ಸಾರಾಂಶ
ಮೈಸೂರಿನ ಭೌಗೋಳಿಕ ಬೆಳೆಗಳಾದ ನಂಜನಗೂಡು ರಸಬಾಳೆ, ಮೈಸೂರು ಮಲ್ಲಿಗೆ ಹಾಗೂ ಚಿಗುರೆಲೆಯ ಪುನಶ್ಚೇತನ
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರಿನ ತೋಟಗಾರಿಕೆ ಮಹಾವಿದ್ಯಾಲಯ ವತಿಯಿಂದ ನಂಜನಗೂಡು ರಸಬಾಳೆ ಬೆಳೆಯ ಪುನಶ್ಚೇತನ, ಪ್ರದೇಶ ವಿಸ್ತರಣೆ ಹಾಗೂ ರೈತರಿಗೆ ಆತ್ಮಸೆರ್ಯ ತುಂಬುವ ಉದ್ದೇಶದಿಂದ ಕ್ಷೇತ್ರೋತ್ಸವವನ್ನು ನಂಜನಗೂಡಿನ ದೇವರಸನಹಳ್ಳಿ ಪಕ್ಕದ ಮಾಡ್ರಹಳ್ಳಿ ಗ್ರಾಮದ ದೊಡ್ಡಗಂಡಯ್ಯ ಅವರ ತೋಟದಲ್ಲಿ ಆಯೋಜಿಸಲಾಗಿತ್ತು.ಈ ಕಾರ್ಯಕ್ರಮ ಉದ್ಘಾಟಿಸಿದ ತೋಟಗಾರಿಕೆ ವಿವಿ ಕುಲಪತಿ ಡಾ. ವಿಷ್ಣುವರ್ಧನ ಮಾತನಾಡಿ, ಈ ಕಾರ್ಯಕ್ರಮವು ರೈತರಿಗೆ ಆತ್ಮಸೆರ್ಯ ತುಂಬಲು ಮೊದಲ ಹೆಜ್ಜೆಯಾಗಿದೆ ಎಂದು ತಿಳಿಸಿದರು.ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಎಚ್.ಎಂ. ನಾಗರಾಜ್ ಮಾತನಾಡಿ, ಮೈಸೂರಿನ ಭೌಗೋಳಿಕ ಬೆಳೆಗಳಾದ ನಂಜನಗೂಡು ರಸಬಾಳೆ, ಮೈಸೂರು ಮಲ್ಲಿಗೆ ಹಾಗೂ ಚಿಗುರೆಲೆಯ ಪುನಶ್ಚೇತನಕ್ಕಾಗಿ ಕರ್ನಾಟಕ ಸರ್ಕಾರ ಹಾಗೂ ತೋಟಗಾರಿಕೆ ಇಲಾಖೆ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದರು.ನಂಜನಗೂಡು ರಸಬಾಳೆ ಬೆಳೆಯ ಬಗ್ಗೆ ತಾಂತ್ರಿಕ ಮಾಹಿತಿಯನ್ನು ವಿಜ್ಞಾನಿಗಳಾದ ಡಾ.ಜಿ.ಎಸ್.ಕೆ. ಸ್ವಾಮಿ, ಡಾ.ಜಿ. ಮಂಜುನಾಥ್, ಡಾ.ಜಿ.ಪಿ. ಮುತ್ತುರಾಜು, ಡಾ.ಎಚ್.ಬಿ. ರಶ್ಮಿ, ಡಾ. ತನ್ವೀರ್ ಅಹ್ಮದ್ ಅವರು ರೈತರಿಗೆ ತಿಳಿಸಿಕೊಟ್ಟರು. ಪ್ರಾಯೋಗಿಕ ಮಾಹಿತಿಯನ್ನು ರೈತರಿಗೆ ನೀಡಲು ನಂಜನಗೂಡು ರಸಬಾಳೆ ಬೆಳೆಗೆ ಸಂಬಂಧಿಸಿದ ವಿವಿಧ ಪ್ರಾತ್ಯಕ್ಷಿಕೆ ಹಾಗೂ ಅಗತ್ಯ ಪರಿಕರಗಳ ವಸ್ತು ಪ್ರದರ್ಶನವನ್ನು ಸಹ ಹಮ್ಮಿಕೊಳ್ಳಲಾಯಿತು.ಮೊದಲ ಬಾರಿಗೆ ಅಂಗಾಂಶ ಕೃಷಿಯಿಂದ ತಯಾರಿಸಿದ ನಂಜನಗೂಡು ರಸಬಾಳೆ ಸಸಿಯನ್ನು ಉಪಯೋಗಿಸಿ ಹಾಗೂ ತೋಟಗಾರಿಕೆ ಮಹಾವಿದ್ಯಾಲಯ ವಿಜ್ಞಾನಿಗಳ ತಂತ್ರಜ್ಞಾನ ಹಾಗೂ ಮಾರ್ಗದರ್ಶನ ಅನುಸರಿಸಿ ರೋಗಮುಕ್ತವಾಗಿ ಯಶಸ್ವಿಯಾಗಿ ಬೆಳೆಯಲಾದ ಪ್ರಯುಕ್ತ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನಂಜನಗೂಡಿನ ಮಾಡ್ರಹಳ್ಳಿ, ದೇವರಸನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮದ 75 ರೈತರು ಪಾಲ್ಗೊಂಡು, ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಎಚ್.ಪಿ. ಮಹೇಶ್ವರಪ್ಪ, ಸುತ್ತೂರು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಬಿ.ಎನ್. ಜ್ಞಾನೇಶ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸಿ. ಚಂದ್ರು, ಸಹ ಪ್ರಾಧ್ಯಾಪಕಿ ಡಾ.ಕೆ.ಪಿ. ಮಂಗಳ ಇದ್ದರು.