ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಹರಳು ರೂಪದ ಯೂರಿಯಾವನ್ನು ಹೆಚ್ಚು ಬಳಕೆ ಮಾಡದೆ ಇದಕ್ಕೆ ಪರ್ಯಾವಾಗಿ ನ್ಯಾನೋ ಯೂರಿಯಾವನ್ನು (ದ್ರವರೂಪದ) ಬಳಸುವತ್ತ ನಮ್ಮ ರೈತರು ಆಧ್ಯತೆ ನೀಡಬೇಕೆಂದು ಶಾಸಕ ಕೆ.ಷಡಕ್ಷರಿ ಸಲಹೆ ನೀಡಿದರು.ತಾಲೂಕಿನ ಕಿಬ್ಬನಹಳ್ಳಿ ಹೋಬಳಿಯ ಆಯರಹಳ್ಳಿ ಗೊಲ್ಲರಹಟ್ಟಿಯಲ್ಲಿ ಕೃಷಿ ಇಲಾಖೆ ಹಾಗೂ ಇಫ್ಕೋ ಸಂಸ್ಥೆ ಸಹಯೋಗದೊಂದಿಗೆ ರಾಷ್ಟ್ರೀಯ ಆಹಾರ ಮತ್ತು ಪೌಷ್ಠಿಕ ಭದ್ರತಾ ಯೋಜನೆಯಡಿ ಏರ್ಪಡಿಸಿದ್ದ ರಾಗಿ ಬೆಳೆಗೆ ಕೃಷಿ ಡ್ರೋನ್ ಬಳಸಿ ನ್ಯಾನೋ ಯೂರಿಯಾ ಸಿಂಪರಣೆ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಜನಸಂಖ್ಯೆಗೆ ಆಹಾರ ನೀಡುವ ಸದುದ್ದೇಶದಿಂದ ಆಹಾರ ಮತ್ತು ಪೌಷ್ಠಿಕ ಭದ್ರತಾ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದ್ದು, ಕೃಷಿಯಲ್ಲಿ ಸುಧಾರಿತ ಬೇಸಾಯ ಕ್ರಮಗಳನ್ನು ಅಳವಡಿಸಿಕೊಂಡು ಉತ್ತಮ ಇಳುವರಿ ಪಡೆಯಬಹುದು. ಪ್ರಸ್ತುತ ದಿನಗಳಲ್ಲಿ ಕೃಷಿ ಕಾರ್ಮಿಕರ ಕೊರತೆ ಅತಿದೊಡ್ಡ ಸಮಸ್ಯೆಯಾಗಿದ್ದು, ಔಷಧಿಗಳನ್ನು ಸಿಂಪರಣೆ ಮಾಡಲು ಅಧಿಕ ಸಮಯ ಮತ್ತು ಹಣ ವ್ಯಯವಾಗುತ್ತಿದೆ. ಇದಕ್ಕೆ ಪರಿಹಾರವಾಗಿ ಕೃಷಿ ಡ್ರೋನ್ ಬಳಸಿ ಸಿಂಪರಣೆ ಮಾಡುವುದು ಒಳ್ಳೆಯ ಮಾರ್ಗವಾಗಿದೆ ಎಂದರು.
ಸಹಾಯಕ ಕೃಷಿ ನಿರ್ದೇಶಕ ಎಂ.ಪಿ ಪವನ್ ಮಾತನಾಡಿ, ಈ ಯೋಜನೆಯಡಿ ತಾಲೂಕಿನಲ್ಲಿ ೪೦೦ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯ ಪ್ರಾತ್ಯಕ್ಷಿಕೆಯನ್ನು ಕೈಗೊಳ್ಳಲಾಗಿದೆ. ಯೂರಿಯಾದ ಅತಿಯಾದ ಬಳಕೆ ಮಣ್ಣಿನ ಆರೋಗ್ಯ, ಬೆಳೆ ಇಳುವರಿ ಮತ್ತು ಪರಿಸರದ ಮೇಲೆ ವಿವಿಧ ರೀತಿಯಲ್ಲಿ ಹಾನಿಕಾರಕವಾಗಲಿದ್ದು, ಹೆಚ್ಚಾಗಿ ಬಳಕೆ ಮಾಡಿದರೆ ಇಳುವರಿ ಕಡಿಮೆಯಾಗಿ ಪೋಷಕಾಂಶಗಳ ಅಸಮತೋಲನ ಉಂಟಾಗಬಹುದು. ಯೂರಿಯಾವನ್ನು ಮೇಲುಗೊಬ್ಬರವಾಗಿ ಬೆಳೆಗಳಿಗೆ ಎರಚುವುದು ಪ್ರಸ್ತುತ ಚಾಲ್ತಿಯಲ್ಲಿರುವ ವಿಧಾನವಾಗಿದೆ. ಈ ವಿಧಾನದಿಂದ ಯೂರಿಯಾ ಹರಳುಗಳು ಸಸ್ಯಗಳ ಬೇರುಗಳಿಗೆ ಸೂಕ್ತವಾಗಿ ದೊರೆಯುವುದಿಲ್ಲ. ವಾತಾವರಣದಲ್ಲಿ ತಾಪಮಾನ ಹೆಚ್ಚಾದಂತೆ ಯೂರಿಯಾದಲ್ಲಿನ ಪೋಷಕಾಂಶವು ಆವಿಯಾಗಬಹುದು. ಹೆಚ್ಚಿನ ಮಳೆಯಿಂದ ಕೊಚ್ಚಿ ಹೋಗುವ ಸಾಧ್ಯತೆ ಇರುತ್ತದೆ. ಈ ಸಮಸ್ಯೆಗಳಿಗೆ ಪರಿಹಾರವಾಗಿ ನ್ಯಾನೋ ಯೂರಿಯ ಸಿಂಪರಣೆಯು ಯೋಗ್ಯಮಾರ್ಗವಾಗಿದೆ. ನ್ಯಾನೋ ಯೂರಿಯಾವನ್ನು ಎರಡರಿಂದ ನಾಲ್ಕು ಮಿಲಿ ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಎರಡು ಹಂತದಲ್ಲಿ ಸಿಂಪರಣೆ ಮಾಡಬೇಕು. ನ್ಯಾನೋ ಯೂರಿಯಾ ಬಳಸುವುದರಿಂದ ಶೇಕಡಾ ಐದರಿಂದ ಹತ್ತರವರೆಗೆ ಇಳುವರಿ ಹೆಚ್ಚಳವಾಗುತ್ತದೆ. ರೈತರು ಈ ತಂತ್ರಜ್ಞಾನವನ್ನು ಬಳಸಿಕೊಂಡು ಆಹಾರ ಧಾನ್ಯಗಳ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳುವಂತೆ ತಿಳಿಸಿದರು.ಪ್ರಗತಿಪರ ರೈತರಾದ ರೇಣುಕಾಮೂರ್ತಿ ಮಾತನಾಡಿ, ಡ್ರೋನ್ ಬಳಸಿ ನ್ಯಾನೋ ಯೂರಿಯಾ ತಾಂತ್ರಿಕತೆಯನ್ನು ರೈತರು ಅಳವಡಿಸಿ ಕೊಳ್ಳುವುದರಿಂದ ಕೃಷಿಯಲ್ಲಿ ಕಾರ್ಮಿಕರ ಸಮಸ್ಯೆ ಹಾಗೂ ಖರ್ಚನ್ನು ಕಡಿಮೆ ಮಾಡಿ ಉತ್ತಮ ಆದಾಯ ಗಳಿಸಬಹುದೆಂದು ತಿಳಿಸಿದರು.
ರೈತರಿಗೆ ಪ್ರಾತ್ಯಕ್ಷಿಕೆಗೆ ಒಳಪಡುವ ಪರಿಕರಗಳನ್ನು ವಿತರಣೆ ಮಾಡಿದರು. ಕಾರ್ಯಕ್ರಮದಲ್ಲಿ ಅರಳಗುಪ್ಪೆ ಗ್ರಾಪಂ ಅಧ್ಯಕ್ಷೆ ಸುಜಾತ, ಸದಸ್ಯರಾದ ಮಂಜುಳ, ಮುನಿಸ್ವಾಮಿ, ಕೃಷಿ ಇಲಾಖೆಯ ಕೃಷಿ ಅಧಿಕಾರಿ ಟಿ.ಎಸ್.ವಿನುತಾ, ಆತ್ಮ ಯೋಜನೆಯ ತಾಲೂಕು ತಾಂತ್ರಿಕ ವ್ಯವಸ್ಥಾಪಕ ಮಹೇಶ್ ಸಿಬ್ಬಂದಿಯಿದ್ದರು.