ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯಾದ್ಯಂತ ಮುಂಗಾರು ಮಳೆ ಕ್ಷೀಣಿಸಿದ್ದು ರೈತರು ಕಂಗಾಲಾಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣವೇ ರೈತರ ಹಿತ ಕಾಪಾಡಲು ಮುಂದಾಗಬೇಕು ಎಂದು ರಾಜ್ಯ ರೈತ ಸಂಘ (ಮೂಲ ಸಂಘಟನೆ)ದ ಮುಖಂಡ ಸೋ.ಸಿ.ಪ್ರಕಾಶ್ ಆಗ್ರಹಿಸಿದರು.

ಕ್ಷೀಣಗೊಂಡ ಮಳೆಯಿಂದ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡುವುದು ಸವಾಲಿನ ಕೆಲಸವಾಗಿದೆ. ಜಿಲ್ಲೆಯಲ್ಲಿ ಬಿತ್ತನೆ ಮಾಡಿದ ರೈತ ಮೊಳಕೆ, ಪೈರುಗಳು ಅಲ್ಪ ಮಳೆಯಿಂದ ಕೆಲವೆಡೆ ಒಣಗುತ್ತಿವೆ. ಅವುಗಳ ಉಳಿವಿಗೆ ಕೆಆರ್‌ಎಸ್ ಅಣೆಕಟ್ಟೆಯಿಂದ ಒಂದು ಕಟ್ಟು ನೀರು ಹರಿಸುವಂತೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ರೈತರ ಬೆಳೆಗೆ ನೀರು ಕೊಡಲಾಗದಿದ್ದರೂ ಬೆಂಗಳೂರಿಗೆ ಕುಡಿಯುವ ನೀರೊದಗಿಸಲು ೬ನೇ ಹಂತದ ಯೋಜನೆ ಪ್ರಗತಿಯಲ್ಲಿರುವುದು ರೈತರಿಗೆ ಮಾಕರವಾಗಿದೆ. ಇದನ್ನು ಕೈಬಿಡಬೇಕು. ರೈತರ ಕಬ್ಬಿಗೆ ಕಾರ್ಖಾನೆಗಳ ೫೦ ರು. ಪ್ರೋತ್ಸಾಹ ಧನ ಕೊಡಿಸಲು ಕ್ರಮ ವಹಿಸಬೇಕು. ಶೀಘ್ರವೇ ಕಾರ್ಖಾನೆಗಳನ್ನು ಪ್ರಾರಂಭಿಸಲು ಸೂಚನೆ ನೀಡುವಂತೆ ಒತ್ತಾಯಿಸಿದರು.

ಕಬ್ಬಿನ ಇಳುವರಿ ಕುಸಿದಿರುವುದು, ದುಬಾರಿ ಬೇಸಾಯ ಖರ್ಚಿನಿಂದ ರೈತರು ಕಬ್ಬು ಬೆಳೆಯಲ್ಲಿ ನಷ್ಟ ಅನುಭವಿಸುವಂತಾಗಿದೆ. ಕೇಂದ್ರ ಸರ್ಕಾರದ ಎಫ್‌ಆರ್‌ಪಿ ಜತೆಗೆ ರಾಜ್ಯ ಸರ್ಕಾರ ೫೦೦ ರು.ಗಳ ಎಫ್‌ಎಪಿ ನೀಡಬೇಕು. ಕಬ್ಬ ಕಟಾವು ವೆಚ್ಚವನ್ನು ಕಾರ್ಖಾನೆಯವರೇ ಭರಿಸುವಂತೆ ಕ್ರಮ ವಹಿಸಬೇಕು. ರೈತರ ಪಂಪ್‌ಸೆಟ್‌ಗಳಿಗೆ ನಿರಂತರ ವಿದ್ಯುತ್ ನೀಡುವುದು. ವಿದ್ಯುತ್ ಪ್ರಸರಣ ಯೋಜನೆ ಖಾಸಗಿಯವರಿಗೆ ಒಪ್ಪಿಸುವ ನಿರ್ಧಾರ ಕೈಬಿಡಬೇಕು. ಸರ್ಕಾರಗಳೇ ಬರಗಾಲ ಘೋಷಣೆ ಮಾಡಿದ್ದು, ರೈತರ ಸಾಲಮನ್ನಾ ಮಾಡಿ ೫೦ ಸಾವಿರ ರು. ಪರಿಹಾರ ಕೊಡಬೇಕು. ಬೆಳೆಗಳ ವಿಮೆ ವಂತಿಗೆಯನ್ನು ಸರ್ಕಾರವೇ ಭರಿಸಿ, ಕಬ್ಬು, ತೋಟಗಾರಿಕೆ ಬೆಳೆಗಳನ್ನು ವಿಮೆ ವ್ಯಾಪ್ತಿಗೆ ಸೇರಿಸಬೇಕು. ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಿದ ಬೆಳೆಗಳಿಗೆ ಕೆಲವೆಡೆ ಹಣ ಪಾವತಿಯಾಗದೇ ಇದ್ದು ಕೂಡಲೇ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.


ಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಎಸ್.ಮಂಜೇಶ್‌ಗೌಡ, ತಾಲೂಕು ಅಧ್ಯಕ್ಷ ಪುಟ್ಟಸ್ವಾಮಿ, ಮುಖಂಡ ಲಿಂಗಸ್ವಾಮಿ ಇದ್ದರು.