ಆಧುನಿಕ ಕೃಷಿ ಉಪಕರಣಕ್ಕೆ ಮಾರುಕಟ್ಟೆ ಸೃಷ್ಟಿಸಿದ ಮೇಳ

| Published : Sep 24 2024, 01:48 AM IST

ಆಧುನಿಕ ಕೃಷಿ ಉಪಕರಣಕ್ಕೆ ಮಾರುಕಟ್ಟೆ ಸೃಷ್ಟಿಸಿದ ಮೇಳ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರದರ್ಶನದಲ್ಲಿ ನಡಕಟ್ಟಿನ ಕೂರಿಗೆಯ ಮಳಿಗೆ ಹೆಚ್ಚಿನ ಆಕರ್ಷಣೆ ಹೊಂದಿದ್ದು, ಹೆಚ್ಚು ಹೊತ್ತು ನಿಂತು ಉಪಕರಣಗಳ ಕುರಿತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಅಬ್ದುಲ್‌ ಖಾದರ ಅವರ ಬಳಿ ಮಾಹಿತಿ ಪಡೆಯುತ್ತಿದ್ದರು.

ಶಿವಾನಂದ ಅಂಗಡಿ

ಧಾರವಾಡ:

ಕೃಷಿ ವಿವಿಯಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಆಧುನಿಕ ಕೃಷಿ ಉಪಕರಣಗಳ ಮಾರುಕಟ್ಟೆಯೇ ಸೃಷ್ಟಿಯಾಗಿದ್ದು, ಉಪಕರಣಗಳ ಕಂಪನಿಗಳು ರೈತರಿಗೆ ವಿವಿಧ ಕೊಡುಗೆಗಳ ಜತೆಗೆ ಸಬ್ಸಿಡಿ ಅವಕಾಶ ಕಲ್ಪಿಸಿ ಕೋಟಿ ಗಟ್ಟಲೇ ವ್ಯಾಪಾರ-ವಹಿವಾಟು ನಡೆಸಿವೆ.

ಹೌದು, ಪ್ರತಿ ವರ್ಷ ರೈತರಿಗಾಗಿ ಆಯೋಜಿಸುವ ಕೃಷಿ ಮೇಳ ವರ್ಷದಿಂದ ವರ್ಷಕ್ಕೆ ಲಕ್ಷೋಪ ಲಕ್ಷ ರೈತರನ್ನು ಆಕರ್ಷಿಸುತ್ತಿದ್ದು, ಇದರ ಲಾಭ ಪಡೆಯಲು ಹೆಚ್ಚು ಹೆಚ್ಚು ಕಂಪನಿಗಳು ಮೇಳದ ಪ್ರದರ್ಶನ ಮತ್ತು ಮಾರಾಟಕ್ಕೆ ಆಗಮಿಸುತ್ತಿವೆ.

ಮೇಳದಲ್ಲಿ ಕೃಷಿ ವಿವಿಯಿಂದಲೇ 512 ಹೆಚ್ಚು ಮಾರಾಟ ಮತ್ತು ಪ್ರದರ್ಶನ ಮಳಿಗೆ ಸ್ಥಾಪಿಸಲಾಗಿದೆ. ಜಾನುವಾರು ಪ್ರದರ್ಶನ, ಪಶುವೈದ್ಯಕೀಯ ಮತ್ತು ಆಹಾರ, ಹೈಟಿಕ್‌, ಕೃಷಿ ಉಪಕರಣ ಮಾರಾಟ ಹಾಗೂ ಟ್ರ್ಯಾಕ್ಟರ್‌ ಮಾರಾಟ ಸೇರಿದಂತೆ ಪ್ರದರ್ಶನ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಮೊದಲ ದಿನ ಶನಿವಾರ 1.85ರಿಂದ 2 ಲಕ್ಷ, ಭಾನುವಾರ 6 ಲಕ್ಷಕ್ಕೂ ಅಧಿಕ, ಸೋಮವಾರ 4 ಲಕ್ಷಕ್ಕೂ ಹೆಚ್ಚು ರೈತರು ಕೃಷಿ ಮೇಳಕ್ಕೆ ಭೇಟಿ ನೀಡಿದ್ದಾರೆ. ಬಾಗಲಕೋಟೆ, ಗದಗ, ಹಾವೇರಿ, ಉತ್ತರ ಕನ್ನಡದ ಮುಂಡಗೋಡ, ಧಾರವಾಡದ ಅಕ್ಕಪಕ್ಕದ ತಾಲೂಕು, ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಸೋಮವಾರ ಜನರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿದ್ದರು. ಬಿತ್ತುವ ಕೂರಿಗೆ, ರೋಟವೇಟರ್‌, ಗಾಲಿ ಕುಂಟಿ, ನೇಗಿಲು, ದಿಂಡಿನ ಕುಂಟಿ, ಬಂಡ ಫಾರಂ, ಟ್ರ್ಯಾಕ್ಟರ್‌ ಟ್ರೇಲರ್‌, ಟ್ರ್ಯಾಕ್ಟರ್‌ ಎಂಜಿನ್‌ ಹೀಗೆ ವಿವಿಧ ಬಗೆಯ ಕೃಷಿ ಉಪಕರಣಗಳು, ಅಣ್ಣಿಗೇರಿಯ ಬಿಸ್ಮಿಲ್ಲಾ ಅಗ್ರೋ ಇಂಡಸ್ಟ್ರೀಜ್‌, ನಡಕಟ್ಟಿನ ಕೂರಿಗೆ, ಶ್ರೀನಿವಾಸ ಜನರಲ್‌ ಎಂಜಿನಿಯರಿಂಗ್‌ ವರ್ಕ್ಸ್, ಸಾಯಿ ಅಗ್ರೋ ಇಂಡಸ್ಟ್ರೀಜ್‌, ಭಾರತ ಅಗ್ರೋ ಎಂಜಿನಿಯರಿಂಗ್‌ ವರ್ಕ್ಸ್‌, ಮದಿನಾ ವೆಲ್ಡಿಂಗ್‌ ವರ್ಕ್ಸ್‌ ಸೇರಿದಂತೆ ನಾನಾ ಕಂಪನಿಗಳು ಮೇಳದಲ್ಲಿ ಮಳಿಗೆಗಳನ್ನು ತೆರೆದಿವೆ.

ನಡಕಟ್ಟಿನ ಕೂರಿಗೆ ಆಕರ್ಷಣೆ

ಮಿತಿ ಮೀರಿದ ಜನಸಾಗರದಿಂದಾಗಿ ವಿವಿಧ ಮಳಿಗೆಗಳಲ್ಲಿ ಅದರ ಸಿಬ್ಬಂದಿ ಸೇರಿದಂತೆ ಮಾಲೀಕರು ಮಾಹಿತಿ ನೀಡಿ ಸಾಕಾಗಿದೆ ಎಂದು ಗೊಣಗುತ್ತಿರುವುದು ಕಂಡು ಬಂತು. ಪ್ರದರ್ಶನದಲ್ಲಿ ನಡಕಟ್ಟಿನ ಕೂರಿಗೆಯ ಮಳಿಗೆ ಹೆಚ್ಚಿನ ಆಕರ್ಷಣೆ ಹೊಂದಿದ್ದು, ಹೆಚ್ಚು ಹೊತ್ತು ನಿಂತು ಉಪಕರಣಗಳ ಕುರಿತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಅಬ್ದುಲ್‌ ಖಾದರ ಅವರ ಬಳಿ ಮಾಹಿತಿ ಪಡೆಯುತ್ತಿದ್ದರು. ಇವರ ಮಳಿಗೆಯಲ್ಲಿ ಮೂರು ದಿನಗಳಲ್ಲಿ ನೇಗಿಲು, ರೋಟವೇಟರ್‌, ಗಾಲಿ ಕುಂಟಿ ಹೀಗೆ ತರಹೇವಾರಿ ಉಪಕರಣಗಳು ಪ್ರತಿಯೊಂದು ನೂರರ ಪ್ರಮಾಣದಲ್ಲಿ ಬುಕ್‌ ಆಗಿವೆ. ಇದೇ ರೀತಿ ಬೇರೆ ಬೇರೆ ಕಂಪನಿ ಮಾರಾಟಗಾರರು ವ್ಯಾಪಾರ ಲಕ್ಷೋಪಲಕ್ಷ ರು. ವಹಿವಾಟು ನಡೆಸಿದ್ದಾರೆ ಎಂದು ವಿವರಿಸುತ್ತಾರೆ ಡಾ. ಅಬ್ದುಲ್‌ ಖಾದರ.

ಇಂಥ ನೂರಾರು ಮಳಿಗೆಗಳು ಮೇಳದಲ್ಲಿ ಸಾಕಷ್ಟು ರೈತರನ್ನು ಆಕರ್ಷಿಸಿವೆ. ರೈತರು ಒಂದೇ ಸೂರಿನಡಿ ತಮಗೆ ಬೇಕಾದ ಕೃಷಿ ಉಪಕರಣಗಳನ್ನು ಕಡಿಮೆ ದರ, ಸಬ್ಸಿಡಿ, ಗುಣಮಟ್ಟ ಪರೀಕ್ಷಿಸಿ ಖರೀದಿಗೆ ಬುಕ್‌ ಮಾಡಿದ್ದಾರೆ. ಹೀಗಾಗಿ ಮೇಳದ ಪ್ರದರ್ಶನ ಮತ್ತು ಮಾರಾಟ ಕೃಷಿ ಕ್ಷೇತ್ರದ ಕಾರ್ಯಗಳನ್ನು ಸುಗಮಗೊಳಿಸಿವೆ.

ಧಾರವಾಡದಲ್ಲಿ ಭಾನುವಾರ ಸುರಿದ ಮಳಿಯಿಂದ ಮೇಳದ ಮಳಿಗೆಗಳ ಆವರಣವೆಲ್ಲಾ ರಾಡಿಮಯ ಆಗಿದ್ದು, ಸೋಮವಾರ ಕೆಲ ಮಳಿಗೆಗಳಿಗಳಲ್ಲಿ ರಾಡಿ ತುಳಿಯುತ್ತಲೇ ರೈತರು ಸಂಚರಿಸುತ್ತಿರುವುದು ಕಂಡು ಬಂತು. ಮೇಲಾಗಿ ಮಳೆಯಿಂದಾಗಿ ಝಳದ ಪ್ರಮಾಣ ಸಹ ಹೆಚ್ಚಾಗಿದ್ದು, ರಸ್ತೆ ಪಕ್ಕದ ಗಿಡಮರಗಳ ನೆರಳಿನಲ್ಲಿ ಬಹುತೇಕರು ವಿಶ್ರಾಂತಿ ಪಡೆದರು.ಕೃಷಿ ಮೇಳದಲ್ಲಿ ರೈತರು ಪಾಲ್ಗೊಂಡು ಆಧುನಿಕ ಕೃಷಿಗೆ ಬೇಕಾದ ಮಾಹಿತಿ ಪಡೆಯಬೇಕು. ಜತೆಗೆ ಇಲ್ಲಿನ ಮಳಿಗೆಗಳಲ್ಲಿ ಕೃಷಿ ಉಪಕರಣ ಖರೀದಿಸಿ ಕೃಷಿ ಕ್ಷೇತ್ರವನ್ನು ಮೇಲ್ದರ್ಜೇಗೆ ಏರಿಸಿ ಆರ್ಥಿಕವಾಗಿ ಸಬಲರಾಗಲು ಅನುಕೂಲವಾಗುತ್ತವೆ ಎನ್ನುತ್ತಾರೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಕೃಷಿ ಸಂಶೋಧಕ ಡಾ. ಅಬ್ದುಲ್‌ ಖಾದರ ಐ. ನಡಕಟ್ಟಿನ.ಐದಾರು ವರ್ಷಗಳಿಂದ ಧಾರವಾಡ ಕೃಷಿ ಮೇಳಕ್ಕೆ ಬರುತ್ತಿದ್ದೇನೆ. ಊರಲ್ಲಿ ನಾವು ಅಡಕೆ ಮತ್ತು ತೆಂಗು ಕೃಷಿ ಮಾಡುತ್ತಿದ್ದು, ಇವುಗಳನ್ನು ಇಳಿಸುವ ಕುಡುಗೋಲನ್ನು ಮೇಳದಲ್ಲಿ ಖರೀದಿಸಿದ್ದೇನೆ. ಮೇಳಕ್ಕೆ ಆಗಮಿಸಿರುವ ಆಧುನಿಕ ಕೃಷಿ ಉಪಕರಣಗಳು ಒಕ್ಕಲುತನಕ್ಕೆ ವರದಾನವಾಗಿವೆ ಎಂದು ರಟ್ಟೀಹಳ್ಳಿ ರೈತ ಜಾತನಗೌಡ ಕರೇಗೌಡ ಯಡಚಿ ಹೇಳಿದರು.