ಉಡುಪಿ: ಇಲ್ಲಿನ ಯಕ್ಷಗಾನ ಕಲಾರಂಗದ ಐವೈಸಿ ಸಭಾಭವನದಲ್ಲಿ ವಿದ್ಯಾಪೋಷಕ್‌ ಯೋಜನೆಯ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಎರಡು ದಿನಗಳ ಶೈಕ್ಷಣಿಕ ಕಾರ್‍ಯಾಗಾರವನ್ನು ಮಂಗಳೂರು ವಿವಿಯ ನಿವೃತ್ತ ಕುಲ ಸಚಿವ ಡಾ. ಚಂದ್ರಶೇಖರ ಶೆಟ್ಟಿ ಉದ್ಘಾಟಿಸಿದರು. ವಿದ್ಯಾರ್ಥಿಗಳು ಪಠ್ಯಕ್ಕೆ ಸೀಮಿತರಾಗದೆ ತಮ್ಮ ಜ್ಞಾನ ವಿಕಸನಕ್ಕೆ ಪೂರಕವಾಗುವ ಪುಸ್ತಕಗಳ ಓದನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಅದಮಾರು ಮಠದ ಎಜುಕೇಶನಲ್ ಕೌನ್ಸಿಲ್ ನ ಗೌರವ ಕಾರ್‍ಯದರ್ಶಿಗಳಾದ ಡಾ. ಎ. ಪಿ. ಭಟ್ ಅವರು ಮೂಲ ವಿಜ್ಞಾನಕ್ಕೆ ಒತ್ತು ಕೊಡುವ ಅವಶ್ಯಕತೆ ಇದೆ. ಯಾವುದೇ ಪದವಿಯನ್ನು ಮಾಡಿದರೂ ಅದರಲ್ಲಿ ಪಡೆಯುವ ಮೂಲ ಜ್ಞಾನ ನಾವು ಮಾಡುವ ಉದ್ಯೋಗಕ್ಕೆ ಸಹಕಾರಿಯಾಗುತ್ತದೆ. ಯಾವ ಉದ್ಯೋಗವನ್ನೇ ಮಾಡಿದರೂ ಶ್ರದ್ಧೆಯಿಂದ ಅದರಲ್ಲಿ ಪೂರ್ಣತೆಯನ್ನು ಸಾಧಿಸಬೇಕು ಎಂದು ಅವರು ಸಲಹೆ ನೀಡಿದರು.

ಅತಿಥಿಗಳಾಗಿ ಆಗಮಿಸಿದ ಪ್ರೈಮ್ ಸಂಸ್ಥೆಯ ವರಿಷ್ಠರಾದ ರತ್ನ ಕುಮಾರ್ ತಮ್ಮ ಬದುಕಿನ ಹೋರಾಟದ ಕಥನವನ್ನೇ ಹೇಳಿ, ಕಠಿಣ ಪರಿಶ್ರಮದಿಂದ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ಹಿತವಚನ ನುಡಿದರು.

ಸಂಸ್ಥೆಯ ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್, ಹಿರಿಯರಾದ ಯು. ವಿಶ್ವನಾಥ ಶೆಣೈ, ಶಿಬಿರದ ನಿರ್ದೇಶಕರೂ, ಮೈಲೈಫ್ ಸಂಸ್ಥೆಯ ಸ್ಥಾಪಕರಾದ ಪ್ರವೀಣ್ ಗುಡಿ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಅನಂತರಾಜ ಉಪಾಧ್ಯಾಯ, ಅಶೋಕ್ ಎಂ. ಹಾಗೂ ಡಾ. ಪ್ರತಿಮಾ ಜೆ. ಆಚಾರ್ಯ ಸಹಕರಿಸಿದರು. ಕಾರ್‍ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದರು.

ಉದ್ಘಾಟನಾ ಸಮಾರಂಭದ ಬಳಿಕ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಪ್ರೊ. ಕೆ. ಎಸ್. ಅಡಿಗರು ಸಂವಹನ ಕೌಶಲ, ತಂಡದಲ್ಲಿ ಕೆಲಸ ಮಾಡುವ ಕೌಶಲ, ಸಮಸ್ಯೆ ಪರಿಹಾರ, ಮಾಹಿತಿ ಸಂಗ್ರಹ, ನಾಯಕತ್ವ ಗುಣ, ಸಮಯ ನಿರ್ವಹಣೆ ಮೊದಲಾದ ವಿಷಯಗಳ ಕುರಿತು ಶಿಬಿರಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು. ಅಪರಾಹ್ನ ನಡೆದ ಕಾರ್‍ಯಾಗಾರದಲ್ಲಿ ಡಾ. ಸುದರ್ಶನ ಮೂರ್ತಿ, ಪ್ರಶಾಂತ ನೀಲಾವರ, ಶ್ರೀಮತಿ ಸುಪರ್ಣಾ, ರಮ್ಯಾ ದೇಶಪಾಂಡೆ, ಪ್ರಥ್ವಿಪ್ರಸಾದ, ಸುಶ್ಮಾ, ಪವಿತ್ರಾ, ದರ್ಶನ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.