ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯಾದ್ಯಂತ ಗ್ರಾಪಂ ವ್ಯಾಪ್ತಿಗಳಲ್ಲಿನ ಖಾಸಗಿ ಹಾಗೂ ಕಂದಾಯ ಬಡಾವಣೆಗಳಲ್ಲಿನ ರಸ್ತೆಗಳನ್ನು ಸರ್ಕಾರಿ ರಸ್ತೆಗಳಾಗಿ ಪರಿವರ್ತಿಸಿ ಸರ್ಕಾರದ ವ್ಯಾಪ್ತಿಗೆ ತೆಗೆದುಕೊಳ್ಳಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಮಾಡಲಾಗಿದೆ.

ಬೆಂಗಳೂರು ನಗರದ ಮಾದರಿಯಲ್ಲಿ ಬಿ ಖಾತೆಗಳನ್ನು ಎ ಖಾತೆಯಾಗಿ ಬದಲಿಸಲು ಪೂರಕವಾಗಿ ರಾಜ್ಯ ಸರ್ಕಾರ ಈ ತೀರ್ಮಾನ ಮಾಡಿದೆ. ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಬೆಂಗಳೂರು ಮಾದರಿಯಲ್ಲಿ ರಾಜ್ಯದ ಎಲ್ಲ ಪಂಚಾಯ್ತಿ ರಸ್ತೆಗಳನ್ನೂ ಸರ್ಕಾರಿ ರಸ್ತೆಗಳಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ. ಅದರಂತೆ ಕಂದಾಯ ಅಥವಾ ಖಾಸಗಿ ರಸ್ತೆಗಳೆಲ್ಲವೂ ಸರ್ಕಾರಿ ವ್ಯಾಪ್ತಿಗೆ ಬರಲಿವೆ ಎಂದು ಹೇಳಿದರು.

ಉದಾಹರಣೆಗೆ ಯಾವೊಂದು ಬಡಾವಣೆ ನಿರ್ಮಿಸಲಾಗಿರುತ್ತದೆ. ಅದಕ್ಕೆ ರಸ್ತೆಯನ್ನೂ ಬಡಾವಣೆ ಮಾಲೀಕರು ನಿರ್ಮಿಸಿರುತ್ತಾರೆ. ಆದರೆ ಆ ರಸ್ತೆಯು ಮಾಲೀಕರ ಹೆಸರಿನಲ್ಲೇ ಇರುತ್ತದೆ. ಆಗ ಆ ರಸ್ತೆಯನ್ನು ಸರ್ಕಾರಿ ರಸ್ತೆ ಎಂದೇ ಘೋಷಿಸಲಾಗುವುದು. ಇದರಿಂದ ಸಂಬಂಧಪಟ್ಟ ನಿವೇಶನಗಳಿಗೆ ಸರ್ಕಾರಿ ರಸ್ತೆಯ ಸೌಲಭ್ಯ ದೊರೆಯುತ್ತದೆ ಎಂದು ಶಿವಕುಮಾರ್‌ ತಿಳಿಸಿದರು.

ಇದನ್ನು ನಾನು ಈ ಹಿಂದೆ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವನಾಗಿದ್ದಾಗ ನಗರಕ್ಕೆ ಸೀಮಿತವಾಗಿ ಮಾಡಿದ್ದೆ. ಈಗ ಎಲ್ಲಾ ಗ್ರಾಪಂಗಳ ವ್ಯಾಪ್ತಿಯಲ್ಲಿ ಇದನ್ನು ವಿಸ್ತರಿಸಲಾಗುತ್ತಿದೆ. ಇದರಿಂದ ಅಂತಹ ಆಸ್ತಿಗಳಲ್ಲಿ ನಿವೇಶನ ಪಡೆದಿರುವವರಿಗೆ ಅನುಕೂಲವಾಗಲಿದೆ ಎಂದು ವಿವರಿಸಿದರು.ಸಾರಿಗೆ ನಿಗಮಗಳ ನಷ್ಟದ ನೋಡಿ ಬಸ್‌ ದರ ನಿರ್ಧಾರ:


ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಿಗಮಗಳಿಗೆ ಎಷ್ಟು ನಷ್ಟವಾಗುತ್ತಿದೆ ಎಂದು ಪರಿಶೀಲನೆ ಮಾಡಿ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಧಿಕಾರಿಗಳು ವರದಿ ನೀಡಿದ ಬಳಿಕ ಬಸ್‌ ದರ ಏರಿಕೆ ಸಂಬಂಧ ಅಗತ್ಯ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಬಸ್‌ ಪ್ರಯಾಣ ದರ ಹೆಚ್ಚಳದ ಬಗ್ಗೆ ಚರ್ಚೆ ನಡೆಸಲಾಯಿತು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್‌, ಇಂಧನ ಬೆಲೆ ಹೆಚ್ಚಳ ಸೇರಿ ವಿವಿಧ ಕಾರಣಗಳಿಂದ ಸಂಸ್ಥೆಗೆ ಎಷ್ಟು ನಷ್ಟ ಉಂಟಾಗುತ್ತಿದೆ ಎಂದು ವರದಿ ನೀಡಲು ಸಾರಿಗೆ ಇಲಾಖೆಯನ್ನು ಕೇಳಿದ್ದೇವೆ. ವರದಿ ಆಧರಿಸಿ ಮುಂದಿನ ತೀರ್ಮಾನ ಮಾಡುತ್ತೇವೆ ಎಂದರು.ಆರ್ಥಿಕ ಮುಗ್ಗಟ್ಟು ಕುರಿತು ಚರ್ಚೆ:

ಡೀಸೆಲ್‌ ಬೆಲೆ ಏರಿಕೆಯಾಗಿದೆ. ನೌಕರರ ವೇತನ ಹೆಚ್ಚಳದಿಂದಾಗಿ ನಿಗಮಗಳು ಸಂಕಷ್ಟಕ್ಕೆ ಸಿಲುಕಿವೆ. ಈ ಆರ್ಥಿಕ ಮುಗ್ಗಟ್ಟನ್ನು ನೀಗಿಸಲು ಬಸ್‌ ಪ್ರಯಾಣ ದರ ಹೆಚ್ಚಳಕ್ಕೆ ನಿಗಮಗಳು ಮನವಿ ಮಾಡಿವೆ ಎಂಬುದನ್ನು ಸಭೆಯಲ್ಲಿ ಅಧಿಕಾರಿಗಳು ಸಿಎಂ ಗಮನಕ್ಕೆ ತಂದರು ಎಂದು ತಿಳಿದು ಬಂದಿದೆ.

ಸಾರಿಗೆ ನಿಗಮಗಳ ಮೇಲೆ 2026ರ ಮಾ.31ರ ವೇಳೆಗೆ 7130.80 ಕೋಟಿ ರು.ಹೊಣೆಗಾರಿಕೆಯಿದೆ. ಅದರಲ್ಲಿ ನೌಕರರ ಭವಿಷ್ಯ ನಿಧಿ ಬಾಕಿ 2298.20 ಕೋಟಿ ರು. ಮತ್ತು ಇಂಧನ ಪಾವತಿ ಬಾಕಿ 822.26 ಕೋಟಿ ರು.ಸೇರಿದೆ. ಅದರ ಜತೆಗೆ, ಇದೀಗ ಮಧ್ಯಪ್ರಾಚ್ಯದಲ್ಲಿ ಯುದ್ಧದ ವಾತಾವರಣವಿದ್ದ ಕಾರಣದಿಂದಾಗಿ ನಿರಂತರ ಡೀಸೆಲ್‌ ಬೆಲೆ ಹೆಚ್ಚಳದಿಂದ ನಿಗಮಗಳ ಇಂಧನ ವೆಚ್ಚದ ಮೇಲೆ ಪರಿಣಾಮ ಬೀರುವಂತಾಗಿದೆ. ಇದರ ನಡುವೆಯೇ 2025ರ ಏ.1ರಿಂದ ಅನ್ವಯವಾಗುವಂತೆ ನಾಲ್ಕೂ ನಿಗಮಗಳ 1.05 ಲಕ್ಷ ನೌಕರರ ವೇತನವನ್ನು ಶೇ.12.50ರಷ್ಟು ಹೆಚ್ಚಳ ಮಾಡಲಾಗಿದೆ. ಇದರಿಂದ ಮಾಸಿಕ 72.80 ಕೋಟಿ ರು. ಹಾಗೂ ವಾರ್ಷಿಕ 873.64 ಕೋಟಿ ರು.ಹೆಚ್ಚುವರಿ ವೆಚ್ಚವಾಗಲಿದೆ.

ಉಳಿದಂತೆ 2023ರ ಮಾರ್ಚ್‌ 1ರಿಂದ ವೇತನ ಪರಿಷ್ಕರಣೆಯ 26 ತಿಂಗಳ ಹಿಂಬಾಕಿ ಮೊತ್ತ 1271.92 ಕೋಟಿ ರು.ಗಳನ್ನು ಸರ್ಕಾರದ ನೆರವಿನೊಂದಿಗೆ ನೌಕರರಿಗೆ ಪಾವತಿಸಲಾಗುತ್ತಿದೆ ಎಂದು ನಿಗಮಗಳು ಸರ್ಕಾರಕ್ಕೆ ತಿಳಿಸಿವೆ.ಈ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆಯಾಗಿದ್ದು, ತಾಂತ್ರಿಕವಾಗಿ ಎಷ್ಟು ನಷ್ಟ ಆಗಿದೆ ಎಂಬ ಕುರಿತು ಸ್ಪಷ್ಟ ವರದಿ ನೀಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಸಾರಿಗೆ ಇಲಾಖೆಗೆ ಸೂಚಿಸಿದ್ದಾರೆ. ವರದಿಯ ಆಧಾರದ ಮೇಲೆ ಎಷ್ಟು ದರ ಹೆಚ್ಚಳ ಮಾಡಬೇಕು?, ಹೆಚ್ಚಳ ಮಾಡಬೇಕೆ ಅಥವಾ ಬೇಡವೇ ಎಂಬ ಬಗ್ಗೆ ನಿರ್ಧರಿಸಲಿದ್ದಾರೆ ಎಂದು ತಿಳಿದು ಬಂದಿದೆ.ಓಸಿ ಇಲ್ಲದೆ ವಿದ್ಯುತ್‌ಗೆ ಗಡುವು 15ರವರೆಗೆ ವಿಸ್ತಾರಕ್ಕೆ ನಿರ್ಧಾರ:ರಾಜ್ಯದಲ್ಲಿ ಶೇ.20 ರಷ್ಟು ಹೆಚ್ಚುವರಿ ವ್ಯತ್ಯಾಸದೊಂದಿಗೆ 2,400 ಚದರಡಿ ನಿವೇಶನದಲ್ಲಿ ನಿರ್ಮಿಸಿರುವ ವಸತಿ ಕಟ್ಟಡಗಳಿಗೆ ಓಸಿ ಇಲ್ಲದೆ ಶಾಶ್ವತ ವಿದ್ಯುತ್ ಸಂಪರ್ಕ ಪಡೆಯಲು ನೀಡಿದ್ದ ಗಡುವು ಜು.15 ರವರೆಗೆ ವಿಸ್ತರಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.ಇತ್ತೀಚೆಗೆ ನಡೆದ ಸಂಪುಟ ಸಭೆಯಲ್ಲಿ 2026ರ ಮೇ 31ರ ಒಳಗಾಗಿ ಶಾಶ್ವತ ವಿದ್ಯುತ್ ಸಂಪರ್ಕಕ್ಕಾಗಿ ಈಗಾಗಲೇ ಅರ್ಜಿ ಸಲ್ಲಿಸಿರುವ ಪ್ರಕರಣಗಳಿಗೆ ಸೀಮಿತವಾಗಿ ಅವಕಾಶ ನೀಡಲಾಗಿತ್ತು.

ಇದೀಗ ​ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದು ಕಟ್ಟಡ ನಿರ್ಮಿಸಿ ಪೂರ್ಣಗೊಳಿಸಿರುವ ಪ್ರಕರಣ ಹಾಗೂ ​ಯಾವುದೇ ವಿದ್ಯುತ್ ಸಂಪರ್ಕ ಪಡೆಯದೇ ಕಟ್ಟಡ ಕಾಮಗಾರಿ ಪೂರ್ಣಗೊಂಡಿರುವ ಪ್ರಕರಣಗಳಿಗೆ ಅನ್ವಯವಾಗುವಂತೆ ಹೆಚ್ಚುವರಿ ಕಾಲಾವಕಾಶ ನೀಡಲು ನಿರ್ಧರಿಸಲಾಗಿದೆ. 2400 ಚದರ ಅಡಿಗಳವರೆಗೆ ಅಳತೆಯ ನಿವೇಶನಗಳಲ್ಲಿ ಶೇ.20% ಹೆಚ್ಚುವರಿ ವ್ಯತ್ಯಾಸದ ಮಿತಿಯೊಂದಿಗೆ ನಿರ್ಮಿಸಿರುವ ಜಿ+3 (G+3) ಅಂತಸ್ತಿನ ವಸತಿ ಕಟ್ಟಡಗಳು ಅಥವಾ ಸ್ಟಿಲ್ಟ್ ಪಾರ್ಕಿಂಗ್ + 4 ಮಹಡಿಗಳನ್ನು ಹೊಂದಿರುವ ವಸತಿ ಕಟ್ಟಡಗಳಿಗೆ ಮಾತ್ರ ಈ ವಿನಾಯಿತಿ ಅನ್ವಯಿಸುತ್ತದೆ.ವಾಣಿಜ್ಯ ಕಟ್ಟಡಗಳಿಗೆ ಇಲ್ಲ ಅವಕಾಶ:

ರಾಜ್ಯಾದ್ಯಂತ ಶೇ.20 ರಷ್ಟು ಹೆಚ್ಚುವರಿ ವ್ಯತ್ಯಾಸದೊಂದಿಗೆ 2,400 ಚದರಡಿ ವಿಸ್ತೀರ್ಣದಲ್ಲಿ ಕಟ್ಟಿರುವ ವಸತಿ ಕಟ್ಟಡಗಳಿಗೆ ಓಸಿ, ಸಿಸಿ ವಿನಾಯಿತಿ ನೀಡುವ ಅಂತಿಮ ಗಡುವನ್ನು ಆ.15ರ ವರೆಗೆ ವಿಸ್ತರಿಸಲು ತೀರ್ಮಾನಿಸಲಾಗಿದೆ. ಆದರೆ ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ವಾಣಿಜ್ಯ ಕಟ್ಟಡಗಳಿಗೆ ಸಂಪರ್ಕ ನೀಡುವ ಬಗ್ಗೆ ನಾವು ಅವಕಾಶ ನೀಡಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.ಜುಲೈ ಬದಲು ಈ ಬಾರಿ ಆಗಸ್ಟ್‌ನಲ್ಲಿ ಮುಂಗಾರು ಅಧಿವೇಶನಕ್ಕೆ ನಿರ್ಧಾರ:

‘ವಾಡಿಕೆಯಂತೆ ಜುಲೈ ತಿಂಗಳಲ್ಲಿ ನಡೆಯಬೇಕಾಗಿದ್ದ ಮಳೆಗಾಲದ ವಿಧಾನಮಂಡಲ ಅಧಿವೇಶನವನ್ನು ಎಸ್‌ಐಆರ್‌ ಹಿನ್ನೆಲೆಯಲ್ಲಿ ಆಗಸ್ಟ್‌ನಲ್ಲಿ ನಡೆಸಲು ತೀರ್ಮಾನಿಸಲಾಗಿದೆ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಆಗಸ್ಟ್‌ ಮೊದಲ ವಾರ ಅಥವಾ ಎರಡನೇ ವಾರ ಅಧಿವೇಶನದ ದಿನಾಂಕ ನಿಗದಿ ಮಾಡಲಾಗುವುದು. ಬಳಿಕ ದಿನಾಂಕ ಪ್ರಕಟಿಸಲಾಗುವುದು ಎಂದರು. ಗುರುವಾರ ನಡೆದ ಸಚಿವ ಸಂಪುಟ ಸಭೆ ಬಳಿಕ ಮಾತನಾಡಿ, ‘ಜುಲೈ ತಿಂಗಳಲ್ಲಿ ಮುಂಗಾರು ಅಧಿವೇಶನ ಕರೆಯಬೇಕಾಗಿತ್ತು. ಸದ್ಯಕ್ಕೆ ಎಸ್ಐಆರ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ಮುಗಿಯುವವರೆಗೂ ಕಾಯಲು ತೀರ್ಮಾನಿಸಲಾಗಿದೆ’ ಎಂದು ಹೇಳಿದರು.

ಸ್ಪೀಕರ್‌ ಚುನಾವಣೆ ಬಗ್ಗೆಯೂ ಚರ್ಚೆ:ವಿಧಾನಸಭೆ ಸಭಾಧ್ಯಕ್ಷರ ಚುನಾವಣೆ ಬಗ್ಗೆಯೂ ಸಂಪುಟದಲ್ಲಿ ಚರ್ಚೆಯಾಗಿದ್ದು, ಎಸ್‌ಐಆರ್‌ ಬಳಿಕ ದಿನಾಂಕ ನಿಗದಿಪಡಿಸಲು ತೀರ್ಮಾನಿಸಲಾಗಿದೆ.ಎಲ್ಲಾ ಶಾಸಕರು ತಮ್ಮ ಕ್ಷೇತ್ರದ ಮತದಾರರ ರಕ್ಷಣೆ ಮಾಡಿಕೊಳ್ಳಬೇಕಾಗಿದೆ. ಅವರಿಗೆ ತೊಂದರೆ ಆಗುವುದು ಬೇಡ ಎಂದು ತೀರ್ಮಾನಿಸಿದ್ದು, ಜು.29 ರವರೆಗೆ ಮನೆ-ಮನೆಗೆ ಭೇಟಿ ನೀಡಿ ಎಸ್‌ಐಆರ್‌ ಮಾಡಲಿದ್ದಾರೆ. ಆ.5ರಂದು ಕರಡು ಮತದಾರರಪಟ್ಟಿ ಬಿಡುಗಡೆ ಮಾಡಲಿದ್ದು, ಅದಾದ ನಂತರ ಮೊದಲ ಅಥವಾ ಎರಡನೇ ವಾರದಲ್ಲಿ ಅಧಿವೇಶನದ ದಿನಾಂಕ ನಿಗದಿ ಮಾಡಲಾಗುವುದು ಎಂದು ಹೇಳಿದರು.