ಸಾರಾಂಶ
ಕಾರವಾರ: ಮೀನುಗಾರರ, ಸಾರ್ವಜನಿಕರ ಮೇಲೆ ಪದೇ ಪದೇ ನೌಕಾನೆಲೆಯವರು ಹಲ್ಲೆ ಮಾಡುತ್ತಿದ್ದು, ಇದೇ ರೀತಿ ಮುಂದುವರಿದರೆ ಅವರ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ನಮ್ಮ ಪೂರ್ವಜರು ಗಾಳಿಯ ಬೀಸುವಿಕೆ, ಸಮುದ್ರದಲ್ಲಿನ ಪರಿಸ್ಥಿತಿ ಅವಲೋಕಿಸಿ ಮೀನುಗಾರಿಕೆ ಮಾಡುತ್ತಿದ್ದರು. ಆದರೀಗ, ನೌಕಾನೆಲೆಯವರನ್ನು ನೋಡಿ ಮೀನುಗಾರಿಕೆ ಮಾಡುವ ಪರಿಸ್ಥಿತಿ ಬಂದಿದೆ ಎಂದು ವಿಷಾಧಿಸಿದರು.ನೌಕಾನೆಲೆಯವರು ಸಮುದ್ರದಲ್ಲಿ ತಮ್ಮ ಗಡಿಯೆಂದು ಗುರುತಿಸಿದ್ದಾರೆ. ಅದರ ಒಳಗೆ ಯಾರಿಗೂ ಹೋಗಲು ಅವಕಾಶವಿಲ್ಲ. ಆದರೆ, ಮೀನುಗಾರಿಕೆಗೆ ತೆರಳಿದ ವೇಳೆ ಬಲೆ ಬೀಸಿದಾಗ ನೀರಿನ ರಭಸಕ್ಕೆ, ಗಾಳಿಗೆ, ಅಲೆಗಳ ಅಬ್ಬರಕ್ಕೆ ಅವರ ಬಲೆ ಗಡಿ ಪ್ರವೇಶಿಸುವುದು ಸಹಜವಾಗಿದೆ. ಇಂತಹ ವೇಳೆ ನೌಕಾ ಸಿಬ್ಬಂದಿ ಬೋಟ್‌ಗಳಲ್ಲಿ ಬಂದು ಬಲೆ ಕತ್ತರಿಸುವುದರ ಜತೆಗೆ ಮೀನುಗಾರರ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಈ ಬಗ್ಗೆ ನೌಕಾನೆಲೆ ಅಧಿಕಾರಿಗಳಿಗೆ ಸಾಕ್ಷಿ ಸಮೇತ ವರದಿ ನೀಡಿದರೂ ಕ್ರಮವಹಿಸಿಲ್ಲ. ಮುದಗಾದಲ್ಲಿ ಅಯ್ಯಪ್ಪ ವ್ರತಧಾರಿಗಳ ಮೇಲೆ ನಡೆದ ಹಲ್ಲೆಯಿಂದ ರಸ್ತೆಯ ಮೇಲೂ ಜನರು ಓಡಾಡುವ ಸ್ಥಿತಿಯಿಲ್ಲ ಎನ್ನುವ ಆತಂಕ ಪ್ರಾರಂಭವಾಗಿದೆ. ಇದೇ ರೀತಿ ಮುಂದುವರಿದರೆ ನೌಕಾನೆಲೆ ಸಿಬ್ಬಂದಿ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವಕೀಲ ನಾಗರಾಜ ನಾಯಕ ಮಾತನಾಡಿ, ನೌಕಾನೆಲೆ ಸಿಬ್ಬಂದಿ ಹಲ್ಲೆ ಮಾಡಿರುವ ಘಟನೆ ಇದೇ ಮೊದಲಲ್ಲ, ಹಲವಾರು ಬಾರಿ ನಡೆದಿದೆ. ಕೆಲ ವರ್ಷದ ಹಿಂದೆ ರಕ್ಷಣಾ ಸಿಬ್ಬಂದಿ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ದಬ್ಬಾಳಿಕೆ ಮಾಡುತ್ತಿದ್ದಾರೆ. ತಾವು ಕಾನೂನಿಗೆ ಅತೀತರು ಎನ್ನುವ ಭಾವನೆಯಲ್ಲಿದ್ದಾರೆ. ನಾಗರಿಕರಾಗಿ ಹೇಗೆ ವರ್ತಿಸಬೇಕು? ಈ ನೆಲದ ಕಾನೂನಿಗೆ ಯಾರೂ ಅತೀತರಲ್ಲ ಎನ್ನುವುದನ್ನು ಗೂಂಡಾವರ್ತನೆ ತೋರುವ ಸಿಬ್ಬಂದಿಗೆ ಹಿರಿಯ ಅಧಿಕಾರಿಗಳು ತಿಳಿಸುವ ಅಗತ್ಯವಿದೆ ಎಂದರು.ಪೊಲೀಸ್ ತನಿಖೆಯಾಗಿಲ್ಲ, ನ್ಯಾಯಾಲಯದಲ್ಲಿ ವಿಚಾರಣೆ ಮುಗಿದಿಲ್ಲ. ತೀರ್ಪು ನೀಡುವ ಮೊದಲೇ ನಿರಪರಾಧಿಗಳು ಎನ್ನುವ ಹೇಳಿಕೆ ನೀಡಲು ನೌಕಾನೆಲೆಯ ಹಿರಿಯ ಅಧಿಕಾರಿಗಳಿಗೆ ಅಧಿಕಾರ ನೀಡಿದವರು ಯಾರು? ನಾಗರಿಕ ಕಾನೂನಿನ ಬಗ್ಗೆ ತಿಳಿದಿಲ್ಲವೇ? ನಾಗರಿಕರಿಗೆ ಹೇಗೆ ಗೌರವ ನೀಡಬೇಕು ಎನ್ನುವುದು ಅರಿತಿಲ್ಲವೇ? ಒಬ್ಬ ವ್ಯಕ್ತಿ ಮೇಲೆ ೨೦ ಜನ ಹಲ್ಲೆ ಮಾಡುತ್ತಾರೆ ಎಂದರೆ ಏನರ್ಥ? ನಿಮ್ಮವರೇನು ಶತ್ರು ದೇಶದ ವಿರುದ್ಧ ಹೋರಾಡಿದ್ದೀರಾ? ತಪ್ಪು ಮಾಡಿಲ್ಲ ಎನ್ನುವ ಅಧಿಕಾರಿಗಳಿಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು.
ಉಮಾಕಾಂತ ಹರಿಕಂತ್ರ, ತೋಕು ದುರ್ಗೇಕರ, ರಾಜು ಹರಿಕಂತ್ರ, ವಾಸುದೇವ ತಾಂಡೇಲ ಮುಂತಾದವರು ಇದ್ದರು.ಸ್ಟೇಷನ್ ಬೇಲ್ ಮೇಲೆ ಬಿಡುಗಡೆ
ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸುವಲ್ಲಿ ತಪ್ಪು ಮಾಡಿದ್ದಾರೆ. ೨೦ ಜನರು ಮಾರಕಾಸ್ತ್ರದೊಂದಿಗೆ ಆಗಮಿಸಿ ಹಲ್ಲೆ ಮಾಡಿದರೂ ಜಾಮೀನು ಸಿಗುವ ಸೆಕ್ಷನ್ ಹಾಕಿದ್ದಾರೆ. ಹಲ್ಲೆ ಮಾಡಿದವರನ್ನು ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಿದ್ದಾರೆ ಎಂದರೆ ಏನು ತಿಳಿದುಕೊಳ್ಳಬೇಕು? ಈ ರೀತಿ ಅಪರಾಧ ಮಾಡಿದ ಎಷ್ಟು ಜನರನ್ನು ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಿದ್ದೀರಿ ಎನ್ನುವುದನ್ನು ಪೊಲೀಸರು ತಿಳಿಸಬೇಕು. ದೂರಿನಲ್ಲೇ ಮಾರಕಾಸ್ತ್ರ ಬಳಕೆ ಹಾಗೂ ಮಾರಣಾಂತಿಕ ಹಲ್ಲೆಗೊಳಗಾದ ಬಗ್ಗೆ ತಿಳಿಸಿದ್ದು, ಕೊಲೆ ಪ್ರಯತ್ನ ಪ್ರಕರಣ ದಾಖಲಿಸಬೇಕಿತ್ತು. ಆದರೆ, ಪೊಲೀಸರು ಈ ರೀತಿ ಮಾಡಿಲ್ಲ. ಸಾಮಾನ್ಯ ಜನರು ಮಾಡಿದ್ದರೆ ಇದೇ ರೀತಿ ಮಾಡುತ್ತಿದ್ದರಾ? ಯಾರ ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ನಾಗರಾಜ ನಾಯಕ ಪ್ರಶ್ನಿಸಿದರು.