ಸಾರಾಂಶ
ತಾಲೂಕಿನ ಕ್ಯಾದಿಗುಪ್ಪ ಗ್ರಾಮಕ್ಕೆ ಹೆಚ್ಚುವರಿ ಬಸ್ ಬಿಡಬೇಕು ಎಂದು ಪಟ್ಟು ಹಿಡಿದು ಗ್ರಾಮಸ್ಥರ ಸಹಕಾರದೊಂದಿಗೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಬಸ್‌ಗಳ ಕೊರತೆಯಿಂದಾಗಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ತೊಂದರೆ
ಕನ್ನಡಪ್ರಭ ವಾರ್ತೆ ಕುಷ್ಟಗಿತಾಲೂಕಿನ ಕ್ಯಾದಿಗುಪ್ಪ ಗ್ರಾಮಕ್ಕೆ ಹೆಚ್ಚುವರಿ ಬಸ್ ಬಿಡಬೇಕು ಎಂದು ಪಟ್ಟು ಹಿಡಿದು ಗ್ರಾಮಸ್ಥರ ಸಹಕಾರದೊಂದಿಗೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.ತಾಲೂಕಿನ ಕ್ಯಾದಿಗುಪ್ಪ, ಬಿಜಕಲ್, ಹೆಸರೂರು, ದೋಟಿಹಾಳ, ಕೇಸೂರು, ಮುದೇನೂರು, ಜಾಲಿಹಾಳ ಇತರೆ ಗ್ರಾಮಗಳಿಂದ ಪ್ರತಿ ದಿನ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ನೂರಾರು ಸಂಖ್ಯೆಯ ಪ್ರಯಾಣಿಕರು ಕುಷ್ಟಗಿ ಹಾಗೂ ಇಲಕಲ್ಲ ನಗರಗಳಿಗೆ ಪ್ರಯಾಣ ಮಾಡುತ್ತಾರೆ. ಆದರೆ ದೋಟಿಹಾಳ ಮಾರ್ಗವಾಗಿ ಕುಷ್ಟಗಿ ಹಾಗೂ ಇಲಕಲ್ಲ ನಗರಕ್ಕೆ ತೆರಳಲು ಬಸ್‌ಗಳ ಕೊರತೆಯಿಂದಾಗಿ ತೊಂದರೆ ಉಂಟಾಗುತ್ತಿದೆ.
ದಿನಾಲು ಬೆಳಗ್ಗೆ 6.30 ಮತ್ತು 7.30ಕ್ಕೆ ಮಾತ್ರ ಬಸ್ ಇವೆ. ಬಳಿಕ ಸುಮಾರು ಎರಡು ತಾಸುಗಳ ಕಾಲ ಯಾವುದೇ ಬಸ್ ಇಲ್ಲ. ಈ ಪರಿಣಾಮವಾಗಿ ವಿದ್ಯಾರ್ಥಿಗಳು ತರಗತಿಗೆ 10 ಗಂಟೆಯ ನಂತರ ತರಗತಿಗೆ ಹೋಗುತ್ತಿದ್ದಾರೆ. ಹಲವು ಸಲ ಮೌಖಿಕವಾಗಿ ಹಾಗೂ ಲಿಖಿತವಾಗಿ ಹೇಳಿದರೂ ಸಾರಿಗೆಯ ಇಲಾಖೆಯ ಅಧಿಕಾರಿಗಳು ಬಸ್ ಬಿಡುತ್ತಿಲ್ಲ, ನಮಗೆ ಇನ್ನೂ ಎರಡು ಬಸ್ ಬಿಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯ ಮಾಡಿದರು.ಅಧಿಕಾರಿಗಳ ಭೇಟಿ:
ಪ್ರತಿಭಟನಾ ಸ್ಥಳಕ್ಕೆ ಸಾರಿಗೆಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಹೆಚ್ಚುವರಿ ಬಸ್ಸುಗಳನ್ನು ಬಿಡುವ ವ್ಯವಸ್ಥೆ ಮಾಡಲಾಗುವುದು ಎಂದು ವಿದ್ಯಾರ್ಥಿಗಳ ಮನವೊಲಿಸಿದರು.ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ದೋಟಿಹಾಳ ಮಾರ್ಗವಾಗಿ ನಾಲ್ಕು ಬಸ್ಸುಗಳನ್ನು ಬಿಡುವಂತೆ ತಿಳಿಸಲಾಗಿದ್ದು, ಒಂದು ವಾರದೊಳಗೆ ಸಮಸ್ಯೆ ಸರಿಪಡಿಸಲಾಗುತ್ತದೆ ಎಂದು ಕುಷ್ಟಗಿ ಸಂಚಾರಿ ನಿಯಂತ್ರಕ ಜಯಪ್ರಕಾಶ ತಿಳಿಸಿದರು.
ಮನವಿ ನೀಡುತ್ತಾ ಬಂದಿದ್ದರೂ ಸಹಿತ ಸಾರಿಗೆಯ ಅಧಿಕಾರಿಗಳು ಕ್ರಮ ಜರುಗಿಸುತ್ತಿಲ್ಲ. ಕೂಡಲೇ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ವಿದ್ಯಾರ್ಥಿಗಳಿಗೆ ಹಾಗೂ ಪ್ರಯಾಣಿಕರಿಗೆ ಅನೂಕೂಲ ಕಲ್ಪಿಸಿಕೊಡಬೇಕು ಎಂದು ದೋಟಿಹಾಳ ಗ್ರಾಪಂ ಅಧ್ಯಕ್ಷ ಮಹೇಶ ಕಾಳಗಿ ಒತ್ತಾಯಿಸಿದ್ದಾರೆ.