ಸಾರಾಂಶ
ಧಾರವಾಡ: ರಾಜ್ಯ ಸರ್ಕಾರವು ಏಕಾಏಕಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಿರುವುದನ್ನು ತಡೆಹಿಡಿಯುವಂತೆ ಧಾರವಾಡದ ಕರ್ನಾಟಕ ಥಿಂಕರ್ಸ್ ಫೋರಂ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಪಿ.ಎಚ್. ನೀರಲಕೇರಿ ಭಾನುವಾರ ರಾಜಭವನದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಇದೀಗ ಕರ್ನಾಟಕ ರಾಜ್ಯ ಸರ್ಕಾರ ಮತ್ತೊಂದು ಆಘಾತ ನೀಡಿದೆ. ಪೆಟ್ರೋಲ್ ಮೂರು ರುಪಾಯಿ, ಡೀಸೆಲ್ ಮೂರೂವರೆ ರುಪಾಯಿ ಏರಿಕೆ ಮಾಡಿರುವುದು ತೀವ್ರ ಖಂಡನೀಯ. ಕಾಂಗ್ರೆಸ್ ಅಧಿಕಾರಕ್ಕೇರುವ ಒಂದೇ ಕಾರಣಕ್ಕಾಗಿ ಪಂಚ ಭಾಗ್ಯದ ಮೋಡಿ ಮಾಡಿ ರಾಜ್ಯದ ಮತದಾರರನ್ನು ದಿಕ್ಕು ತಪ್ಪಿಸಿದ್ದು ನಾಡಿನ ದೌರ್ಭಾಗ್ಯವಲ್ಲದೇ ಬೇರೇನೂ ಅಲ್ಲ. ದಿನಬಳಕೆ ಹಾಗೂ ಅಗತ್ಯ ವಸ್ತುಗಳ ಬೆಲೆಗಳನ್ನು ಸರಣಿ ರೂಪದಲ್ಲಿ ಏರಿಸಲಾಗುತ್ತಿದೆ. ಇದೀಗ ಪೆಟ್ರೋಲ್ ಹಾಗೂ ಡೀಸೆಲ್ ದರಗಳನ್ನು ಏರಿಸಿ ಜನಸಾಮಾನ್ಯರ ಕೈ ಸುಡುವಂತೆ ಮಾಡಲಾಗುತ್ತಿದೆ. ಈ ಬೆಲೆ ಏರಿಕೆಯ ಪ್ರತಿಕೂಲ ಪರಿಣಾಮ ಸಹಜವಾಗಿಯೇ ಸರಕು ಸಾಗಾಣಿಕೆ ಹಾಗೂ ಸಾರಿಗೆ ದರಗಳೂ ವಿಪರೀತ ಹೆಚ್ಚಳ ಕಂಡು ದಿನಬಳಕೆಯ ಅಗತ್ಯ ವಸ್ತುಗಳ ಬೆಲೆಯೂ ಏರಲಿದೆ.ಪೆಟ್ರೋಲಿಯಂ ಕಚ್ಚಾತೈಲದ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಅಂದ ಮೇಲೆ ದಿಢೀರ್ ಈ ಬೆಲೆಯೇರಿಕೆ ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿರುವ ಅವರು, ಬರಿದಾಗಿರುವ ರಾಜ್ಯ ಸರ್ಕಾರದ ಖಜಾನೆ ತುಂಬಿಸಲು ಜನಸಾಮಾನ್ಯರು ಹಾಗೂ ಕಡುಬಡವರ ಜೇಬು ಖಾಲಿ ಮಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿ ನಿರ್ಧಾರಗಳನ್ನು ನಾವು ಪ್ರಬಲವಾಗಿ ಖಂಡಿಸುತ್ತೇವೆ. ಕನ್ನಡಿಗರಿಗೆ ಪದೇ ಪದೇ ಬೆಲೆ ಏರಿಕೆಯ ಬರೆ ಹಾಕುವುದೇ ಕಾಂಗ್ರೆಸ್ ಸರ್ಕಾರದ ಅಸಲಿ ಕರ್ನಾಟಕ ಮಾಡೆಲ್ ಎಂಬಂತಾಗಿದೆ. ಈ ಕೂಡಲೇ ಪೆಟ್ರೋಲ್ ಡೀಸೆಲ್ ದರ ಏರಿಕೆ ನಿರ್ಧಾರವನ್ನು ಸರ್ಕಾರ ಹಿಂತೆಗೆದುಕೊಳ್ಳುವಂತೆ ರಾಜ್ಯಪಾಲರು ಆದೇಶಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.