ಕನ್ನಡಪ್ರಭ ವಾರ್ತೆ ಸಾಗರ

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ತಾಲ್ಲೂಕಿನ ಜನಜೀವನ ಅಸ್ತವ್ಯಸ್ತಗೊಂಡಿದೆ. ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಸಾಗರ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸಾಕಷ್ಟು ಅನಾಹುತಗಳು ಸಂಭವಿಸಿದ್ದು, ಪಟ್ಟಣ ವ್ಯಾಪ್ತಿಯಲ್ಲಿ ಎರಡು ದಿನಗಳಿಂದ 3-4 ಮನೆಗಳು ಕುಸಿದು ಬಿದ್ದಿವೆ.

ಪಟ್ಟಣದ ಶಿವಪ್ಪನಾಯಕ ನಗರದ ೨೯ನೇ ವಾರ್ಡ್‌ನ ಆಟೋ ಚಾಲಕ ಮಂಜುನಾಥ್ ಎಂಬುವವರ ಮನೆಗೆ ಸೋಮವಾರ ರಾತ್ರಿ ನೀರು ನುಗ್ಗಿ ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ತಡರಾತ್ರಿ ಮನೆ ಬಿದ್ದು ಕುಟುಂಬಸ್ತರು ಅಪಾಯದಿಂದ ಪಾರಾಗಿದ್ದರೂ ರಾತ್ರಿ ನೆಲೆಯಿಲ್ಲದೆ ಕಳೆಯುವ ಸ್ಥಿತಿ ಬಂದಿತ್ತು. ಮನೆಗೆ ಈತನಕ ಹಕ್ಕುಪತ್ರ ಸಹ ಸಿಗದೆ ಇರುವುದರಿಂದ ನಮಗೆ ಸರ್ಕಾರಿ ಸೌಲಭ್ಯ ಯಾವುದೂ ಸಿಗುತ್ತಿಲ್ಲ. ಈ ಬಗ್ಗೆ ಶಾಸಕರು ಗಮನ ಹರಿಸಬೇಕು ಎಂದು ಮಂಜುನಾಥ್ ಕುಟುಂಬಸ್ತರು ಮನವಿ ಮಾಡಿದ್ದಾರೆ. ಶಾಸಕರ ಮಾರ್ಗದರ್ಶನದಂತೆ ಮಂಗಳವಾರ ಕಾಂಗ್ರೆಸ್ ಪ್ರಮುಖರು ಮನೆ ಬಿದ್ದ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ತರಿಗೆ ಆರ್ಥಿಕ ನೆರವು ನೀಡಿದರು.

ವಿಪರೀತ ಮಳೆಯಿಂದಾಗಿ ಚನ್ನಮ್ಮ ವೃತ್ತ ಹಾಗೂ ಸಾಗರ ನಗರದಿಂದ ಸೂರನಗದ್ದೆ ಗ್ರಾಮಕ್ಕೆ ಹೋಗುವ ರಸ್ತೆಗಳು ಜಲಾವೃತವಾಗಿದ್ದು, ಸಾರ್ವಜನಿಕ ಹಾಗೂ ವಾಹನ ಸಂಚಾರಕ್ಕೆ ಅಡ್ಡಿ ಉಂಟು ಮಾಡಿದೆ. ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿದ್ದು, ಚರಂಡಿ ನಿರ್ಮಿಸಿ, ನೀರು ಹರಿಯಲು ಅವಕಾಶ ಮಾಡಿಕೊಡಿ ಎಂದು ಅನೇಕ ಬಾರಿ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ. ಎಲ್ಲ ಕೆಲಸಗಳನ್ನು ಶಾಸಕರೇ ನೋಡಿ ಸರಿ ಮಾಡಿಸಬೇಕು ಎನ್ನುವ ನಗರಸಭೆ ಅಧಿಕಾರಿಗಳ ಧೋರಣೆ ಬದಲಾಗಬೇಕು ಎಂದು ಸಾಮಾಜಿಕ ಕಾರ್ಯಕರ್ತ ಉಮೇಶ್ ಸೂರನಗದ್ದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಲ್ಕು ದಿನಗಳಿಂದ ನೀರಿಲ್ಲ:


ಒಂದು ಕಡೆ ವಿಪರೀತ ಮಳೆ ಸುರಿಯುತ್ತಿದ್ದು, ಇನ್ನೊಂದು ಕಡೆ ಸಾಗರ ಪಟ್ಟಣದಲ್ಲಿ ನಾಲ್ಕು ದಿನಗಳಿಂದ ಜನರಿಗೆ ಕುಡಿಯುವ ನೀರು ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರಕ್ಕೆ ಶರಾವತಿ ಹಿನ್ನೀರಿನಿಂದ ನೀರು ಪೂರೈಸುವ ಚೈನಾಗೇಟ್ ಪಕ್ಕದ ಅಂಬುಗಳಲೆ ಪಂಪ್ ಹೌಸ್‌ನಲ್ಲಿ ಉಂಟಾದ ವಿದ್ಯುತ್ ಸಮಸ್ಯೆಯಿಂದಾಗಿ ಮೋಟರ್ ಸುಟ್ಟು ಹೋಗಿದ್ದರಿಂದ ಸಾಗರ ಪಟ್ಟಣಕ್ಕೆ ನೀರಿನ ಸರಬರಾಜು ಆಗುತ್ತಿಲ್ಲ.

ಸ್ಥಳದಲ್ಲಿಯೆ ಮೊಕ್ಕಾಂ ಹೂಡಿರುವ ಪೌರಾಯುಕ್ತ ಎಚ್.ಕೆ.ನಾಗಪ್ಪ ಮೋಟಾರ್ ರಿಪೇರಿ ಹಾಗೂ ವಿದ್ಯುತ್ ಸಮಸ್ಯೆ ಬಗೆಹರಿಸುವ ಕುರಿತು ಅಧಿಕಾರಿ ಸಿಬ್ಬಂದಿಗಳ ಜೊತೆ ನಡೆಸಿದ ಕಾರ್ಯಾಚರಣೆಯಿಂದಾಗಿ ಮಂಗಳವಾರ ವಿದ್ಯುತ್ ಸಮಸ್ಯೆ ಹಾಗೂ ಪಂಪ್ಸೆಟ್ ರಿಪೇರಿ ನಡೆದದ್ದು, ನೀರು ಸರಬರಾಜು ತಕ್ಷಣ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಅಂಬುಗಳಲೆ ಜಲಶುದ್ದೀಕರಣ ಘಟಕದಲ್ಲಿ ಪದೇಪದೇ ಮೋಟಾರ್ ಹಾಳಾಗುವುದು, ವಿದ್ಯುತ್ ಸಮಸ್ಯೆ ಉಂಟಾಗುತ್ತಿರುವುದರಿAದ ಸಾಗರ ಪಟ್ಟಣ ಜನರಿಗೆ ನಿರಂತರವಾಗಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದ್ದು ಇದಕ್ಕೆ ಶಾಶ್ವತ ಪರಿಹಾರ ಕೈಗೊಳ್ಳಲು ಸಾರ್ವಜನಿಕರು ಮನವಿ ಮಾಡಿದ್ದಾರೆ.