ಸಾರಾಂಶ
ಕನ್ನಡಪ್ರಭ ವಾರ್ತೆ ಲಿಂಗಸುಗೂರು
ಸರ್ಕಾರದ ನಾನಾ ಇಲಾಖೆಯಲ್ಲಿ ಶೇ.40ರಷ್ಟು ಹುದ್ದೆಗಳು ಖಾಲಿ ಇವೆ. ಆದರೂ ನೌಕರರು ರಾಜ್ಯದಲ್ಲಿ ದೇಶದ ಅಭಿವೃದ್ಧಿ ಸೂಚ್ಯಂಕದಲ್ಲಿ 5 ಸ್ಥಾನದಲ್ಲಿ ಇರುವಂತೆ ಕೆಲಸ ಮಾಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಶ್ಲಾಘಿಸಿದರು.ಪಟ್ಟಣದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ನೌಕರರ ಮಕ್ಳಳಿಗೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ರಾಜ್ಯ ಸರ್ಕಾರದ ನಾನಾ ಇಲಾಖೆಯಲ್ಲಿ 2.70 ಲಕ್ಷ ಹುದ್ದೆಗಳು ಖಾಲಿ ಇವೆ, 5.13 ಲಕ್ಷ ಜನರು ನೌಕರಿ ಮಾಡುತ್ತಿದ್ದೇವೆ. ನಾವು ನೌಕರಿಗೆ ನೇಮಕ ಆದ ವೇಳೆ ರಾಜ್ಯದಲ್ಲಿ 3.50 ಕೋಟಿ ಜನರು ಇದ್ದರೂ ಇಂದು ಜನಸಂಖ್ಯೆ 6 ಕೋಟಿ ಆಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರದ ಜನೋಪಯೋಗಿ ಯೋಜನೆಗಳು ಜಾರಿಗೊಳಿಸುವುದೇ ಸಾಧ್ಯವೆ. ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯವು ಹಿಂದುಳಿಯಲು ಶಿಕ್ಷಕರ ನೇಮಕಾತಿ ಮಾಡದೇ ಇರುವುದರಿಂದ ಇರುವ ಶಿಕ್ಷಕರಿಗೆ ಕೆಲಸದ ಒತ್ತಡ ಜಾಸ್ತಿ ಕಾರ್ಯ ಕ್ಷಮತೆ ಕಡಿಮೆ ಆಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರ ಮಾತನಾಡಿ, ಸರ್ಕಾರಿ ನೌಕರರು ಸೇವೆಯಲ್ಲಿದ್ದಾಗ ಉತ್ತಮ ಕಾರ್ಯ ಮಾಡಿದರೆ ನಿವೃತ್ತಿ ಬದುಕು ಉತ್ತಮವಾಗಿ ಇರುತ್ತದೆ. ನೌಕರಿ ಇದ್ದಾಗ ಜನರ ಕೆಲಸ ಮಾಡದೇ ಇದ್ದರೆ ನಿವೃತ್ತಿ ಬದುಕು ಕಷ್ಟಕರವಾಗಿರುತ್ತದೆ. ನೌಕರರಿಗೆ ಉತ್ತಮ ಕಾರ್ಯವೇ ಬದುಕಿನ ಶ್ರೇಯಸ್ಸಾಗಿದೆ ಎಂದು ಹೇಳಿದರು.ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಲ್ಲಿಕಾಜರ್ಜುನ ಬಳ್ಳಾರಿ, ತಾಪಂ ಇಒ ಅಮರೇಶ ಯಾದವ್, ಬಿಇಒ ಹುಂಬಣ್ಣ ರಾಠೋಡ್, ಎಂ.ವಿ.ರುದ್ರಪ್ಪ, ನೌಕರರ ಸಂಘದ ಜಿಲ್ಲಾಧ್ಯಕ್ಷ ಭೀಮಣ್ಣ ನಾಯಕ, ತಾಲೂಕ ಅಧ್ಯಕ್ಷ ಸಹಕಾರಿ ಸಂಘಗಳ ಸಹಾಯಕ ನಿರ್ದೇಶಕ ಚಂದ್ರಶೇಖರ ಕುಂಬಾರ, ಮಹಾದೇವಪ್ಪ ಗೌಡ ಮಸ್ಕಿ, ತಾಲೂಕ ಅಧ್ಯಕ್ಷ ಹಾಜಿಬಾಬು ಕಲ್ಯಾಣಿ ಸೇರಿದಂತೆ ಇದ್ದರು.