ಬೆಂಬಲ ಬೆಲೆಗೆ ರಾಗಿ ಮಾರಲು ರೈತರ ಹಿಂದೇಟು

| Published : Jan 31 2025, 12:45 AM IST

ಸಾರಾಂಶ

ರಾಗಿ ಖರೀದಿ ದರವು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಈ ವರ್ಷ ಪ್ರತಿ ಕ್ವಿಂಟಾಲ್ ರಾಗಿಯನ್ನು 4290 ರೂಗಳಿಗೆ ನಿಗದಿ ಮಾಡಲಾಗಿದೆ. ಅದರಂತೆ ರಾಗಿ ಖರೀದಿಗೆ ಕಳೆದ ಡಿಸೆಂಬರ್ ನಲ್ಲಿಯೇ ನೋಂದಣಿ ಕಾರ್ಯವನ್ನು ಆರಂಭಿಸಲಾಗಿದ್ದು ಇದುವರೆಗೂ ಜಿಲ್ಲೆಯಲ್ಲಿ 5108 ರೈತರು ಹೆಸರು ನೋಂದಣಿ ಮಾಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಸರ್ಕಾರ ಬೆಂಬಲ ಬೆಲೆ ಯೋಜನೆಯ ಮೂಲಕ ರಾಗಿ ಖರೀದಿಗೆ ತೆರೆದಿರುವಂತಹ ಖರೀದಿ ಕೇಂದ್ರಗಳಲ್ಲಿ ಈ ಬಾರಿ ರೈತರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಿರೀಕ್ಷಿತ ಮಟ್ಟದಲ್ಲಿ ರಾಗಿ ಖರೀದಿ ಸಾಧ್ಯವಾಗುತ್ತಿಲ್ಲ.ರೈತರು ಬೆಳೆಯುವ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಲು ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿ ಕಳೆದ ಹಲವು ವರ್ಷಗಳಿಂದ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದಿಂದ ರಾಗಿ ಖರೀದಿ ಕೇಂದ್ರಗಳನ್ನು ತೆರೆದಿದೆ. ಇದರ ಮೂಲಕ ರೈತರಿಂದ ರಾಗಿಯನ್ನು ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆಗೆ ಖರೀದಿ ಮಾಡುವ ಮೂಲಕ ರೈತರಿಗೆ ಆರ್ಧಿಕವಾಗಿ ನೆರವಾಗುತ್ತಿದೆ.

5108 ರೈತರ ನೋಂದಣಿ

ರಾಗಿ ಖರೀದಿ ದರವು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಈ ವರ್ಷ ಪ್ರತಿ ಕ್ವಿಂಟಾಲ್ ರಾಗಿಯನ್ನು 4290 ರೂಗಳಿಗೆ ನಿಗದಿ ಮಾಡಲಾಗಿದೆ. ಅದರಂತೆ ರಾಗಿ ಖರೀದಿಗೆ ಕಳೆದ ಡಿಸೆಂಬರ್ ನಲ್ಲಿಯೇ ನೋಂದಣಿ ಕಾರ್ಯವನ್ನು ಆರಂಭಿಸಲಾಗಿದ್ದು ಇದುವರೆಗೂ ಜಿಲ್ಲೆಯಲ್ಲಿ 5108 ರೈತರು 77595 ಕ್ವಿಂಟಲ್ ರಾಗಿ ಮಾರಾಟಕ್ಕೆ ನೋಂದಣಿಯನ್ನು ಮಾಡಿಸಿಕೊಂಡಿದ್ದಾರೆ. 2022-೨೩ ರಲ್ಲಿ ಪ್ರತಿ ಕ್ವಿಂಟಲ್ ಗೆ ೩೫೭೮ ರು.ಗಳನ್ನು‌ ನಿಗದಿ ಮಾಡಾಲಾಗಿದ್ದು, ೫೬೭೭೫ ಕ್ವಿಂಟಲ್, ೨೦೨೩-೨೪ ರಲ್ಲಿ ೩೮೪೬ ರೂಗಳಿಗೆ ಹೆಚ್ಚಿಸಲಾಗಿದ್ದು, ಆ ವರ್ಷ ೨೩೦೦೦ ಕ್ವಿಂಟಲ್ ರಾಗಿಯನ್ನು ರೈತರು ಸರ್ಕಾರಕ್ಕೆ ಮಾರಾಟ ಮಾಡಿದ್ದರು. ಈ ವರ್ಷ ಪ್ರತಿ ಕ್ವಿಂಟಲ್ ಗೆ ೪೪೪ ರು.ಗಳನ್ನು ಹೆಚ್ಚಿಸಿ 4290 ರು.ಗಳಿಗೆ ಬೆಂಬಲ ಬೆಲೆಯನ್ನು ನಿಗದಿಪಡಿಸಲಾಗಿದೆ. ಆದರೆ ರಾಗಿ ಮಾರಾಟಕ್ಕೆ ರೈತರಿಂದ ನೋಂದಣಿ ಪ್ರಮಾಣ ಕಡಿಮೆಯಿದ್ದು ಸರ್ಕಾರ ನಿಗದಿ ಮಾಡಿರುವಂತಹ ಗುರಿಯನ್ನು ತಲುಪಲು ಅಸಾಧ್ಯವಾಗಿದೆ.ರಾಗಿ ಇಳುವರಿ ಕುಸಿತ

ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕುಂಠಿತವಾಗಿ ರಾಗಿ ಬೆಳೆಗೆ ಸರಿಯಾದ ಸಮಯಕ್ಕೆ ಮಳೆಯಾಗದೆ ಬೆಳೆಗಳೆಲ್ಲಾ ಒಣಗಿದ್ದವು. ಈ ವರ್ಷ ಅಲ್ಪಸಲ್ಪ ಬಿದ್ದ ಮಳೆಯಿಂದ ರಾಗಿಯನ್ನು ಪೋಷಣೆ ಮಾಡಿದಂತಹ ರೈತರು ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದರು. ಆದರೆ ಇಳುವರಿ ಸಹ ಕುಂಠಿತಗೊಂಡಿದ್ದು, ಬಂದಂತಹ ಇಳುವರಿಯಲ್ಲಿ ಕುಟುಂಬ ಪೋಷಣೆಗೆ ಬೇಕಾದಷ್ಟು ರಾಗಿಯನ್ನು ದಾಸ್ತಾನು ಮಾಡಿಕೊಂಡು ಉಳಿದ ರಾಗಿಯನ್ನು ಮಾರಾಟ ಮಾಡಲು ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ರೈತರು 77595 ಕ್ವಿಂಟಲ್ ರಾಗಿ ಮಾರಾಟಕ್ಕೆ ನೋಂದಣಿ ಮಾಡಿಸಿಕೊಂಡಿದ್ದರಾದರೂ ಅಷ್ಟು ರಾಗಿಯನ್ನು ರೈತರು ಕೇಂದ್ರಕ್ಕೆ ತರುತ್ತಾರೆಯೇ ಎಂಬುದನ್ನು ನಂಬಲು ಸಾಧ್ಯವಿಲ್ಲ ಎಂಬುದು ಅಧಿಕಾರಿಗಳ ಅಭಿಪ್ರಾಯ. ಈ ಬಾರಿ ರಾಗಿ ಖರೀದಿ ಕಡಿಮೆ ಆಗುತ್ತಿದ್ದು, ಇದೇ ರಾಗಿಯನ್ನು ಪಡಿತರ ವಿತರಣೆಗೆ ಸರಬರಾಜು ಮಾಡಲಾಗುತ್ತಿರುವ ಕಾರಣ ಮುಂದೆ ವರ್ಷ ಪೂರ ನ್ಯಾಯಬೆಲೆ ಅಂಗಡಿಗಳ ಮೂಲಕ ರಾಗಿ ವಿತರಣೆಗೆ ಸಮಸ್ಯೆ ಆಗಬಹುದು ಎನ್ನಲಾಗಿದೆ.