ಹುಬ್ಬಳ್ಳಿ:

ಸಂಗೊಳ್ಳಿ ರಾಯಣ್ಣ ದೇಶಕ್ಕಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ಅಪ್ರತಿಮ ಹೋರಾಟಗಾರ. ಅವರ ದೇಶಪ್ರೇಮ, ತ್ಯಾಗ ಮತ್ತು ಹೋರಾಟದ ಆದರ್ಶಗಳು ಯುವಜನತೆಗೆ ದಾರಿದೀಪವಾಗಬೇಕು ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಅರವಿಂದ ಕಟಗಿ ಹೇಳಿದರು.

ಶನಿವಾರ ನಗರದ ಚೆನ್ನಮ್ಮ ವೃತ್ತದ ಮಹದಾಯಿ ವೇದಿಕೆಯಲ್ಲಿ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ಧಾರವಾಡ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಸಂಗೊಳ್ಳಿ ರಾಯಣ್ಣ ಜಯಂತ್ಯುತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಮುತಿಯ ಮುಖಂಡ ಶಿವಾನಂದ ಮುತ್ತಣ್ಣವರ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಡಿದ ಕನ್ನಡನಾಡಿನ ವೀರರು. ದೇಶದ ಪ್ರಥಮ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಉತ್ತರ ಕರ್ನಾಟಕದ ಈ ವೀರರ ಕೊಡುಗೆಯನ್ನು ಜಗತ್ತಿಗೆ ಪರಿಚಯಿಸುವ ಅಗತ್ಯವಿದೆ ಎಂದರು.

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹಾಗೂ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಹೆಸರನ್ನು ನಾಮಕರಣ ಮಾಡಬೇಕೆಂಬ ಬೇಡಿಕೆ ಈಡೇರಿಸಲು ಹೋರಾಟ ಮುಂದುವರಿಸಲಾಗುವುದು ಎಂದು ಹೇಳಿದರು.


ಈ ವೇಳೆ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಂಡು ಕುಲಕರ್ಣಿ, ಹಿರಿಯ ಪತ್ರಕರ್ತ ಗಣಪತಿ ಗಂಗೊಳ್ಳಿ, ಮುಖಂಡ ಶಿವಾನಂದ ಮುತ್ತಣ್ಣವರ, ಕಾಂಗ್ರೆಸ್ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ, ಅಡಿವೆಪ್ಪ ಶಿವಳ್ಳಿ, ಸದಾನಂದ ಡಂಗನವರ, ಮಲ್ಲಿಕಾರ್ಜುನ ಕೊಣ್ಣೂರ, ಎಪಿಎಂಸಿ ಮಾಜಿ‌ ಅಧ್ಯಕ್ಷ ಎಸ್.ಎಸ್. ಪಾಟೀಲ, ಮಲ್ಲಿಕಾರ್ಜುನ ತಾಲೂರ, ಶಿವಾನಂದ ಜೋಗಿನ, ಯಲ್ಲಪ್ಪ ಕುಂದಗೋಳ, ಸರೋಜಾ ಛಬ್ಬಿ ಸೇರಿದಂತೆ ಹಲವರಿದ್ದರು.ಶ್ರೀಪಾದ ಸೇರಿ 13 ಜನರಿಗೆ ಪ್ರಶಸ್ತಿ

ಕಾರ್ಯಕ್ರಮದಲ್ಲಿ ಕನ್ನಡಪ್ರಭದ ಪ್ರಸರಣ ವಿಭಾಗದ ಪ್ರಧಾನ ವ್ಯವಸ್ಥಾಪಕ ಶ್ರೀಪಾದ ಕುಲಕರ್ಣಿ ಸೇರಿದಂತೆ 11 ಸಾಧಕರಿಗೆ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಹಾಗೂ ಇಬ್ಬರು ಮಹಿಳಾ ಸಾಧಕಿಯರಿಗೆ ಕಿತ್ತೂರ ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ ಮಾಡಲಾಯಿತು.