ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ನಮ್ಮ ಸರ್ಕಾರ ಬಿಎಸ್ವೈ ವಿಚಾರದಲ್ಲಿ ದ್ವೇಷ ಮಾಡುವ ಪ್ರಶ್ನೆಯೇ ಇಲ್ಲ. ನಾವು ದ್ವೇಷ ರಾಜಕಾರಣ ಮಾಡಲ್ಲ ಎಂದು ಸಿಎಂ ಅನೇಕ ಬಾರಿ ಹೇಳಿದ್ದಾರೆ. ಪೋಕ್ಸೋ ಕಾಯ್ದೆ ಯಾರ ಮನೆಯದ್ದು, ಸರ್ಕಾರದ್ದು ಅಲ್ಲ. ಪೋಕ್ಸೋ ಕಾಯ್ದೆ ತಪ್ಪು ಎಂದಾದರೆ ಮುರುಘಾಶರಣರ ವಿಚಾರವೂ ತಪ್ಪಾ? ಇದರಲ್ಲಿ ಯಾವುದೇ ರಾಜಕಾರಣ ಇಲ್ಲ. ಬಿಜೆಪಿಯವರೇ ಇದರಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ ತಿರುಗೇಟು ನೀಡಿದರು.ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಯಡಿಯೂರಪ್ಪರಿಗೆ 82 ವರ್ಷ ವಯಸ್ಸಾಗಿದ್ದು, ಅವರು ಹಿರಿಯರು. ಯಡಿಯೂರಪ್ಪ ಅವರ ಬಗ್ಗೆ ಎಲ್ಲರಿಗೂ ಗೌರವವಿದೆ. ಅಭಿಮಾನವಿದೆ. ಅನುಕಂಪವಿದೆ. ಅವರಿಗೆ ತೊಂದರೆ ಕೊಡುವುದನ್ನು ನಾವು ಬಯಸುತ್ತೇವಾ ಎಂದು ಪ್ರಶ್ನಿಸಿದರು. ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್ ಹಾಗೂ ಅವರ ಬಂಧನಕ್ಕೆ ತಡೆ ನೀಡಿದ ಹೈಕೋರ್ಟ್ ವಿಚಾರಕ್ಕೆ ನಗರದ ಜಿಲ್ಲಾ ಪಂಚಾಯತಿ ಸಭಾಂಗಣದ ಮುಂಭಾಗ ಮಾತನಾಡಿದ ಅವರು, ಹಾಗೊಂದು ವೇಳೆ ನಾವು ಉದ್ದೇಶಪೂರ್ವಕ ಮಾಡಿದರೆ ಅದರ ಪರಿಣಾಮಗಳ ಬಗ್ಗೆಯೂ ನಮಗೆ ಗೊತ್ತು ಎಂದರು.
ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶರಣರ ಸ್ಥಿತಿ ಏನಾಯಿತು? ಈಗಲೂ ಅವರು ಜೈಲಿನ ಒಳಗಿದ್ದಾರೆ. ಎಲ್ಲವನ್ನೂ ಕಾನೂನು ಪ್ರಕಾರ ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದರು.ಕೋರ್ಟ್ ಆದೇಶ ಪಾಲಿಸುತ್ತೇವೆ:
ಈ ಪ್ರಕರಣ ಕುರಿತು ಅವರು ಮ್ಯಾಜಿಸ್ಟ್ರಿಯಲ್ 64 ಸ್ಟೇಟ್‌ಮೆಂಟ್ ಮಾಡಿದ್ದಾರೆ. ಅದು ಕೋರ್ಟ್ ನಿರ್ದೇಶನವಾಗಿದೆ. ಸರ್ಕಾರವೇ ಬೇರೆ, ನ್ಯಾಯಾಲಯವೇ ಬೇರೆ. ಯಡಿಯೂರಪ್ಪ ಮೇಲೆ ವಾರಂಟ್ ಜಾರಿ ಮಾಡಲು ಕೋರ್ಟ್ ನಿರ್ದೇಶನ ನೀಡಿತ್ತು. ಅದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಹೈಕೋರ್ಟ್ ಆದೇಶವನ್ನು ಗೌರವಿಸುತ್ತೇವೆ ಎಂದು ತಿಳಿಸಿದರು.ರಾಜಕೀಯ ನಿವೃತ್ತಿ:
ಹಿಂದುಳಿದ ಮತಕ್ಷೇತ್ರಗಳ ಅಭಿವೃದ್ಧಿ ಮಾಡದಿದ್ದರೆ ರಾಜಕೀಯ ನಿವೃತ್ತಿ ಎಂದಿರುವ ಶಾಸಕ ಸಿ.ಎಸ್ ನಾಡಗೌಡ ಅವರ ಹೇಳಿಕೆ ಕುರಿತು ಮಾತನಾಡಿದ ಸಚಿವರು, ಶಾಸಕ ಸಿ.ಎಸ್.ನಾಡಗೌಡ ಶನಿವಾರ ಬೆಳಗ್ಗೆಯೇ ನನ್ನ ಜೊತೆ ಮಾತನಾಡಿದ್ದಾರೆ. ಕೆಲ ಕಾಮಗಾರಿಗಳ ಬಗ್ಗೆ ಹಾಗೂ ಕೆಲ ಅಧಿಕಾರಿಗಳ ಸಮಸ್ಯೆ ಕುರಿತು ಮಾತನಾಡಿದ್ದಾರೆ. ಶಾಸಕ ನಾಡಗೌಡರ ವಿಚಾರ ಕುರಿತು ಸಿಎಂ ಅವರು ಚರ್ಚೆ ಮಾಡುತ್ತಾರೆ ಎಂದಷ್ಟೇ ಹೇಳಿದರು.ಸರ್ಕಾರಕ್ಕೆ ಯಾವುದೇ ಹಣದ ಕೊರತೆ ಇಲ್ಲ. ಎಲ್ಲ ಗ್ಯಾರಂಟಿಗಳನ್ನು ಈಡೇರಿಸಿದ್ದೇವೆ. ಈ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಆರ್ಥಿಕ ತಜ್ಞರು ಗ್ಯಾರಂಟಿ ಯೋಜನೆಗಳು ಮುಂದುವರೆಯುತ್ತವೆ. ರಾಜಕೀಯವಾಗಿ ಗ್ಯಾರಂಟಿ ಯೋಜನೆಗಳಿಂದ ನಮ್ಮ ಪಕ್ಷಕ್ಕೆ ಅನುಕೂಲವಾಯ್ತಾ ಇಲ್ಲವಾ ಎಂಬುದನ್ನು ಪಕ್ಷದಲ್ಲಿ ಚರ್ಚೆ ಮಾಡುತ್ತೇವೆ. ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತವೆ ಎಂದು ಹೇಳಿದರು.
ಕುಮಟಳ್ಳಿ ಕಾಂಗ್ರೆಸ್‌ಗೆ ಬರುವುದು ಸತೀಶಗೆ ಗೊತ್ತು:ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಬಿಜೆಪಿ ಮುಖಂಡ ಮಹೇಶ ಕುಮಟಳ್ಳಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅವರು ಯಾಕೆ ಭೇಟಿಯಾಗಿದ್ದಾರೆ ಎಂಬುವುದು ನನಗೆ ಗೊತ್ತಿಲ್ಲ. ಮಹೇಶ ಕುಮಟಳ್ಳಿ ನನಗೂ ಆತ್ಮೀಯರು. ಅವರಿಗೆ ಮೊದಲ ಬಾರಿ ವಿಧಾನಸಭೆ ಚುನಾವಣೆಗೆ ಟಿಕೆಟ್ ನಾನೇ ಕೊಡಿಸಿದ್ದು, ಅವರ ಪುತ್ರನ ಮದುವೆಗೂ ನಾನು ಹೋಗಿದ್ದೆ. ಅವರು ವಿಜಯಪುರಕ್ಕೆ ಬಂದಾಗ ನಮ್ಮ ಮನೆಗೆ ಬರುತ್ತಾರೆ. ಜಾರಕಿಹೊಳಿ ಹಾಗೂ ಕುಮಟಳ್ಳಿ ಯಾಕೆ ಭೇಟಿಯಾಗಿದ್ದಾರೆಂದು ಅವರನ್ನೇ ಕೇಳಬೇಕು ಎಂದರು.ಅವರ ಭೇಟಿಯ ಕುರಿತು ನನಗೆ ಗೊತ್ತಿಲ್ಲ. ನನಗೆ ಬಹಳ ಜನರು ಭೇಟಿಯಾಗುತ್ತಾರೆ. ಸಚಿವನಾಗಿರುವ ಕಾರಣ ಬಿಜೆಪಿ ಶಾಸಕರು ಬಂದು ಭೇಟಿಯಾಗುತ್ತಾರೆ. ಕರೆ ಮಾಡುತ್ತಾರೆ. ನಮ್ಮ ಮನೆಗೆ ಬರುತ್ತಾರೆ ನಾವು ಅವರ ಮನೆಗೆ ಹೋಗುತ್ತೇವೆ. ಕುಮಟಳ್ಳಿ ಬೇರೆ ಜಿಲ್ಲೆಯವರಾ ಅಥಣಿಯವರು. ಮೊದಲು ನಮ್ಮ ಪಕ್ಷದಲ್ಲಿದ್ದವರು ಅವರು ಸತೀಶ ಜಾರಕಿಹೊಳಿ ಅವರನ್ನು ಭೇಟಿಯಾಗುವುದರಲ್ಲಿ ತಪ್ಪೇನಿದೆ?. ಕುಮಟಳ್ಳಿ ಕಾಂಗ್ರೆಸ್‌ಗೆ ಬರುತ್ತಾರೋ ಹೋಗುತ್ತಾರೋ ಜಾರಕಿಹೊಳಿ ಹಾಗೂ ಅವರಿಗೆ ಗೊತ್ತು ಎಂದರು.
----ಅಭಿವೃದ್ಧಿಗೆ, ಗ್ಯಾರಂಟಿಗೆ ಹಣ ಬೇಕಲ್ಲ?: ಸಚಿವ ಎಂಬಿಪಾ
ಉಳಿದ ರಾಜ್ಯಗಳಿಗಿಂತ ಪೆಟ್ರೋಲ್ ಮತ್ತು ಡೀಸೆಲ್ ದರ ಕರ್ನಾಟಕದಲ್ಲಿ ಕಡಿಮೆ ಇದೆ. ತಮಿಳುನಾಡು ಹಾಗೂ ಇತರೆ ರಾಜ್ಯಗಳಲ್ಲಿ ₹5 ರಿಂದ ₹10 ಹೆಚ್ಚಿಗೆ ದರ ಇದೆ. ಇತರೆ ರಾಜ್ಯಗಳಿಗಿಂತ ಪೆಟ್ರೋಲ್, ಡೀಸೆಲ್ ದರ ಕಡಿಮೆ ಮಾಡಿ ಬೆಲೆ ಏರಿಕೆ ಮಾಡಲಾಗಿದೆ. ಆದಾಯ ಕಡಿಮೆಯಾಗುತ್ತಿದೆ. ಅಭಿವೃದ್ಧಿಗೆ, ಗ್ಯಾರಂಟಿಗೆ ಹಣ ಬೇಕಲ್ಲ? ಅನವಶ್ಯಕವಾಗಿ ಹೆಚ್ಚಿಗೆ ಬೆಲೆ ಏರಿಕೆ ಮಾಡದೆ, ಇತರೆ ರಾಜ್ಯಗಳ ಬೆಲೆ ತುಲನೆ ಮಾಡಿ ಏರಿಕೆ ಮಾಡಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿದರೂ ಅವುಗಳ ಬೆಲೆ ಉಳಿದ ರಾಜ್ಯಗಳಿಗಿಂತ ನಮ್ಮಲ್ಲಿ ಕಡಿಮೆ ಇದೆ. ನಾವು ತೈಲ ಬೆಲೆ ಎಷ್ಟೇ ಏರಿಕೆ ಮಾಡಿದರು ಅದು ಉಳಿದ ರಾಜ್ಯಗಳಿಗಿಂತ ಕಡಿಮೆ ಇದೆ. ಅಭಿವೃದ್ಧಿ ಜನರಿಗಾಗಿಯೇ ಮಾಡುವುದಲ್ಲವೇ? ಗ್ಯಾರಂಟಿ ಯೋಜನೆಗಳನ್ನು ಎಲ್ಲರಿಗೂ ಕೊಡುತ್ತಿದ್ದೇವೆ. ಪೆಟ್ರೋಲ್, ಡೀಸೆಲ್ ಬೆಲೆಗಳು ಉಳಿದ ರಾಜ್ಯಗಳಿಗಿಂತ ಹೆಚ್ಚಿಗೆ ಇದ್ದರೆ ಕೇಳಿ. ತೈಲ ಬೆಲೆಗಳನ್ನು ಕೇಂದ್ರ ಸರ್ಕಾರ ಇಳಿಕೆ ಮಾಡಿಲ್ಲ. ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿದ್ದಾಗ ಗ್ಯಾಸ್ ಬೆಲೆ ₹440 ಇತ್ತು. ಬಿಜೆಪಿ ಸರ್ಕಾರದಲ್ಲಿ ₹1100 ಆಗಿದೆ ಎಂದರು.
ವಿವಿಧ ವಸ್ತುಗಳ ಬೆಲೆ ಏರಿಕೆ ಕುರಿತು ಮೋದಿ ಅವರನ್ನು ನೀವು ಕೇಳಲಿಲ್ಲ. ಪೆಟ್ರೋಲ್, ಡೀಸೆಲ್ ಬೆಲೆಗಳ ಏರಿಕೆಯನ್ನು ಅನವಶ್ಯಕವಾಗಿ ನಾವು ಮಾಡಿಲ್ಲ. ಮನಮೋಹನ್ ಸಿಂಗ್ ಪಿಎಂ ಆಗಿದ್ದಾಗ ಪೆಟ್ರೋಲ್ ಲೀಟರ್‌ಗೆ ₹64 ಇತ್ತು. ಈಗ ಪೆಟ್ರೋಲ್ ಲೀಟರ್‌ಗೆ ₹105 ಆಗಿದೆ. ಬಿಜೆಪಿ ಸರ್ಕಾರದಲ್ಲಿ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದೆ. ಮೋದಿ ಹಾಗೂ ಕೇಂದ್ರ ಸರ್ಕಾರಕ್ಕೆ ಅನ್ವಯಿಸುವುದಿಲ್ಲವಾ ಎಂದು ಅವರು ಪ್ರಶ್ನಿಸಿದರು.