ ಆ.15 ರಂದು ಸ್ವಾತಂತ್ರ್ಯ ಬರಲಿಲ್ಲ. ಮೈಸೂರು ಸಂಸ್ಥಾನ ಸ್ವತಂತ್ರ ಪ್ರಾಂತ್ಯವಾಗಿ ಉಳಿಯಲಿದೆ ಎಂದು ಮಹಾರಾಜರ ಆಪ್ತರು ಘೋಷಿಸಿದ್ದರು. ರಾಜ್ಯಕ್ಕೆ ರಾಜ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಘೋಷಿಸಬೇಕು ಮತ್ತು ಸರ್ಕಾರವನ್ನು ರಚಿಸಬೇಕು ಎಂದು ಒತ್ತಾಯಿಸಿ ನಡೆದ ಮೈಸೂರು ಚಲೋ ಚಳವಳಿಯನ್ನು ಘೋಷಿಸಿತು. ಈ ಹೋರಾಟದಲ್ಲಿ 17 ವರ್ಷದ ರಾಮಸ್ವಾಮಿ ಅವರು ಭಾಗವಹಿಸಿದ್ದರು ಎಂದರು. ಹೋರಾಟದಲ್ಲಿ ಭಾಗವಹಿಸಿದ್ದ ಜನರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದರು. ಅಶ್ರುವಾಯು ಪ್ರಯೋಗಿಸಿದರು. ವಿದ್ಯಾರ್ಥಿಗಳು ಚೆಲ್ಲಾಪಿಲ್ಲಿಯಾದರು. ಆದರೆ, ಇದರ ನಡುವೆಯೂ ಧೈರ್ಯಶಾಲಿ ರಾಮಸ್ವಾಮಿ ತ್ರಿವರ್ಣ ಧ್ವಜ ಹಿಡಿದು ವೃತ್ತವನ್ನು ಪ್ರವೇಶಿಸಿ, ಧ್ವಜವನ್ನು ಹಾರಿಸಲು ಲಾಂದ್ರದ ಕಂಬವೇರಿದ. ಈ ವೇಳೆ ಅಧಿಕಾರಿಯ ರಿವಾಲ್ವರ್ ನಿಂದ ಹಾರಿದ ಮೂರು ಗುಂಡುಗಳು ರಾಮಸ್ವಾಮಿಯ ಎದೆಯನ್ನು ಭೇದಿಸಿದವು. ರಾಮಸ್ವಾಮಿ ಅಲ್ಲೇ ಕೊನೆಯುಸಿರೆಳೆದರು. ಈ ಹೋರಾಟದ ಫಲವಾಗಿ ಅ.24 ರಂದು ಮೈಸೂರು ಸಂಸ್ಥಾನದ ಆಡಳಿತ ಕೊನೆಯಾಯಿತು ಎಂಮದು ಅವರು ವಿವರಿಸಿದರು.ಅನ್ಯಾಯದ ವಿರುದ್ಧ ಹೋರಾಟ ಮಾಡಿದ 17 ವರ್ಷದ ಬಾಲಕ ರಾಮಸ್ವಾಮಿ ಅವರ ದಿಟ್ಟತನ, ಸತ್ಯದ ಪರವಾಗಿ ನಿಂತ ಅವರ ಧೈರ್ಯ ಇಂದಿನ ವಿದ್ಯಾರ್ಥಿ, ಯುವಜನರಿಗೆ ಆದರ್ಶವಾಗಬೇಕು ಎಂದು ಅವರು ಹೇಳಿದರು. ಎಐಡಿಎಸ್ಒ ಉಪಾಧ್ಯಕ್ಷೆ ಬಿ.ಆರ್. ಸ್ವಾತಿ, ಪದಾಧಿಕಾರಿಗಳಾದ ಹೇಮಾ, ಚಂದನಾ, ಅಂಜಲಿ, ದಿಶಾ, ಗೌತಮ್ ಮೊದಲಾದವರು ಇದ್ದರು.