ಕೆರೆ, ಕಟ್ಟೆಗಳ ದುರಸ್ತಿಗೆ ಅಗತ್ಯ ಅನುದಾನ ಬಿಡುಗಡೆಗೊಳಿಸಿ

| Published : Jun 17 2024, 01:32 AM IST

ಕೆರೆ, ಕಟ್ಟೆಗಳ ದುರಸ್ತಿಗೆ ಅಗತ್ಯ ಅನುದಾನ ಬಿಡುಗಡೆಗೊಳಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಅತಿವೃಷ್ಟಿಯಿಂದ ತಾಲೂಕಿನಲ್ಲಿ ಹಾನಿಯಾಗಿರುವ ಕೆರೆ, ಕಟ್ಟೆಗಳ ದುರಸ್ತಿಗೆ ಸರ್ಕಾರ ಅಗತ್ಯ ಅನುದಾನ ಬಿಡುಗಡೆಗೊಳಿಸದಿದ್ದರೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಶಾಸಕ ಎಚ್.ಟಿ.ಮಂಜು ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಅತಿವೃಷ್ಟಿಯಿಂದ ತಾಲೂಕಿನಲ್ಲಿ ಹಾನಿಯಾಗಿರುವ ಕೆರೆ, ಕಟ್ಟೆಗಳ ದುರಸ್ತಿಗೆ ಸರ್ಕಾರ ಅಗತ್ಯ ಅನುದಾನ ಬಿಡುಗಡೆಗೊಳಿಸದಿದ್ದರೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಶಾಸಕ ಎಚ್.ಟಿ.ಮಂಜು ಎಚ್ಚರಿಸಿದರು.

ಸ್ಥಳೀಯ ಜೆಡಿಎಸ್ ಮುಖಂಡರೊಂದಿಗೆ ತಾಲೂಕಿನ ಮಾವಿನಕಟ್ಟೆ ಕೊಪ್ಪಲು ಕೆರೆ ಪ್ರದೇಶಕ್ಕೆ ಭೇಟಿ ನೀಡಿ, ಮಾತನಾಡಿ, ಅತಿವೃಷ್ಟಿಯಿಂದ ಹಾನಿಗೀಡಾದ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಲೋಕನಹಳ್ಳಿ, ಮಾವಿನಕಟ್ಟೆ ಕೊಪ್ಪಲು ಮುಂತಾದ ಕೆರೆಗಳ ಅಭಿವೃದ್ಧಿಗೆ ಸರ್ಕಾರ ಮುಂದಾಗಿಲ್ಲ ಎಂದು ಕಿಡಿಕಾರಿದರು.

ಕಳೆದ 2021ರಲ್ಲಿ ಕ್ಷೇತ್ರದಲ್ಲಿ ಬಿದ್ದ ಭಾರೀ ಮಳೆಗೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಹಲವು ಕೆರೆಗಳು, ರಸ್ತೆ ಮತ್ತು ಸೇತುವೆಗಳು ಹಾನಿಗೀಡಾಗಿದ್ದವು. ಮೂರ್‍ನಾಲ್ಕು ವರ್ಷಗಳು ಕಳೆದಿದ್ದರೂ ಇದುವರೆಗೂ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂತೇಬಾಚಹಳ್ಳಿ, ದೊಡ್ಡಕ್ಯಾತನಹಳ್ಳಿ ಮುಂತಾದ ಕೆರೆಗಳನ್ನು ರಿಪೇರಿ ಮಾಡಲಾಯಿತು. ಆದರೆ, ಲೋಕನಹಳ್ಳಿ, ಮಾವಿನಕಟ್ಟೆ ಕೊಪ್ಪಲು ಗ್ರಾಮದ ಒಡೆದು ಹೋದ ಕೆರೆಗಳನ್ನು ಇದುವರೆಗೂ ದುರಸ್ತಿ ಮಾಡಿಲ್ಲ. ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಆದರೆ, ಒಡೆದು ಹೋಗಿರುವ ಕೆರೆಗಳಲ್ಲಿ ನೀರು ನಿಲ್ಲುತ್ತಿಲ್ಲ ಎಂದರು.

ಒಡೆದು ಹೋಗಿರುವ ತಾಲೂಕಿನ ಕೆರೆ ಕಟ್ಟೆಗಳನ್ನು ತಕ್ಷಣವೇ ದುರಸ್ತಿಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡುವಂತೆ ನಾನು ಶಾಸಕನಾದ ಆರಂಭದಿಂದಲೂ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡುತ್ತಲೇ ಬಂದಿದ್ದೇನೆ. ನನ್ನ ಬೇಡಿಕೆಯನ್ನು ಪರಿಗಣಿಸಿಲ್ಲ ಎಂದು ದೂರಿದರು.

ಕೆರೆ ಏರಿ ರಿಪೇರಿ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರು, ಸಣ್ಣ ನೀರಾವರಿ ಇಲಾಖೆಯ ಅಧೀಕ್ಷಕ ಇಂಜಿನಿಯರ್, ಮುಖ್ಯ ಅಭಿಯಂತರರು, ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಮನವಿ ಮಾಡುತ್ತಿದ್ದರೂ ನಮ್ಮ ಮನವಿಗೆ ಯಾರೊಬ್ಬರೂ ಸ್ಪಂದಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

2024ರ ಜೂ.14 ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿ, ಕೆರೆ ರಿಪೇರಿ ಮಾಡುವಂತೆ ಪತ್ರ ಸಲ್ಲಿಕೆ ಮಾಡಿದ್ದೇನೆ. ಇದಕ್ಕೂ ಸರ್ಕಾರ ಸ್ಪಂದಿಸದಿದ್ದಲ್ಲಿ ಅನಿವಾರ್ಯವಾಗಿ ಹೋರಾಟ ಪ್ರಾರಂಭಿಸಬೇಕಾಗುತ್ತದೆ ಎಂದು ಮುಖ್ಯ ಕಾರ್ಯದರ್ಶಿಗಳ ಗಮನಕ್ಕೂ ತಂದಿದ್ದೇನೆ. ಸರ್ಕಾರ ರೈತರ ಹಿತದೃಷ್ಟಿಯಿಂದ ತಾಲೂಕಿನಲ್ಲಿ ಒಡೆದು ಹೋಗಿರುವ ಕೆರೆಗಳ ದುರಸ್ತಿಗೆ ತಕ್ಷಣ ಕ್ರಮ ವಹಿಸುವಂತೆ ಆಗ್ರಹಿಸಿದರು.

ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕಿ ರಾಮ್, ಸಂತೇಬಾಚಹಳ್ಳಿ ಹೋಬಳಿ ಜೆಡಿಎಸ್ ಅಧ್ಯಕ್ಷ ರವಿ, ತಾಪಂ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್, ನೀರಾವರಿ ಇಲಾಖೆ ನಿವೃತ್ತ ಇಂಜಿನಿಯರ್ ಶಿವಲಿಂಗೇಗೌಡ, ಮಾವಿನಕಟ್ಟೆ ಕೊಪ್ಪಲು ಗ್ರಾಮಸ್ಥರಾದ ಸತೀಶ್, ದೇವರಾಜ್, ರವಿ, ಉಮೇಶ್, ಲೋಕನಹಳ್ಳಿ ಗ್ರಾಮಸ್ಥರಾದ ಮಹೇಶ್, ಶೀನಣ್ಣ, ಪಾಪಣ್ಣ, ತೇಜುಕುಮಾರ್, ಬಾಲರಾಜ್, ಜಗದೀಶ್ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.