ಸಾರಾಂಶ
ನಾರಾಯಣ ಮಾಯಾಚಾರಿ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳತಾಲೂಕಿನ ತಂಗಡಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗೂರ ಗ್ರಾಮದಲ್ಲಿ ಸಾಂಕ್ರಾಮಿಕ ರೋಗ ಕಾಯಿಲೆ ಉಲ್ಭಣಿಸಿದ್ದು, ಕುಟುಂಬದ ಇಬ್ಬರು ಮೂವರು ಕಳೆದ ಒಂದು ವಾರದಿಂದ ಚಳಿ, ಜ್ವರ, ವಾಂತಿ ಬೇಧಿ ಇಲ್ಲವೇ ಕೆಮ್ಮು ನೆಗಡಿಯಿಂದ ಬಳಲುತ್ತಿದ್ದಾರೆ. ಇದರಿಂದ ಜನರು ಹೈರಾಣಾಗಿ ಹೋಗಿದ್ದು, ಸೂಕ್ತ ಆರೋಗ್ಯ ಸೇವೆ ಸಿಗದೇ ಪರದಾಟ ನಡೆಸಿದ್ದಾರೆ.ಗಂಗೂರ ಗ್ರಾಮ ಕೃಷ್ಣಾ ನದಿ ಪಾತ್ರದ ಗ್ರಾಮವಾಗಿದೆ. ನದಿ ಕೇವಲ 500 ಮೀ. ಅಂತರದಲ್ಲಿದೆ. ಗ್ರಾಮದಲ್ಲಿ 300- 400 ಮನೆಗಳಿದ್ದು 2500 ಸಾವಿರದಿಂದ 3000 ಸಾವಿರ ಜನಸಂಖ್ಯೆ ಹೊಂದಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಗ್ರಾಮದೊಳಗೆ ನೀರು ಬಂದು ಸೊಳ್ಳೆಗಳ ಕಾಟ ಹೆಚ್ಚಾಗುತ್ತದೆ. ಇದರಿಂದ ಜನರು ಸಾಂಕ್ರಾಮಿಕ ರೋಗ ರುಜಿನುಗಳಿಗೆ ಒಳಗಾಗುತ್ತಲೇ ಇದ್ದಾರೆ. ಆದರೇ ಈ ಗ್ರಾಮದ ಜನರಿಗೆ ಶಾಶ್ವತ ಪರಿಹಾರ ನೀಡುವಲ್ಲಿ ಸರ್ಕಾರ ಮುಂದಾಗುತ್ತಿಲ್ಲ ಎಂದು ಸ್ಥಳೀಯರು ದೂರುತ್ತಿದ್ದಾರೆ.ಕಳೆದ ಒಂದು ವಾರದಿಂದ ಗಂಗೂರ ಗ್ರಾಮ ರೋಗಿಗಳ ಊರಾಗಿದ್ದು, ಪ್ರತಿ ಕುಟುಂಬದ ಇಬ್ಬರು ಮೂವರಿಗೆ ಚಳಿ ಜ್ವರ, ವಾಂತಿ ಭೇದಿ, ಕೆಮ್ಮ, ನೆಗಡಿ, ಹೀಗೆ ವಿವಿಧ ಕಾಯಿಲೆಗಳು ಅಂಟಿಕೊಂಡು ಮಲಗಿದ್ದಾರೆ. ಈ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ಹೋಗಿದ್ದು, ಇದರಿಂದಾಗಿ ಜನರು ನದಿ ನೀರನ್ನು ಕುಡಿಯುತ್ತಿದ್ದಾರೆ. ಅಲ್ಲದೇ, ಗ್ರಾಮದಲ್ಲಿ ಚರಂಡಿಗಳು ತುಂಬಿ ರಸ್ತೆ ಮೇಲೆಲ್ಲ ನೀರು ಹರಿಯುತ್ತಿದೆ. ಇದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಅರ್ಹ ವೈದ್ಯರಿಂದ ಜನರಿಗೆ ಸಮರ್ಪಕವಾಗಿ ಆರೋಗ್ಯ ಸೇವೆಯೂ ಗ್ರಾಮೀಣ ಪ್ರದೇಶಗಳಲ್ಲಿ ಸಿಗುತ್ತಿಲ್ಲ.ಗ್ರಾಮಗಳ ಅಭಿವೃದ್ಧಿಗಾಗಲಿ ಅಥವಾ ಜನರ ಆರೋಗ್ಯ ರಕ್ಷಣೆಗಾಗಲಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದಕ್ಕೆ ಗಂಗೂರು ಗ್ರಾಮವೇ ಸಾಕ್ಷಿ. ಇಲ್ಲಿ ಅನೈರ್ಮಲ್ಯ ಮತ್ತು ಆರೋಗ್ಯಕ್ಕೆ ಮಾರಕವಾಗುವ ಕಾರಣಗಳಿಗೇನು ಕಮ್ಮಿ ಇಲ್ಲವೆಂಬುದನ್ನು ಅರಿತುಕೊಳ್ಳಬೇಕಿದೆ. ಕೂಡಲೇ ಆರೋಗ್ಯ ಇಲಾಖೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಭೇಟಿ ನೀಡಿ ಪರಿಶೀಲಿಸದಬೇಕಿದೆ.ಪ್ರತಿ ವರ್ಷ ಮಳಿಗಾಲದಲ್ಲಿ ಗ್ರಾಮದಲ್ಲಿ ಒಂದಲ್ಲ ಒಂದು ರೀತಿಯ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ತಂಗಡಗಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರಇದೆ. ಆದರ, ಸಮರ್ಪಕ ವೈದ್ಯರು, ಚಿಕಿತ್ಸೆ ನೀಡದ ಕಾರಣ ಮುದ್ದೇಬಿಹಾಳ ತಾಲೂಕು ಆಸ್ಪತ್ರೆ ಹೋಗುತ್ತಾರೆ. ಇಲ್ಲವೆಂದರೆ ಧನ್ನೂರ ಆರೋಗ್ಯ ಕೇಂದ್ರಕ್ಕೆ ಹೋಗಬೇಕು. ಒಂದು ವಾರದಿಂದ ಜ್ವರ ಬಂದು ಚಿಕಿತ್ಸೆ ಸಿಗದೆ ತೊಂದರೆಯಾಗಿದೆ. ಕುಟುಂಬದಲ್ಲಿ ಒಬ್ಬರಿಗಾದರೂ ಆರೋಗ್ಯ ಸಮಸ್ಯೆ ಕಾಡುತ್ತಿದೆ.
ಸಗರಪ್ಪ ಗುಬಚಿ, ಗ್ರಾಮಸ್ಥ.ತಂಗಡಗಿ ಗ್ರಾಪಂ ಪಿಡಿಒಗಳು ಮೇಲಿಂದ ಮೇಲೆ ವರ್ಗಾವಣೆಗೊಳ್ಳುತ್ತಿದ್ದಾರೆ. ಇದರಿಂದ ಗ್ರಾಮದ ಅಭಿವೃದ್ಧಿಗಾಗಲಿ ಅಥವಾ ಸ್ವಚ್ಛತೆಗಾಗಲಿ, ಜನರ ಆರೋಗ್ಯ ರಕ್ಷಣೆಗಾಗಲಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಟ್ಯಾಂಕ್ ಸಂಪೂರ್ಣ ಹಾಳಾಗಿ ಹೋಗಿದೆ. ಶುದ್ಧ ನೀರು ಸಿಗದೇ ಕಲುಷಿತ ನದಿ ನೀರನ್ನೇ ಸೇವನೆ ಮಾಡುವುದು ಅನಿವಾರ್ಯ. ಇದೇ ಕಾರಣದಿಂದ ಆರೋಗ್ಯ ಸಮಸ್ಯೆ ತಲೆದೋರಿದೆ.
ಹಣಮಂತ ಹುಗ್ಗಿ, ಗಂಗೂರ ಗ್ರಾಮಸ್ಥ.ತಾಲೂಕಿನ ಗಂಗೂರು ಗ್ರಾಮದ ಜನರು ಆರೋಗ್ಯ ಸಮಸ್ಯೆಯಾಗಿ ತೊಂದರೆ ಅನುಭವಿಸುತ್ತಿರುವ ಬಗ್ಗೆ ಮಾಹಿತಿ ಇದೆ. ಈಗಾಗಲೇ ತಾಲೂಕು ಆರೋಗ್ಯ ಇಲಾಖೆಯಿಂದ ಸಿಬ್ಬಂದಿ ತಂಡ ಕಳುಹಿಸಿ ಆರೋಗ್ಯ ತಪಾಸಣೆ ಹಾಗೂ ರಕ್ತದ ಪರೀಕ್ಷೆ ಇತರೆ ರೋಗದ ಬಗ್ಗೆ ತಪಾಸಣೆ ನಡೆಸುವ ಮೂಲಕ ಜನರ ಆರೋಗ್ಯ ರಕ್ಷಣೆಗೆ ಯೋಗ್ಯ ಕ್ರಮ ಕೈಗೊಳ್ಳಲಾಗುವುದು.
ಡಾ.ಸತೀಶ ತಿವಾರಿ, ತಾಲೂಕು ಆರೋಗ್ಯಾಧಿಕಾರಿ.