ಹುಬ್ಬಳ್ಳಿ:
ಸಾರ್ವಜನಿಕ ಪ್ರದೇಶ ಪ್ರವೇಶ ನಿಯಂತ್ರಣ ವಿಧೇಯಕ-2026 ಮಸೂದೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಇದು ಪರೋಕ್ಷವಾಗಿ ಆರ್‌ಎಸ್‌ಎಸ್ ಸಂಘಟನೆಯನ್ನು ಹತ್ತಿಕ್ಕುವ ಹುನ್ನಾರ ಎಂದು ವಿಧಾನ ಪರಿಷತ್ ಸದಸ್ಯ ಲಿಂಗರಾಜ ಪಾಟೀಲ ಖಂಡಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಆರ್‌ಎಸ್‌ಎಸ್ ಹಲವು ದಶಕಗಳಿಂದ ದೇಶದ ವಿವಿಧ ಭಾಗಗಳಲ್ಲಿ ಶಾಖೆ, ಪಥಸಂಚಲನ, ಸಾರ್ವಜನಿಕ ಕಾರ್ಯಕ್ರಮ ಮತ್ತು ಸಾಮಾಜಿಕ ಚಟುವಟಿಕೆ ನಡೆಸಿಕೊಂಡು ಬಂದಿದೆ. ಇಂತಹ ಸಂಘಟನೆಗಳ ಸಾರ್ವಜನಿಕ ಚಟುವಟಿಕೆಗಳನ್ನು ಸಾಮಾನ್ಯ ಕಾನೂನು ನಿಯಂತ್ರಣದ ಹೆಸರಿನಲ್ಲಿ ನಿರ್ಬಂಧಿಸುವಂತಹ ಯಾವುದೇ ಕ್ರಮವು ಎಲ್ಲ ಸಂಘಟನೆಗಳಿಗೂ ಸಮಾನವಾಗಿ ಅನ್ವಯವಾಗಬೇಕು ಎಂದಿದ್ದಾರೆ.
ಈ ಮಸೂದೆಯ ಪರಿಣಾಮವಾಗಿ ಆರ್‌ಎಸ್‌ಎಸ್ ಸೇರಿದಂತೆ ವಿವಿಧ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಷ್ಟ್ರಮುಖಿ ಸಂಘಟನೆಗಳ ನಿಯಮಿತ ಚಟುವಟಿಕೆಗಳಿಗೆ ಪರೋಕ್ಷವಾಗಿ ಅಡ್ಡಿಪಡಿಸುವ ಉದ್ದೇಶವಿದೆಯೇ ಎಂಬ ಅನುಮಾನ ಸಹಜವಾಗಿಯೇ ಮೂಡುತ್ತದೆ. ಸರ್ಕಾರಕ್ಕೆ ನಿಜವಾಗಿಯೂ ಕಾನೂನು ಸುವ್ಯವಸ್ಥೆಯೇ ಉದ್ದೇಶವಾಗಿದ್ದರೆ, ಮಸೂದೆಯ ನಿಯಮಗಳು ಸ್ಪಷ್ಟವಾಗಿರಬೇಕು. ‘ಅನುಮತಿ’ ನೀಡುವ ಅಧಿಕಾರ ಯಾರಿಗೆ?, ಯಾವ ಮಾನದಂಡದ ಆಧಾರದ ಮೇಲೆ ಅನುಮತಿ ನೀಡಲಾಗುತ್ತದೆ?, ಅನುಮತಿ ನಿರಾಕರಿಸಿದರೆ ಮೇಲ್ಮನವಿ ಅವಕಾಶವೇನು?, ರಾಜಕೀಯ, ಸಾಮಾಜಿಕ ಅಥವಾ ಸಾಂಸ್ಕೃತಿಕ ಸಂಘಟನೆಗಳ ಕಾರ್ಯಕ್ರಮಗಳಿಗೆ ಬೇರೆ ಬೇರೆ ಮಾನದಂಡಗಳಿವೆಯೇ? ಇಂತಹ ಪ್ರಶ್ನೆಗಳಿಗೆ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕೆಂದು ಆಗ್ರಹಿಸಿದ್ದಾರೆ. ಅಲ್ಲದೇ, ಹೊಸ ಮಸೂದೆಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.