ಮಕ್ಕಳಿಂದಲೇ ಕೊಲೆ ಯತ್ನ ಕಾಪಾಡುವಂತೆ ತಂದೆ ಮನವಿ

| Published : Jan 31 2025, 12:45 AM IST

ಸಾರಾಂಶ

ಆಸ್ತಿಗಾಗಿ ನನ್ನ ಮಕ್ಕಳೇ ನನ್ನನ್ನು ಕೊಲೆ ಮಾಡಲು ಪ್ರಯತ್ನಿಸುತ್ತಿದ್ದು, ಮಕ್ಕಳಿಂದಲೇ ನನ್ನ ಪ್ರಾಣಕ್ಕೆ ಅಪಾಯ ಇರುವುದರಿಂದ ರಕ್ಷಣೆ ಕೊಟ್ಟು ನ್ಯಾಯ ಕೊಡಿಸಬೇಕೆಂದು ನೊಂದ ಮಂಜುನಾಥ್ ಕೋರಿದರು. ಪಿತ್ರಾರ್ಜಿತವಾದ ಆಸ್ತಿಯನ್ನು ಮೂರು ಜನಕ್ಕೂ ೪ ಎಕರೆಯಂತೆ ವಿಭಾಗ ಮಾಡಿಕೊಟ್ಟಿದ್ದಾರೆ. ಕೆಲ ವರ್ಷಗಳಿಂದ ಆರೋಗ್ಯ ಸರಿಯಿಲ್ಲದೆ ಆಸ್ಪತ್ರೆಗಾಗಿ ಲಕ್ಷಾಂತರ ರುಪಾಯಿ ಖರ್ಚು ಮಾಡಿದ್ದೇನೆ. ಅದಕ್ಕಾಗಿ ಸಾಲ ಮಾಡಿದ್ದು, ನನ್ನ ಹೆಸರಿನಲ್ಲಿರುವ ಜಮೀನನ್ನು ಮಾರಾಟ ಮಾಡಲು ಬಿಡುತ್ತಿಲ್ಲ ಹಾಗೂ ನನ್ನ ಯೋಗಕ್ಷೇಮವನ್ನು ನೋಡುತ್ತಿಲ್ಲ ಎಂದು ಮಂಜುನಾಥ್‌ ದೂರಿದರು.

ಕನ್ನಡಪ್ರಭ ವಾರ್ತೆ ಹಾಸನ

ಆಸ್ತಿಗಾಗಿ ನನ್ನ ಮಕ್ಕಳೇ ನನ್ನನ್ನು ಕೊಲೆ ಮಾಡಲು ಪ್ರಯತ್ನಿಸುತ್ತಿದ್ದು, ಮಕ್ಕಳಿಂದಲೇ ನನ್ನ ಪ್ರಾಣಕ್ಕೆ ಅಪಾಯ ಇರುವುದರಿಂದ ರಕ್ಷಣೆ ಕೊಟ್ಟು ನ್ಯಾಯ ಕೊಡಿಸಬೇಕೆಂದು ನೊಂದ ಮಂಜುನಾಥ್ ಕೋರಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಅರಸೀಕೆರೆ ತಾಲೂಕಿನ, ಗಂಡಸಿ ಹೋಬಳಿಯ ಗಿಡ್ಡೆಗೌಡನ ಕೊಪ್ಪಲು ಗ್ರಾಮದಲ್ಲಿ ವಾಸವಾಗಿರುವ ಸುಮಾರು ೫೯ ವರ್ಷ ವಯಸ್ಸಿನ ಮಂಜುನಾಥ, ಈ ಹಿಂದೆ ಎಪಿಎಂಸಿ ಅಧ್ಯಕ್ಷರಾಗಿದ್ದರು. ಈಗ ಯಡವನಹಳ್ಳಿ ಸೇವಾ ಸಹಕಾರ ಸಂಘದಲ್ಲಿ ನಿರ್ದೆಶಕನಾಗಿದ್ದು, ಇವರಿಗೆ ಮೂರು ಜನ ಗಂಡು ಮಕ್ಕಳು ಇದ್ದು, ತಮ್ಮ ಪಿತ್ರಾರ್ಜಿತವಾದ ಆಸ್ತಿಯನ್ನು ಮೂರು ಜನಕ್ಕೂ ೪ ಎಕರೆಯಂತೆ ವಿಭಾಗ ಮಾಡಿಕೊಟ್ಟಿದ್ದಾರೆ. ಕೆಲ ವರ್ಷಗಳಿಂದ ಆರೋಗ್ಯ ಸರಿಯಿಲ್ಲದೆ ಆಸ್ಪತ್ರೆಗಾಗಿ ಲಕ್ಷಾಂತರ ರುಪಾಯಿ ಖರ್ಚು ಮಾಡಿದ್ದೇನೆ. ಅದಕ್ಕಾಗಿ ಸಾಲ ಮಾಡಿದ್ದು, ನನ್ನ ಹೆಸರಿನಲ್ಲಿರುವ ಜಮೀನನ್ನು ಮಾರಾಟ ಮಾಡಲು ಬಿಡುತ್ತಿಲ್ಲ ಹಾಗೂ ನನ್ನ ಯೋಗಕ್ಷೇಮವನ್ನು ನೋಡುತ್ತಿಲ್ಲ ಎಂದು ಮಂಜುನಾಥ್‌ ದೂರಿದರು.

ನನ್ನ ಮಕ್ಕಳಿಬ್ಬರು ಹಾಗೂ ಅವರ ಹೆಂಡತಿಯರು ನನ್ನ ಮನೆಗೆ ಬಂದು ನನ್ನನ್ನು ಕೊಲೆ ಮಾಡಲು ಪ್ರಯತ್ನಿಸುತ್ತಿರುತ್ತಾರೆ. ಅದಕ್ಕೆ ಸಂಬಂಧಿಸಿದಂತೆ ಗಂಡಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಎಷ್ಟು ಬುದ್ಧಿ ಮಾತು ಹೇಳಿದರೂ ನನ್ನನ್ನು ಕೊಲೆ ಮಾಡಲು ಪ್ರಯತ್ನ ಮಾಡುತ್ತಿರುತ್ತಾರೆ ಹಾಗೂ ನನ್ನನ್ನು ಕಾರಿನಿಂದ ಗುದ್ದಿಸಿ ಸಾಯಿಸಲು ಎರಡು ಬಾರಿ ಪ್ರಯತ್ನ ಮಾಡಿದ್ದು, ಅದರಿಂದಲೂ ಬಚಾವ್ ಆಗಿರುತ್ತೇನೆ. ಈ ವಿಚಾರವಾಗಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದಾಗ ಪೊಲೀಸರು ಮುಚ್ಚಳಿಕೆ ಬರೆಸಿ ಕಳುಹಿಸಿದ್ದರೂ ನನ್ನ ಮಕ್ಕಳು ನನ್ನ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಈಗ ಎಸ್ಪಿ ಅವರಲ್ಲಿ ಮನವಿ ಮಾಡಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮಂಜುನಾಥ್ ಪತ್ನಿ ಎಚ್.ಆರ್‌. ರಾಧ ಉಪಸ್ಥಿತರಿದ್ದರು.