ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಒದಗಿಸಿ

| Published : Jun 16 2024, 01:50 AM IST

ಸಾರಾಂಶ

ಸರ್ಕಾರಿ ಸೌಲಭ್ಯಗಳನ್ನು ತಲುಪಿಸಲು ವಿನಾಕಾರಣ ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆದಾಡಿಸದೆ ಅವರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ತುಮಕೂರುಸರ್ಕಾರಿ ಸೌಲಭ್ಯಗಳನ್ನು ತಲುಪಿಸಲು ವಿನಾಕಾರಣ ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆದಾಡಿಸದೆ ಅವರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ಪಾವಗಡದ ಎಸ್‌ಎಸ್‌ಕೆ ರಂಗಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದರು. ಜನಸ್ಪಂದನ ಕಾರ್ಯಕ್ರಮವು ಕೇವಲ ವೇದಿಕೆ ಕಾರ್ಯಕ್ರಮಕ್ಕಷ್ಟೇ ಸೀಮಿತವಾಗಬಾರದು. ಜನರ ಅಹವಾಲುಗಳಿಗೆ ಪರಿಹಾರ ದೊರೆತಾಗ ಮಾತ್ರ ಈ ಕಾರ್ಯಕ್ರಮ ಅರ್ಥಪೂರ್ಣವಾಗುತ್ತದೆ ಎಂದರು.ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕೃತ ಅಹವಾಲು ಅರ್ಜಿಗಳನ್ನು ಆದಷ್ಟು ಬೇಗ ಬಗೆಹರಿಸುವ ಮೂಲಕ ವಿಲೇವಾರಿ ಮಾಡಬೇಕು. ಕಾನೂನು ತೊಡಕು ಇರುವ ಅರ್ಜಿಗಳನ್ನು ಹೊರತುಪಡಿಸಿ ಉಳಿದ ಅರ್ಜಿಗಳನ್ನು ಬಾಕಿಯಿಟ್ಟುಕೊಳ್ಳಬಾರದು. ಸರ್ಕಾರಿ ಸೇವೆಯಲ್ಲಿ ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿದಾಗ ಮಾತ್ರ ಜನರು ಸಮಸ್ಯೆಗಳಿಂದ ದೂರವಿರಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಆರೋಗ್ಯ ಸರಿಯಿಲ್ಲ, ಪ್ರಭಾರದಲ್ಲಿದ್ದೇನೆ ಎಂದು ಅಧಿಕಾರಿಗಳು ನೆಪ ಹೇಳದೆ ಸಮಯ ಬಿದ್ದಾಗ ಹಗಲಿರುಳು ಕೆಲಸ ಮಾಡಬೇಕು. ಕರ್ತವ್ಯ ನಿರ್ಲಕ್ಷ್ಯತೆ ತೋರುವ ಅಧಿಕಾರಿಗಳನ್ನು ಅಮಾನತ್ತಿನಲ್ಲಿಡುವುದು ಮೊದಲ ಎಚ್ಚರಿಕೆ ಸಂದೇಶ. ಆದರೂ ಅಧಿಕಾರಿಗಳು ತಮ್ಮ ನಡೆಯನ್ನು ಸುಧಾರಿಸಿಕೊಳ್ಳದಿದ್ದರೆ ನೇರವಾಗಿ ಸೇವೆಯಿಂದ ವಜಾಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ಸಾರ್ವಜನಿಕರ ಸಮಸ್ಯೆಗಳನ್ನು ನಿಗಧಿತ ಅವಧಿಯೊಳಗೆ ಪರಿಹರಿಸುವುದೇ ಜನಸ್ಪಂದನಾ ಕಾರ್ಯಕ್ರಮದ ಉದ್ದೇಶ. ಉದ್ದೇಶ ಕಾರ್ಯಗತವಾಗದಿದ್ದಲ್ಲಿ ಇಂತಹ ೧೦೦ ಕಾರ್ಯಕ್ರಮಗಳನ್ನು ಏರ್ಪಡಿಸಿದರೂ ಯಾವುದೇ ಪ್ರಯೋಜನವಿಲ್ಲ ಎಂದರು. ಈ ಕಾರ್ಯಕ್ರಮದಲ್ಲಿ ಸ್ವೀಕೃತವಾದ ಅಹವಾಲು ಅರ್ಜಿಗಳಿಗೆ ಹಿಂಬರಹ ನೀಡಿ ಸುಮ್ಮನೆ ಕೂರದೆ ಶೇ.100 ರಷ್ಟು ವಿಲೇವಾರಿ ಮಾಡಬೇಕು. ಲೋಕಸಭಾ ಚುನಾವಣೆಗೂ ಮುನ್ನ ಪಾವಗಡ ತಾಲೂಕಿನಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಳೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕರಿಸಿದ್ದ ಸಾರ್ವಜನಿಕರ ಅಹವಾಲುಗಳು ಬಾಕಿಯಿದ್ದಲ್ಲಿ ಆದ್ಯತೆ ಮೇಲೆ ವಿಲೇವಾರಿ ಮಾಡಬೇಕು ಎಂದು ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಧಿಕಾರಿಗಳು ಜನರ ಸಮಸ್ಯೆಗಳ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಬೇಕು. ಸರ್ಕಾರದ ನಿರ್ದೇಶನಗಳನ್ನು ಪಾಲಿಸದೆ ಇರುವ ಅಧಿಕಾರಿಗಳು ತಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳಬೇಕು. ರಾಜ್ಯದ ಅಭಿವೃದ್ಧಿ ನಿಟ್ಟಿನಲ್ಲಿ ಬೇಕಾಬಿಟ್ಟಿ ಕೆಲಸ ಮಾಡುವ ಅಧಿಕಾರಿಗಳನ್ನು ಮುಲಾಜಿಲ್ಲದೆ ಸೇವೆಯಿಂದ ವಜಾ ಮಾಡಲು ಕ್ರಮ ಕೈಗೊಳ್ಳಬೇಕೆಂದು ಮುಖ್ಯ ಮಂತ್ರಿಗಳು ನಡೆಸಿದ ಸಭೆಯಲ್ಲಿ ಎಲ್ಲಾ ಜಿಲ್ಲಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಇಲಾಖಾಧಿಕಾರಿಗಳು ಸರ್ಕಾರದ ಆಶೋತ್ತರಗಳಂತೆ ಪ್ರಾಮಾಣಿಕವಾಗಿ ಜನರ ಸೇವೆ ಮಾಡಬೇಕೆಂದು ಎಚ್ಚರಿಕೆ ನೀಡಿದರು. ಸಕಾಲ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪೌತಿ ಖಾತೆ, ೩& ೯ ವ್ಯತ್ಯಾಸ, ಮತ್ತಿತರ ಕಂದಾಯ ವಿಷಯಗಳಡಿ ಸೌಲಭ್ಯ ಕೋರಿ ಬಂದ ಅರ್ಜಿಗಳನ್ನು ನಿಗಧಿತ ಅವಧಿಯೊಳಗೆ ವಿಲೇವಾರಿ ಮಾಡದೆ ಬಾಕಿ ಉಳಿಸಿಕೊಂಡು ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆದಾಡಿಸುವ ಅಧಿಕಾರಿ, ನೌಕರರು ಮುಂದಿನ ದಿನಗಳಲ್ಲಿ ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ನಿರ್ದೇಶನ ನೀಡಿದರು. ಜಿಲ್ಲೆಯ ಶಾಲೆ, ಕಾಲೇಜು ವಿದ್ಯಾರ್ಥಿ ನಿಲಯಗಳಿಗೆ ವಾರಕ್ಕೊಮ್ಮೆ ಭೇಟಿ ನೀಡಿ ಪರಿಶೀಲಿಸಬೇಕು. ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಿ ಉತ್ತಮ ಫಲಿತಾಂಶಕ್ಕೆ ಶ್ರಮಿಸಬೇಕೆಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದರು. ಕಳೆದ ವರ್ಷ ಬರಪರಿಸ್ಥಿತಿಯಿಂದ ನಷ್ಟ ಹೊಂದಿದ್ದ ಪಾವಗಡ ತಾಲೂಕು ರೈತರ ಖಾತೆಗೆ 5.49 ಕೋಟಿ ರೂ.ಗಳ ಪರಿಹಾರ ಸೇರಿ ಜಿಲ್ಲೆಯಲ್ಲಿ ಒಟ್ಟು 107 ಕೋಟಿ ರೂ. ರೈತರ ಖಾತೆಗೆ ಜಮೆ ಮಾಡಲಾಗಿದೆ. ಜಿಲ್ಲೆಯಲ್ಲಿ ಇನ್ನು 39000 ರೈತರ ಆಧಾರ್ ಸೀಡಿಂಗ್ ಬಾಕಿ ಉಳಿದಿದೆ. ರೈತರು ಬ್ಯಾಂಕ್‌ಗಳಿಗೆ ಭೇಟಿ ನೀಡಿ ತಮ್ಮ ಖಾತೆಗೆ ಆಧಾರ್ ಸೀಡಿಂಗ್ ಮಾಡಿಸಬೇಕು. ಇಲ್ಲದಿದ್ದರೆ ರೈತರ ಖಾತೆಗೆ ನೇರವಾಗಿ ಡಿಬಿಟಿ ಮೂಲಕ ಜಮೆಯಾಗಬೇಕಾದ ಸರ್ಕಾರದ ಆರ್ಥಿಕ ಸವಲತ್ತನ್ನು ಜಮೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.

ಪಾವಗಡ ತಾಲೂಕಿನಲ್ಲಿ 18.39 ಕೋಟಿ ರೂ. ಸೇರಿ ಜಿಲ್ಲೆಯಲ್ಲಿ ಒಟ್ಟು 67.80 ಕೋಟಿ ರೂ.ಗಳ ವಿಮಾ ಹಣ ರೈತರ ಖಾತೆಗೆ ಸಂದಾಯವಾಗಿದೆ. ರೈತರು ಶೇ.2ರಷ್ಟು ಪ್ರೀಮಿಯಂ ಹಣ ಪಾವತಿ ಮಾಡುವ ಮೂಲಕ ಬೆಳೆ ವಿಮಾ ಸೌಲಭ್ಯ ಪಡೆಯಬಹುದು. ಉಳಿದ ಶೇ.೯೮ರಷ್ಟು ಹಣವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಪಾವತಿ ಮಾಡಲಾಗುವುದು. ಕಳೆದ 2023 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆಗೆ ಸಂಬಂಧಿಸಿದಂತೆ ಪಾವಗಡ ತಾಲೂಕಿನ 6655 ರೈತರು ಮಾತ್ರ ವಿಮಾ ಸೌಲಭ್ಯ ಪಡೆದಿದ್ದಾರೆ. ಯಾವ ಸಮಯದಲ್ಲಿ ಅನಾವೃಷ್ಟಿ, ಅತಿವೃಷ್ಟಿ, ಪ್ರಕೃತಿ ವಿಕೋಪಗಳು ಘಟಿಸುತ್ತವೆಯೋ ತಿಳಿಯಲಾಗದು. ಈ ನಿಟ್ಟಿನಲ್ಲಿ ಜಿಲ್ಲೆಯ ರೈತರು ಬೆಳೆ ವಿಮಾ ಯೋಜನೆಗೆ ನೋಂದಾಯಿಸಿಕೊಳ್ಳಬೇಕೆಂದು ಮನವಿ ಮಾಡಿದರು.ಶಾಸಕ ಎಚ್.ವಿ.ವೆಂಕಟೇಶ್ ಮಾತನಾಡಿ, ತಾಲೂಕಿನಲ್ಲಿರುವ ನಾಗಲಮಡಿಕೆ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಕ್ರಮವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಮನವಿ ಮಾಡಿದರು. ಜಿಪಂ ಸಿಇಒ ಜಿ. ಪ್ರಭು ಮಾತನಾಡಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಇಂದು ಬೆಳಿಗ್ಗೆ ಪಾವಗಡ ತಾಲೂಕಿನ ಎಲ್ಲ ಇಲಾಖೆಗಳ ಸ್ಥಿತಿಗತಿಗಳ ಬಗ್ಗೆ ಹಾಗೂ ವಿವಿಧ ಗ್ರಾಮಗಳ ರಸ್ತೆ, ವಸತಿ ನಿಲಯ, ಆಸ್ಪತ್ರೆಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿ ತಾಲೂಕು ಪ್ರಗತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು, ಅಧಿಕಾರಿಗಳು ಬದ್ಧತೆಯಿಂದ ಕಾರ್ಯನಿರ್ವಹಿಸಿ ನ್ಯೂನ್ಯತೆಗಳನ್ನು ಪರಿಹರಿಸಬೇಕು. ಯಾವುದೇ ಗಂಭೀರ ಪರಿಣಾಮಗಳಿಗೆ ಆಸ್ಪದ ನೀಡಬಾರದು. ಮುಂದಿನ ದಿನಗಳಲ್ಲಿ ಕಚೇರಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಬಾಕಿ ಕಡತಗಳನ್ನು ಪರಿಶೀಲಿಸಲಾಗುವುದು. ಸಕಾರಣವಿಲ್ಲದೆ ಕಡತಗಳ ವಿಲೇವಾರಿಯಲ್ಲಿ ವಿಳಂಬ ಮಾಡಿರುವುದು ಕಂಡು ಬಂದರೆ ಸ್ಥಳದಲ್ಲೇ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಸೂಚನೆ ನೀಡಿದರು.

ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಜಾನಕೀರಾಂ, ತಹಸೀಲ್ದಾರ್ ವರದರಾಜು, ಪುರಸಭೆ ಸದಸ್ಯ ಜಿ. ನಾಗರಾಜು ಉಪಸ್ಥಿತರಿದ್ದರು.